ಶನಿವಾರ, ಜನವರಿ 16, 2021
21 °C
ವಿಭಜನೆ ವಿರುದ್ಧ ನಿಂತ ಅಖಂಡ ಬಳ್ಳಾರಿ ಹೋರಾಟ ಸಮಿತಿ

ಬಳ್ಳಾರಿಗಷ್ಟೇ ಪ್ರತಿಭಟನೆ ಸೀಮಿತ, ಬಂದ್‌ ನೀರಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಖಂಡ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿಯ ಮುಖಂಡರು ಬಂದ್‌ ಪ್ರಯುಕ್ತ ಬಳ್ಳಾರಿಯ ಗಡಿಗಿ ಚೆನ್ನಪ್ಪ ವೃತ್ತದಲ್ಲಿ ಗುರುವಾರ ಕತ್ತೆಗಳೊಂದಿಗೆ ಧರಣಿ ನಡಸಿದರು.

ಬಳ್ಳಾರಿ: ಜಿಲ್ಲೆಯ ವಿಭಜನೆಯನ್ನು ವಿರೋಧಿಸಿ ಅಖಂಡ ಬಳ್ಳಾರಿ ಹೋರಾಟ ಸಮಿತಿಯು ಕರೆ ನೀಡಿರುವ ಗುರುವಾರದ ಬಳ್ಳಾರಿ ಬಂದ್‌ಗೆ ಜಿಲ್ಲಾ ಕೇಂದ್ರದಲ್ಲೂ ನಿರೀಕ್ಷಿತ ಪ್ರತಿಕ್ರಿಯೆ ದೊರಕಿಲ್ಲ.

ಬಂದ್‌ ಪ್ರಯುಕ್ತ, ತುಂತುರು ಮಳೆ ಮತ್ತು ಮೋಡ ಕವಿದ ವಾತಾವರಣದ ನಡುವೆ ಬೆಳಿಗ್ಗೆಯಿಂದಲೇ ಬಳ್ಳಾರಿ ನಗರದಲ್ಲಿ ನಿರಂತರವಾಗಿ ಪ್ರತಿಭಟನೆಗಳು ನಡೆದಿವೆ. ಆದರೆ ವಿವಿಧ ಸಂಘಟನೆಗಳ ಮುಖಂಡರಷ್ಟೇ ಪಾಲ್ಗೊಂಡಿದ್ದು ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರು ಕಂಡುಬರಲಿಲ್ಲ. ವಿವಿಧ ತಾಲ್ಲೂಕುಗಳಲ್ಲೂ ಬಂದ್‌ಗೆ ಬೆಂಬಲ ದೊರಕಿಲ್ಲ. ಸಾರ್ವಜನಿಕ ಸಾರಿಗೆ ಬಸ್‌ಗಳು, ಆಟೋರಿಕ್ಷಾಗಳು ಸೇರಿದಂತೆ ಎಲ್ಲ ಬಗೆಯ ವಾಹನಗಳು ಬೆಳಿಗ್ಗೆಯಿಂದಲೇ ಎಂದಿನಂತೆ ಸಂಚರಿಸಿದವು.

ನಗರದ ಹಳೇ ಬಸ್‌ ನಿಲ್ದಾಣ, ಹೊಸ ಬಸ್‌ ನಿಲ್ದಾಣದಲ್ಲಿ ಬಸ್‌ಗಳು ಎಂದಿನಂತೆ ಸಮಯಕ್ಕೆ ಸರಿಯಾಗಿ ಹಾಜರಾದವು. ಪ್ರಯಾಣಿಕರು ಯಾವುದೇ ತೊಂದರೆ ಇಲ್ಲದೆ ಪ್ರಯಾಣ ಆರಂಭಿಸಿದರು. ವಿವಿಧ ವೃತ್ತಗಳಲ್ಲಿ ಆಟೋರಿಕ್ಷಾ ಚಾಲಕರು ಕೂಡ ಪ್ರಯಾಣಿಕರಿಗಾಗಿ ಕಾಯುತ್ತಿದ್ದರು.


ಬಂದ್‌ ಪ್ರತಿಭಟನೆ ನಡುವೆಯೂ ಬಸ್‌ ಮತ್ತು ಆಟೋರಿಕ್ಷಾಗಳು ಬಳ್ಳಾರಿಯಲ್ಲಿ ಎಂದಿನಂತೆ ಸಂಚರಿಸಿದವು

ಬೆಳಗಿನ ಜಾವದಿಂದಲೇ ಸುರಿಯುತ್ತಿರುವ ತುಂತುರು ಮಳೆಯ ನಡುವೆ ವಿವಿಧ ಸಂಘಟನೆಗಳ ಮುಖಂಡರು ಬೆಳಕಾಗುವ ಮುನ್ನವೇ ಗಡಿಗಿ ಚೆನ್ನಪ್ಪ ವೃತ್ತದಲ್ಲಿ ಟೈರ್‌ ಸುಟ್ಟು ಪ್ರತಿಭಟಿಸಿದರು. ನಂತರ ಅದೇ ವೃತ್ತದಲ್ಲಿ ಎರಡು ಕತ್ತೆಗಳನ್ನು ತಂದು ಧರಣಿ ನಡೆಸಿದರು. ರಾಜ್ಯ ಸರ್ಕಾರ ಮತ್ತು ಉಸ್ತುವಾರಿ ಸಚಿವ ಆನಂದ್‌ಸಿಂಗ್‌ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಂದ್‌ ಪ್ರಯುಕ್ತ ಪೊಲೀಸ್‌ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು ನಗರ ವಿವಿಧೆಡೆ ಪೊಲೀಸರನ್ನು ನಿಯೋಜಿಸಲಾಗಿತ್ತು.

ವಿವಿಧ ಸಂಘಟನೆಗಳ ಮುಖಂಡರಾದ ಕುಡುತಿನಿ ಶ್ರೀನಿವಾಸ್, ಕೆ.ಎರ್ರಿಸ್ವಾಮಿ, ದರೂರು ಪುರುಷೋತ್ತಮಗೌಡ, ಸಿದ್ಮಲ್‌ ಮಂಜುನಾಥ್‌, ಕಾಂಗ್ರೆಸ್‌ನ ಬಿ.ಎಂ.ಪಾಟೀಲ್‌, ಜೆಡಿಎಸ್‌ನ ವಿಜಯಕುಮಾರ್‌ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.


ಬಳ್ಳಾರಿಯ ಗಡಿಗಿ ಚೆನ್ನಪ್ಪ ವೃತ್ತದಲ್ಲಿ ಪ್ರಯಾಣಿಕರಿಗಾಗಿ ಕಾಯುತ್ತಿದ್ದ ಆಟೋರಿಕ್ಷಾಗಳು

ಜಿಲ್ಲೆಯ ಹೊಸಪೇಟೆ, ಸಂಡೂರು, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಹಡಗಲಿ ಸೇರಿದಂತೆ ಬಹುತೇಕ ತಾಲ್ಲೂಕುಗಳಲ್ಲೂ ಬಂದ್‌ಗೆ ನೀರಸ ಪ್ರತಿಕ್ರಿಯೆ ದೊರಕಿದೆ.

ವಿಜಯನಗರ ಜಿಲ್ಲೆಗೆ ಸೇರ್ಪಡೆಯಾಗಬಹುದಾದ ಪಶ್ಚಿಮ ತಾಲ್ಲೂಕುಗಳು ವಿಭಜನೆಯ ಪರವಾಗಿ ಇರುವುದರಿಂದ ಆ ಭಾಗದಲ್ಲಿ ಎಂದಿನಂತೆ ಜನಜೀವನ ನಡೆದಿತ್ತು. ಯಾವುದೇ ಪ್ರತಿಭಟನೆ ನಡೆಯಲಿಲ್ಲ. ಬಂದ್‌ಗೆ ಕರೆ ನೀಡಿರುವ ಸಮಿತಿಯು ಕೂಡ ಈ ತಾಲ್ಲೂಕುಗಳಲ್ಲಿ ಬೆಂಬಲ ಕೋರಿರಲಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು