ಗುರುವಾರ , ಜನವರಿ 23, 2020
28 °C

ಶಾಸಕ ಆನಂದ್‌ ಸಿಂಗ್‌ಗೆ ಸವಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ: ‘ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಹೋರಾಟ ನಡೆಸುತ್ತಿರುವವರನ್ನು ಕಿಡಿಗೇಡಿಗಳು ಎಂದು ಶಾಸಕ ಆನಂದ್‌ ಸಿಂಗ್‌ ನಾಲ್ಕು ಗೋಡೆಗಳ ಮಧ್ಯೆ ಕುಳಿತುಕೊಂಡು ಹೇಳಿದ್ದಾರೆ. ಅವರಿಗೆ ನಿಜವಾಗಿಯೂ ಧೈರ್ಯವಿದ್ದರೆ ನಗರದ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ನಿಂತು ಹೇಳಲಿ’ ಎಂದು ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಅಧ್ಯಕ್ಷ ಮರಡಿ ಜಂಬಯ್ಯ ನಾಯಕ ಸವಾಲೆಸೆದರು.

‌ಸಂವಿಧಾನ ರಕ್ಷಣಾ ಸಮಿತಿಯಿಂದ ಭಾನುವಾರ ನಗರದಲ್ಲಿ ಹಮ್ಮಿಕೊಂಡಿದ್ದ ಪೌರತ್ವ ಕಾಯ್ದೆ ವಿರೋಧಿ ಸಭೆಯಲ್ಲಿ ಮಾತನಾಡಿ, ‘ಯಾರೋ ಕಿಡಿಗೇಡಿಗಳು ಮುಸ್ಲಿಮರನ್ನು ದಾರಿ ತಪ್ಪಿಸಿ ಅವರನ್ನು ಎತ್ತಿ ಕಟ್ಟುತ್ತಿದ್ದಾರೆ ಎಂದು ಹೇಳಿ ಸಿಂಗ್‌ ಹೋರಾಟಗಾರರಿಗೆ ಅಪಮಾನ ಮಾಡಿದ್ದಾರೆ. ನಾಲ್ಕು ಸಲ ಗೆದ್ದು ಶಾಸಕರಾದರೂ ಒಮ್ಮೆಯೂ ಜನರ ಸಮಸ್ಯೆಗಳ ಕುರಿತಂತೆ ವಿಧಾನಸೌಧದಲ್ಲಿ ಮಾತನಾಡಿಲ್ಲ. ಇವರಿಗೆ ಹೋರಾಟಗಾರರ ಬಗ್ಗೆ ಮಾತನಾಡುವ ನೈತಿಕತೆ ಎಲ್ಲಿದೆ’ ಎಂದು ಪ್ರಶ್ನಿಸಿದರು.

‘ಸಿಂಗ್‌ ವಿರುದ್ಧ ಕೋರ್ಟ್‌ನಲ್ಲಿ ಹಲವು ಕ್ರಿಮಿನಲ್‌ ಕೇಸ್‌ಗಳಿವೆ. ಅದಕ್ಕಾಗಿ ಅವರು ಬಿಜೆಪಿ ಸೇರಿದ್ದಾರೆ. 11 ತಿಂಗಳು ಬೆಂಗಳೂರಿನಲ್ಲಿದ್ದು, ಕೋರ್ಟ್‌ಗೆ ಅಲೆಯುವುದೇ ಅವರ ಕೆಲಸ. ಒಂದು ತಿಂಗಳು ಹೊಸಪೇಟೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಮುಸ್ಲಿಮರು, ವಾಲ್ಮೀಕಿ ನಾಯಕರ ಬಳಿ ಹೋಗಿ ಸಹೋದರರು ಎಂದು ನಾಟಕವಾಡುತ್ತಾರೆ. ಮತ್ತೊಂದು ಕಡೆ ಅವರನ್ನೇ ಕಿಡಿಗೇಡಿಗಳು ಎಂದು ಜರಿಯುತ್ತಾರೆ’ ಎಂದು ತರಾಟೆಗೆ ತೆಗೆದುಕೊಂಡರು.

‘ಶ್ರೀರಾಮುಲು ಉಪಮುಖ್ಯಮಂತ್ರಿ ಆಗದೇ ಇರುವುದು, ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಿಗದಿರಲು ಆನಂದ್‌ ಸಿಂಗ್‌ ಮುಖ್ಯ ಕಾರಣ. ವೈಯಕ್ತಿಕವಾಗಿ ತಾನು ಬೆಳೆಯಬೇಕೆಂದು ರಾಮುಲು ಬೆನ್ನಿಗೆ ಚೂರಿ ಹಾಕಿದ್ದಾರೆ. ಈಗ ಹೋರಾಟಗಾರರನ್ನು ಕಿಡಿಗೇಡಿಗಳು ಎನ್ನುತ್ತಿದ್ದಾರೆ. ನಮ್ಮಿಂದ ತಪ್ಪು ಮಾಡಿಸಿ ಹೋರಾಟ ದಿಕ್ಕು ತಪ್ಪಿಸುವ ಹುನ್ನಾರ ನಡೆಸಲಾಗುತ್ತಿದ್ದು, ಅದಕ್ಕೆ ಆಸ್ಪದ ಮಾಡಿಕೊಡಬಾರದು’ ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು