ಭಾನುವಾರ, ಜುಲೈ 3, 2022
24 °C
ವಿಜಯನಗರ ಜಿಲ್ಲೆ ರಚನೆಯ ಪರವಾಗಿ ಹೆಚ್ಚು ಅರ್ಜಿ ಸಲ್ಲಿಕೆ

ವಿಜಯನಗರ ಜಿಲ್ಲೆ: ಅಂತಿಮ ಘಟ್ಟಕ್ಕೆ ವಿಭಜನೆ ಪ್ರಕ್ರಿಯೆ

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ಅಖಂಡ ಬಳ್ಳಾರಿ ಜಿಲ್ಲೆ ವಿಭಜಿಸಿ ವಿಜಯನಗರ ಜಿಲ್ಲೆ ರಚನೆ ಮಾಡಬೇಕೆಂಬ ಪ್ರಕ್ರಿಯೆ ಅಂತಿಮ ಘಟ್ಟ ತಲುಪಿದೆ.

ಜಿಲ್ಲೆ ವಿಭಜನೆ ಪರ–ವಿರುದ್ಧವಾಗಿ ಸಲ್ಲಿಕೆಯಾಗಿರುವ ಎಲ್ಲ ಆಕ್ಷೇಪಣೆಗಳನ್ನು ಪರಿಶೀಲಿಸಿರುವ ಬಳ್ಳಾರಿ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು, ಷರಾ ಬರೆದು ಕಲಬುರ್ಗಿ ವಿಭಾಗದ ಪ್ರಾದೇಶಿಕ ಆಯುಕ್ತರಿಗೆ ವರದಿ ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿ ಅವರ ವರದಿ ಆಧರಿಸಿ, ಪ್ರಾದೇಶಿಕ ಆಯುಕ್ತರು ಕಂದಾಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಫೆ. 3ರಂದು ವರದಿ ನೀಡಿದ್ದಾರೆ.

2019ರ ಡಿ. 14ರಂದು ವಿಜಯನಗರ ಜಿಲ್ಲೆ ಘೋಷಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಆಕ್ಷೇಪಣೆ ಸಲ್ಲಿಕೆಗೆ ಒಂದು ತಿಂಗಳ ಕಾಲಾವಕಾಶ ನೀಡಿತ್ತು. ಆ ಗಡುವು ಜ. 13ಕ್ಕೆ ಕೊನೆಗೊಂಡಿತ್ತು. ಜಿಲ್ಲಾಧಿಕಾರಿ ಕೊಟ್ಟಿರುವ ವರದಿಯಲ್ಲಿ, ಜಿಲ್ಲೆ ವಿಭಜನೆ ವಿರೋಧಿಸಿ 4,739 ಆಕ್ಷೇಪಣೆ ಸಲ್ಲಿಕೆಯಾದರೆ, ಅದರ ಪರ 10,513 ಅರ್ಜಿಗಳು ಬಂದಿವೆ. ಇನ್ನು, ಹಲವರು ನೇರವಾಗಿ ಕಂದಾಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೂ ಆಕ್ಷೇಪಣೆ ಸಲ್ಲಿಸಿದ್ದಾರೆ. ಆದರೆ, ಪರ–ವಿರುದ್ಧ ಎಷ್ಟು ಆಕ್ಷೇಪಣೆ ಸಲ್ಲಿಕೆಯಾಗಿವೆ ಎನ್ನುವುದು ತಿಳಿದು ಬಂದಿಲ್ಲ.

ಎಲ್ಲವೂ ವಿಜಯನಗರ ಪರ: ಮೇಲ್ನೋಟಕ್ಕೆ ಗಮನಿಸುವುದಾದರೆ ವಿಜಯನಗರ ಜಿಲ್ಲೆ ರಚನೆ ಪರ ಹೆಚ್ಚಿನವರ ಒಲವು ಇದ್ದಂತಿದೆ. ವಿಭಜನೆ ವಿರುದ್ಧ ಬಳ್ಳಾರಿ ನಗರ ಹೊರತುಪಡಿಸಿದರೆ ಬೇರೆಡೆ ಉತ್ತಮ ಪ್ರತಿಕ್ರಿಯೆ ಸಿಕ್ಕಿಲ್ಲ. ಆದರೆ, ವಿಜಯನಗರ ಜಿಲ್ಲೆ ರಚನೆ ಪರವಾಗಿ ಎಲ್ಲ ಪಶ್ಚಿಮ ತಾಲ್ಲೂಕುಗಳು ನಿಂತಿವೆ. ಎಲ್ಲ ತಾಲ್ಲೂಕುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಸಲ್ಲಿಕೆಯಾಗಿವೆ.

ಇಷ್ಟೇ ಅಲ್ಲ, ಈ ವಿಷಯವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಮೂಲಸೌಕರ್ಯ ಅಭಿವೃದ್ಧಿ, ಹಜ್‌ ಮತ್ತು ವಕ್ಫ್‌ ಖಾತೆ ಸಚಿವ ಆನಂದ್‌ ಸಿಂಗ್‌ ಅವರು ಕೆಲಸ ಮಾಡುತ್ತಿದ್ದಾರೆ. ಆದರೆ, ಆರಂಭದಲ್ಲಿ ವಿರೋಧ ವ್ಯಕ್ತಪಡಿಸಿದ್ದ ಬಳ್ಳಾರಿಯ ಜನಪ್ರತಿನಿಧಿಗಳು ನಂತರದ ದಿನಗಳಲ್ಲಿ ಮೌನಕ್ಕೆ ಜಾರಿದರು.

ಜಿಲ್ಲೆಯೂ ರಚನೆ, ಖಾತೆಯೂ ಬದಲು: ‘ಆನಂದ್‌ ಸಿಂಗ್‌ ಅವರಿಗೆ ಈ ಮೊದಲು ಕೊಟ್ಟಿದ್ದ ಅರಣ್ಯ ಖಾತೆಯನ್ನು ಬದಲಿಸಿ ಪ್ರವಾಸೋದ್ಯಮ ಖಾತೆ, ನಂತರ ಅದನ್ನೂ ಕಿತ್ತುಕೊಂಡು ಮುಖ್ಯಮಂತ್ರಿ ಹಜ್‌ ಖಾತೆ ಕೊಟ್ಟಿದ್ದಾರೆ. ವಿಜಯನಗರ ಜಿಲ್ಲೆ ರಚನೆಯೇ ಅವರ ಮೊದಲ ಆದ್ಯತೆ ಆಗಿರುವುದರಿಂದ, ಖಾತೆ ಬದಲಿಸಿದರೂ ಅವರು ಮೌನ ವಹಿಸಲು ಇದು ಕೂಡ ಒಂದು ಕಾರಣ’ ಎಂದು ಮೂಲಗಳು ತಿಳಿಸಿವೆ.

‘ಪ್ರವಾಸೋದ್ಯಮ ಖಾತೆ ಬದಲಿಸಿದ ನಂತರ ಸಣ್ಣ ಅಸಮಾಧಾನ ಆನಂದ್‌ ಸಿಂಗ್‌ ಅವರಿಗೆ ಇತ್ತು. ಆದರೆ, ಸ್ವತಃ ಮುಖ್ಯಮಂತ್ರಿಯವರೇ ಸಮಾಧಾನ ಪಡಿಸಿ, ಶೀಘ್ರದಲ್ಲೇ ವಿಜಯನಗರ ಜಿಲ್ಲೆಗೆ ಸಂಬಂಧಿಸಿ ಅಂತಿಮ ಅಧಿಸೂಚನೆ ಹೊರಡಿಸುವ ಭರವಸೆ ಕೊಟ್ಟಿದ್ದಾರೆ. ಬರುವ ದಿನಗಳಲ್ಲಿ ಖಾತೆ ಬದಲಿಸುವ ಭರವಸೆಯೂ ನೀಡಿದ್ದಾರೆ. ಅಧಿವೇಶನ ಮುಗಿಯುವುದರೊಳಗೆ ಜಿಲ್ಲೆ ಘೋಷಿಸಿದರೂ ಅಚ್ಚರಿ ಪಡಬೇಕಿಲ್ಲ’ ಎಂದು ಹೆಸರು ಹೇಳಲಿಚ್ಛಿಸದ ಬಿಜೆಪಿಯ ಹಿರಿಯ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು