ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ: ಬಿಐಟಿಎಂ, ಎಸ್‌.ಜಿ. ಕಾಲೇಜ್ ಸೀಲ್‌ಡೌನ್‌, ಹೆಚ್ಚುತ್ತಿರುವ ಕೋವಿಡ್

Last Updated 14 ಜನವರಿ 2022, 13:06 IST
ಅಕ್ಷರ ಗಾತ್ರ

ಬಳ್ಳಾರಿ: ಕೋವಿಡ್‌ ಸೋಂಕು ಸಮುದಾಯಕ್ಕೆ ಹರಡದಂತೆ ತಡೆಯುವ ಉದ್ದೇಶದಿಂದ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳ ನಡುವೆಯೇ ದಿನದಿಂದ ದಿನಕ್ಕೆ ಏರುತ್ತಿರುವ ಪ್ರಕರಣಗಳ ಸಂಖ್ಯೆ ತೀವ್ರ ಆತಂಕ ಸೃಷ್ಟಿಸಿದ್ದು, ಜಿಲ್ಲಾಧಿಕಾರಿ ಕಚೇರಿಯಲ್ಲೇ 13 ಸಿಬ್ಬಂದಿಗೆ ಪಾಸಿಟಿವ್‌ ಇರುವುದು ದೃಢಪಟ್ಟಿದೆ. ಬಿಐಟಿಎಂ, ಎಸ್‌.ಜಿ ಕಾಲೇಜಿನ ಕೆಲ ವಿದ್ಯಾರ್ಥಿಗಳಿಗೂ ಸೋಂಕು ತಗುಲಿದ್ದು, ಎರಡೂ ಕ್ಯಾಂಪಸ್‌ಗಳನ್ನು ಸೀಲ್‌ಡೌನ್‌ ಮಾಡಲಾಗಿದೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ 13 ಸಿಬ್ಬಂದಿಯಲ್ಲಿ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಇಡೀ ಕಚೇರಿಯನ್ನು ಸ್ಯಾನಿಟೈಸ್‌ ಮಾಡಲಾಗಿದೆ. ಇವರ ಸಂಪರ್ಕಕ್ಕೆ ಬಂದಿದ್ದ ಎಲ್ಲರೂ ಕೋವಿಡ್‌–19 ಪರೀಕ್ಷೆಗೆ ಒಳಗಾಗಿದ್ದಾರೆ. ಬಳ್ಳಾರಿ ತಂತ್ರಜ್ಞಾನ ಹಾಗೂ ಮ್ಯಾನೇಜ್‌ಮೆಂಟ್‌ ಸಂಸ್ಥೆಯ (ಬಿಐಟಿ&ಎಂ) 10 ಮಂದಿಗೆ ಕೋವಿಡ್‌ ಪಾಸಿಟಿವ್‌ ಇರುವುದು ದೃಢಪಟ್ಟ ಬಳಿಕ ಕಾಲೇಜು ಬಂದ್‌ ಮಾಡಲಾಗಿದೆ.

ಇದಲ್ಲದೆ, ಎಸ್‌.ಜಿ ಕಾಲೇಜಿನ ಕೆಲವು ವಿದ್ಯಾರ್ಥಿಗಳಿಗೂ ಕೋವಿಡ್ ಸೋಂಕು ತಗುಲಿರುವುದರಿಂದ ಕ್ಯಾಂಪಸ್‌ ಅನ್ನು ಈ ತಿಂಗಳ 23ರವರೆಗೆ ಮುಚ್ಚಿ ಜಿಲ್ಲಾಧಿಕಾರಿ ಪವನ್‌ ಕುಮಾರ್ ಮಾಲಪಾಟಿ ಆದೇಶಿಸಿದ್ದಾರೆ. ಈ ಕ್ಯಾಂಪಸ್‌ನಲ್ಲಿ ಕಾನೂನು ಕಾಲೇಜ್‌, ಬಿ.ಇಡಿ ಕಾಲೇಜು, ವಿದ್ಯಾರ್ಥಿನಿಯರ ಹಾಸ್ಟೆಲ್‌ ಹಾಗೂ ಎಂಜಿನಿಯರಿಂಗ್‌ ಹಾಸ್ಟೆಲ್‌ಗಳಿದ್ದು, ಎಲ್ಲವನ್ನೂ ತಕ್ಷಣದಿಂದಲೇ ಬಂದ್‌ ಮಾಡಲಾಗಿದೆ.

ಡಿಸೆಂಬರ್ 31ರವೇಳೆಗೆ ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿನ ಪ್ರಮಾಣ ಶೇ 0.14ರಷ್ಟಿತ್ತು. ಬುಧವಾರ (ಡಿ.12) ಇದು ಶೇ.9ಕ್ಕೆ ಏರಿಕೆ ಆಗಿದೆ. ಮುಂದಿನ ದಿನಗಳಲ್ಲಿ ಕೋವಿಡ್‌ ಸೋಂಕು ಇನ್ನಷ್ಟು ತೀವ್ರ ಗತಿಯಲ್ಲಿ ಹರಡುವ ಸಾಧ್ಯತೆ ಇರುವುದರಿಂದ ಇನ್ನೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

10 ಪಾಸಿಟಿವ್‌ ಪ್ರಕರಣ

ಬಿಐಟಿಎಂ ಕಾಲೇಜಿನ 10 ವಿದ್ಯಾರ್ಥಿಗಳಿಗೆ ಕೋವಿಡ್‌ ಸೋಂಕಿರುವುದು ಖಚಿತವಾಗಿದೆ. ಸುಮಾರು 600 ವಿದ್ಯಾರ್ಥಿಗಳನ್ನು ಕೋವಿಡ್‌ ಪಾಸಿಟಿವ್‌ ಪರೀಕ್ಷೆಗೆ ಒಳಪಡಿಸಲಾಗಿತ್ತು ಎಂದು ಕಾಲೇಜಿನ ಉಪ ನಿರ್ದೇಶಕ ಪೃಥ್ವಿರಾಜ್‌ ಸ್ಪಷ್ಟಪಡಿಸಿದ್ದಾರೆ.

ಎಸ್‌.ಜಿ ಕಾಲೇಜಿನಲ್ಲಿ ಏಳು ವಿದ್ಯಾರ್ಥಿಗಳು ಹಾಗೂ ಒಬ್ಬರು ಉಪನ್ಯಾಸಕರಿಗೆ ಪಾಸಿಟಿವ್‌ ದೃಢಪಟ್ಟಿದೆ. ಶನಿವಾರ ವಿದ್ಯಾರ್ಥಿಯೊಬ್ಬನಿಗೆ ಅನಾರೋಗ್ಯವಿತ್ತು. ಅವರನ್ನು ಮನೆಗೆ ಕಳಿಸಲಾಗಿತ್ತು. ಪರೀಕ್ಷೆ ಬಳಿಕ ಕೋವಿಡ್‌ ಖಚಿತವಾಗಿತ್ತು. ಪೋಷಕರು ಬುಧವಾರ ಕಾಲೇಜಿಗೆ ಈ ವಿಷಯ ತಿಳಿಸಿದ ಬಳಿಕ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಗಿತ್ತು ಎಂದು ಪ್ರಿನ್ಸಿಪಾಲ್‌ ಬಿ. ಪಂಚಾಕ್ಷರಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT