ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ: ನಿರ್ಲಕ್ಷ್ಯದಿಂದಲೇ ಗ್ರಾಮಗಳಿಗೆ ಸೋಂಕು

ಗ್ರಾಮೀಣರಿಗೆ ಆರೋಗ್ಯ ಸೇವೆ ಮರೀಚಿಕೆ; ಕಾಡುತ್ತಿದೆ ಸಿಬ್ಬಂದಿ ಕೊರತೆ
Last Updated 1 ಜೂನ್ 2021, 20:58 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ನಮ್ಮ ಊರಾಗ ಕೋವಿಡ್‌ ಕೇಸೇ ಇರಲಿಲ್ಲ. ಹೊರಗ ಕೆಲ್ಸ ಮಾಡೋರು ಇಲ್ಲಿಗ ಬಂದು ಊರ ತುಂಬ ಸೋಂಕು ಹರಡ್ಯಾರ. ಹಂಗ ಬಂದವ್ರಿಗ ಟೆಸ್ಟ್‌ ಮಾಡ್ಸಿ, ಪಾಸಿಟಿವ್ ಇದ್ದವ್ರಿಗ ದವಾಖಾನಿಗೆ ಸೇರಿಸಿದ್ರ ಈ ಪರಿಸ್ಥಿತಿ ಇರ್ತ ಇರಲಿಲ್ಲ. ಸರ್ಕಾರದೋರು ನಿರ್ಲಕ್ಷ್ಯ ತೋರಿದ್ರಿಂದ ಎಂಟು ಜನ ಸತ್ತಾರ’

ಇದು ತುಂಗಭದ್ರಾ ಜಲಾಶಯದ ಹಿನ್ನೀರಿನಲ್ಲಿರುವ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ತಂಬ್ರಹಳ್ಳಿ ಗ್ರಾಮದ ರಾಮಣ್ಣ ಅವರ ಮಾತು.

‘ಕೆಮ್ಮು, ನೆಗಡಿ, ಜ್ವರ ಬಂದವರು ಹೋಗಿ ಟೆಸ್ಟ್‌ ಮಾಡ್ಸಕೊಂಡಾರ. ಆದ್ರ ಐದಾರೂ ದಿನ ಕಳ್ದ ನಂತರ ಪಾಸಿಟಿವ್‌ ರಿಪೋರ್ಟ್‌ ಕೊಡ್ತಾರ. ಅಷ್ಟೊತ್ತಿಗ ಅವರು ಊರ ತುಂಬ ಓಡಾಡಿ ಎಲ್ಲರಿಗೂ ರೋಗ ಹರಡ್ಸ್ಯಾರ. ರಿಪೋರ್ಟ್‌ ಬೇಗ ಕೊಟ್ಟಿದ್ರ ಊರ ಮಂದಿಗೆಲ್ಲ ಸೋಂಕು ಹಬ್ತಿರಲಿಲ್ಲ’

ಹೊಸಪೇಟೆ ತಾಲ್ಲೂಕಿನ ಹನುಮನಹಳ್ಳಿ ಗ್ರಾಮದ ಯುವಕ ಅಶೋಕ ಮಜ್ಜಿಗಿ ಅವರು ಗ್ರಾಮಕ್ಕೆ ಸೋಂಕು ವ್ಯಾಪಿಸಿಕೊಂಡ ಬಗೆಯನ್ನು ವಿಶ್ಲೇಷಿಸಿದ್ದು ಹೀಗೆ.

ಜಿಲ್ಲೆಯಲ್ಲಿ ತಂಬ್ರಹಳ್ಳಿ, ಹನುಮನಹಳ್ಳಿ ಗ್ರಾಮಗಳು ಕೊರೊನಾ ಸೋಂಕಿನಿಂದ ಅತಿ ಹೆಚ್ಚು ಬಾಧಿತವಾದ ಗ್ರಾಮಗಳು. ಕೋವಿಡ್‌ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಮುನ್ಸೂಚನೆ ಸಿಕ್ಕರೂ ಆರಂಭದಲ್ಲೇ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳದ ಕಾರಣ ಜಿಲ್ಲೆಯ ಬಹುತೇಕ ಗ್ರಾಮಗಳಿಗೆ ಸೋಂಕು ವ್ಯಾಪಕವಾಗಿ ಹರಡಿದೆ. ತಂಬ್ರಹಳ್ಳಿ ಒಂದರಲ್ಲೇ ಎಂಟು ಜನ ಕೋವಿಡ್‌ನಿಂದ ಮರಣ ಹೊಂದಿದ್ದಾರೆ.

ಸೋಂಕಿನಿಂದ ಕೊಟ್ಟೂರು ಪಟ್ಟಣ, ಕೊಟ್ಟೂರು ತಾಲ್ಲೂಕಿನ ಅಲಬೂರು, ಕೋಗಳಿ, ಕೂಡ್ಲಿಗಿ ತಾಲ್ಲೂಕಿನ ಬಂಡೆ ಬಸಾಪುರ ತಾಂಡಾ, ಶ್ರೀಕಂಠಪುರ ತಾಂಡಾ, ಚಿಕ್ಕದೇವನಹಳ್ಳಿ ತಾಂಡಾ, ಹೊಸಪೇಟೆ ತಾಲ್ಲೂಕಿನ ಪಾಪಿನಾಯಕನಹಳ್ಳಿ, ಬೈಲುವದ್ದಿಗೇರಿ, ವೆಂಕಟಾಪುರ, ಮರಿಯಮ್ಮನಹಳ್ಳಿ, ಹೂವಿನಹಡಗಲಿಯ ಕೆ. ಅಯ್ಯನಹಳ್ಳಿ, ಶಿವಪುರ ತಾಂಡಾ, ದಾಸನಹಳ್ಳಿ, ಮೈಲಾರ, ಮಾನ್ಯರಮಾಸಲವಾಡ, ಹರಪನಹಳ್ಳಿ ತಾಲ್ಲೂಕಿನ ಅಲವಾಗಲು, ಬಾಗಲಿ, ತೆಲಗಿ, ಕೂಲಹಳ್ಳಿ, ಅರಸೀಕೆರೆ, ಉಚ್ಚಂಗಿದುರ್ಗ, ಬಂಡ್ರಿ ಗ್ರಾಮಗಳ ಜನರ ಬದುಕು ಕೊರೊನಾ ಸೋಂಕು ದುರ್ಬರಗೊಳಿಸಿದೆ.

ಲಾಕ್‌ಡೌನ್‌ ಆರಂಭದಲ್ಲಿ ಬಹುತೇಕ ವಲಸೆ ಕಾರ್ಮಿಕರು ಸ್ವಗ್ರಾಮಗಳಿಗೆ ಮರಳಿದರು. ಜಿಲ್ಲಾಡಳಿತ ಚೆಕ್‌ಪೋಸ್ಟ್‌ ನಿರ್ಮಿಸಿದರೂ ತಪಾಸಣೆಗೆ ಒಳಪಡಿಸಲಿಲ್ಲ. ಹೋಂ ಐಸೋಲೇಷನ್‌ನಲ್ಲಿರುವವರ ಮೇಲೆ ನಿಗಾ ಇಡುವ ವ್ಯವಸ್ಥೆಯೂ ಇಲ್ಲ.

ಸೋಂಕು ಹರಡುವ ತೀವ್ರತೆ ಹೆಚ್ಚಾಗುತ್ತಿದ್ದಂತೆ ಪರೀಕ್ಷಾ ವರದಿ ಬೇಗ ತರಿಸಿಕೊಂಡು ಕೋವಿಡ್‌ ರೋಗಿಗಳನ್ನು ಆರೈಕೆ ಕೇಂದ್ರಗಳಿಗೆ ಸ್ಥಳಾಂತರಿಸುವ ಕೆಲಸ ಆರಂಭಗೊಂಡಿತು. ಗ್ರಾಮಗಳನ್ನು ಸೀಲ್‌ಡೌನ್‌ ಮಾಡಲಾಯಿತು. ಈ ಹಿಂದೆ ವಾರದ ನಂತರ ಕೈಸೇರುತ್ತಿದ್ದ ಪರೀಕ್ಷಾ ವರದಿ ಈಗ ಒಂದೆರಡು ದಿನಗಳಲ್ಲಿ ಬರುತ್ತಿದೆ. ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಮಣ್ಣು ಸುರಿದು, ಮುಳ್ಳಿನ ಬೇಲಿ ಹಾಕಿ ಗ್ರಾಮಸ್ಥರೇ ನಿರ್ಬಂಧ ವಿಧಿಸಿಕೊಂಡಿದ್ದಾರೆ.

ಮಾಸ್ಕ್‌ಬಳಕೆ ಕಡ್ಡಾಯವಾಗಿದೆ. ಕೆಲವು ದಿನ ಗುಂಪು ಗೂಡದಂತೆ ಗ್ರಾಮದ ಮುಖಂಡರು ತಿಳಿಸಿದ್ದಾರೆ. ಈಗ ಗ್ರಾಮಗಳಲ್ಲಿ ಮೌನ ಆವರಿಸಿಕೊಂಡಿದೆ. ಜನ ಬೇಕಾಬಿಟ್ಟಿಯಾಗಿ ಓಡಾಡುವುದನ್ನು ತಡೆಯುವ ಕೆಲಸ ಪೊಲೀಸರು ಮಾಡದೇ ಇರುವುದು ‘ಪ್ರಜಾವಾಣಿ’ ಗ್ರಾಮೀಣ ಪ್ರದೇಶಗಳಲ್ಲಿ ಸಂಚರಿಸಿದಾಗ ಗಮನಕ್ಕೆ ಬಂತು.

ಈಗಲೂ ಜಿಲ್ಲೆಯ ಬಹುತೇಕ ಆಸ್ಪತ್ರೆಗಳಲ್ಲಿ ವೈದ್ಯರು, ಸಿಬ್ಬಂದಿಯ ಕೊರತೆ ಇದೆ. ಕೆಲವೆಡೆ ಆಂಬುಲೆನ್ಸ್‌ ಕೂಡ ಇಲ್ಲ. ಕೆಲವು ಕಡೆ ಆಯುಷ್‌ ವೈದ್ಯರು ಕೆಲಸ ನಿರ್ವಹಿಸುತ್ತಿದ್ದರೆ, ಕೆಲವೆಡೆ ಸಮುದಾಯ ಆರೋಗ್ಯ ಕೇಂದ್ರದ ಕಾರ್ಯಕರ್ತರೇ ಎಲ್ಲ ನೋಡಿಕೊಳ್ಳುತ್ತಿದ್ದಾರೆ. ಕೋವಿಡೇತರ ರೋಗಿಗಳಿಗೆ ಎಂದಿನಂತೆ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉತ್ತಮ ಚಿಕಿತ್ಸೆ ಸಿಗುವುದಿಲ್ಲ ಎಂಬ ಭಾವನೆಯಿಂದಾಗಿ ಗ್ರಾಮೀಣರು ಇತ್ತ ಬರುವುದಿಲ್ಲ. ಈಗಲೂ ಬೆಂಗಳೂರು, ಹುಬ್ಬಳ್ಳಿ, ದಾವಣಗೆರೆ, ಹೈದರಾಬಾದ್‌, ಮಂಗಳೂರಿಗೆ ಹೋಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೋವಿಡ್‌ ರೋಗಿಗಳಿಗೆ ಉತ್ತಮ ಉಪಚಾರ:ಜಿಲ್ಲೆಯ ಬಹುತೇಕ ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ ರೋಗಿಗಳಿಗೆ ಉತ್ತಮ ಉಪಚಾರ ಮಾಡಲಾಗುತ್ತಿದೆ. ಊರ ಹೊರಗಿರುವುದು ಮತ್ತು ಸಕಲ ಸೌಕರ್ಯ ಹೊಂದಿರುವುದರಿಂದ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನೇ ಕೋವಿಡ್‌ ಕೇಂದ್ರಗಳಾಗಿ ಪರಿವರ್ತಿಸಲಾಗಿದೆ. ರೋಗಿಗಳಿಗೆ ಸಕಾಲಕ್ಕೆ ಉಪಾಹಾರ, ಊಟ ನೀಡಲಾಗುತ್ತಿದೆ. ಸ್ವಚ್ಛತೆಗೆ ಹೆಚ್ಚಿನ ಒತ್ತು ಕೊಡಲಾಗಿದೆ. ಬೆಳಿಗ್ಗೆ ಸರಳ ಯೋಗ ಹೇಳಿಕೊಡಲಾಗುತ್ತಿದೆ. ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಶೀಲ್ದಾರ್‌ ಆಗಾಗ ಈ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.

ಕೋವಿಡ್‌ ರೋಗಿಗಳು ಮೊಬೈಲ್‌ನಲ್ಲಿ ಸಿನಿಮಾ, ಸಂಗೀತ ನೋಡಿ, ಪುಸ್ತಕ ಓದಿ ದಿನ ದೂಡುತ್ತಿದ್ದಾರೆ. ರೋಗಿಗಳು ಬೇಕಾಬಿಟ್ಟಿ ಹೊರಗೆ ಓಡಾಡುತ್ತಿದ್ದಾರೆ ಎಂದು ಹೊಸಪೇಟೆ ತಾಲ್ಲೂಕಿನ ತಿಮ್ಮಲಾಪುರ ಕೋವಿಡ್‌ ಆರೈಕೆ ಕೇಂದ್ರದ ಮುಖ್ಯದ್ವಾರಕ್ಕೆ ಬೀಗ ಜಡಿಯಲಾಗಿದೆ.

ಸುಳಿಯದ ಜನಪ್ರತಿನಿಧಿಗಳು:ಜನಪ್ರತಿನಿಧಿಗಳು ಗ್ರಾಮಕ್ಕೆ ಭೇಟಿ ನೀಡಿ, ಜನರಿಗೆ ಧೈರ್ಯ ತುಂಬುವ ಕೆಲಸ ಮಾಡಿಲ್ಲ. ಆಂಬುಲೆನ್ಸ್‌ ಸೇರಿದಂತೆ ವೈದ್ಯಕೀಯ ಸೇವೆ ಕಲ್ಪಿಸಿಕೊಡಲು ನೆರವಾಗಿಲ್ಲ ಎನ್ನುವುದು ಗ್ರಾಮಸ್ಥರ ದೂರು.

‘ನಮ್ಮೂರಿನ ಎಲ್ಲರಿಗೂ ಹೆಚ್ಚು ಕಮ್ಮಿ ಸೋಂಕು ಬಂದಿದೆ. ಆದರೆ, ನಮ್ಮ ಶಾಸಕರು ಇದುವರೆಗೆ ಒಮ್ಮೆಯೂ ಗ್ರಾಮಕ್ಕೆ ಬಂದಿಲ್ಲ’ ಎಂದು ಹನುಮನಹಳ್ಳಿಯ ಹುಲುಗಪ್ಪ ಆರೋಪಿಸಿದರು. ಇತರೆ ಗ್ರಾಮಸ್ಥರ ಆರೋಪವೂ ಇದೇ ಆಗಿದೆ.

***

ಎರಡು ವಾರದಿಂದ ಲಸಿಕೆ ಹಾಕಿಸಿಕೊಳ್ಳಲು ಆಸ್ಪತ್ರೆಗೆ ಬಂದು ಬಂದು ಹೋಗುತ್ತಿದ್ದೇನೆ. ಇಂದು, ನಾಳೆ ಎಂದು ದಿನ ದೂಡುತ್ತಿದ್ದಾರೆ.
–ಪರಶುರಾಮ, ಇಟ್ಟಿಗಿ ಗ್ರಾಮಸ್ಥ

***

ಮನೆ ಮನೆಗೆ ಹೋಗಿ ಸರ್ವೇ ಕಾರ್ಯ ನಡೆಸಲಾಗುತ್ತಿದೆ. ರೋಗ ಲಕ್ಷಣ ಕಂಡು ಬಂದರೆ ಅಂತಹವರ ಮಾಹಿತಿ ಮೇಲಧಿಕಾರಿಗೆ ಕೊಡಲಾಗುತ್ತಿದೆ.
–ಮಾರೇಕಾ, ಆಶಾ ಕಾರ್ಯಕರ್ತೆ, ಮರಿಯಮ್ಮನಹಳ್ಳಿ

***

ನಮಗೆಲ್ಲ ಉತ್ತಮ ರೀತಿಯಲ್ಲಿ ಉಪಾಹಾರ, ಊಟ ನೀಡುತ್ತಿದ್ದಾರೆ. ವೈದ್ಯರು ನಿತ್ಯ ಬಂದು ನಮ್ಮ ಆರೋಗ್ಯ ಪರೀಕ್ಷೆ ಮಾಡುತ್ತಿದ್ದಾರೆ.
–ಸೈಯದ್‌ ಬಾಷಾ, ಕೋವಿಡ್‌ ರೋಗಿ, ತಿಮ್ಮಲಾಪುರ ಆರೈಕೆ ಕೇಂದ್ರ

***

ಲಸಿಕೆಯ ದಾಸ್ತಾನು ಇಲ್ಲದ ಕಾರಣದಿಂದ ಸದ್ಯ ಲಸಿಕೆ ಹಾಕುತ್ತಿಲ್ಲ.
–ಕರುಣಾ, ವೈದ್ಯಾಧಿಕಾರಿ, ತಿಮ್ಮಲಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT