ಬುಧವಾರ, ಜನವರಿ 27, 2021
18 °C
ಸರ್ಕಾರಿ ಆಸ್ಪತ್ರೆಯ 1,600, ಖಾಸಗಿ ಆಸ್ಪತ್ರೆಯ 900 ಸಿಬ್ಬಂದಿಗೆ ಮೊದಲು ಲಸಿಕೆ ನೀಡಿಕೆಗೆ ಸಿದ್ಧತೆ

ಕೋವಿಡ್‌ ಲಸಿಕೆ ಡ್ರೈ ರನ್‌ ಅಣಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ಕೋವಿಡ್‌ ಲಸಿಕೆ ಹಾಕುವ ಪ್ರಯೋಗದ (ಡ್ರೈ ರನ್‌) ಅಣಕು ಪ್ರದರ್ಶನ ನಗರ ಹೊರವಲಯದ ಟಿಎಂಎಇ ಆಯುರ್ವೇದಿಕ್‌ ಕಾಲೇಜಿನಲ್ಲಿ ಶುಕ್ರವಾರ ನಡೆಯಿತು.

ಮಾಸ್ಕ್‌ ಧರಿಸುವಿಕೆ, ಅಂತರ ಕಾಯ್ದುಕೊಳ್ಳುವಿಕೆ, ಪದೇ ಪದೇ ಕೈತೊಳೆದುಕೊಳ್ಳುವ ಸೂಚನಾ ಫಲಕ ಹೊರಭಾಗದಲ್ಲಿ ಗಮನ ಸೆಳೆಯಿತು. ನೋಂದಣಿ ಕೊಠಡಿ, ನಿರೀಕ್ಷಣಾ ಕೊಠಡಿ, ಲಸಿಕಾ ಕೊಠಡಿಗಳೆಂದು ಆಯಾ ಕೊಠಡಿಗಳ ಮೇಲೆ ಹೆಸರು ನಮೂದಿಸಲಾಗಿತ್ತು. ಅಂತರದಿಂದ ಜನ ನಿಂತುಕೊಳ್ಳಲು ಜಾಗ ಗುರುತಿಸಲಾಗಿತ್ತು.

ನರ್ಸ್‌ ಒಬ್ಬರು ಸಾಂಕೇತಿಕವಾಗಿ ಯುವತಿಗೆ ಲಸಿಕೆ ಹಾಕುವ ವಿಧಾನ ತೋರಿಸಿದರು. ಲಸಿಕೆ ಸಂಗ್ರಹ, ಲಸಿಕೆ ಹಾಕಿದ ನಂತರ ಅವುಗಳ ವಿಲೇವಾರಿ ಮಾಡುವ ಬಗೆ ತೋರಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಭಾಸ್ಕರ್‌, ‘ಶೀಘ್ರದಲ್ಲೇ ಲಸಿಕೆ ಬರುವ ಸಾಧ್ಯತೆ ಇರುವುದರಿಂದ ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಲಸಿಕೆ ಹಾಕುವುದರ ಬಗ್ಗೆ ಅಣಕು ಪ್ರಯೋಗ ಮಾಡಲಾಗುತ್ತಿದೆ. ಲಸಿಕೆ ಹೊರತುಪಡಿಸಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅದರ ಅಣಕು ಪ್ರಯೋಗ ಮಾಡಲಾಗಿದೆ. ಇನ್ನು ಕೆಲವು ದಿನಗಳ ವರೆಗೆ ಇದೇ ರೀತಿ ನಡೆಯಲಿದೆ. ಯಾವುದಾದರೂ ಕುಂದು ಕೊರತೆಗಳು ಕಂಡು ಬಂದರೆ ಸರಿಪಡಿಸಲಾಗುವುದು. ಲಸಿಕೆಯನ್ನು ವ್ಯವಸ್ಥಿತವಾಗಿ ಹಾಕುವುದು ಇದರ ಮುಖ್ಯ ಉದ್ದೇಶ’ ಎಂದು ಹೇಳಿದರು.

‘ತಾಲ್ಲೂಕು ವ್ಯಾಪ್ತಿಯಲ್ಲಿ ಸರ್ಕಾರಿ ಆಸ್ಪತ್ರೆಯ 1,600, ಖಾಸಗಿ ಆಸ್ಪತ್ರೆಯ 900 ಸಿಬ್ಬಂದಿಗೆ ಮೊದಲು ಲಸಿಕೆ ನೀಡಲಾಗುತ್ತದೆ. ಸರ್ಕಾರದ ಪೋರ್ಟಲ್‌ನಲ್ಲಿ ಹೆಸರು ನೋಂದಣಿ ಮಾಡಿಸಿಕೊಂಡವರಿಗೆ ಬಳಿಕ ಲಸಿಕೆ ಕೊಡಲಾಗುತ್ತದೆ’ ಎಂದು ಮಾಹಿತಿ ಹಂಚಿಕೊಂಡರು.

ಟಿಎಂಎಇ ಆಯುರ್ವೇದಿಕ್‌ ಕಾಲೇಜಿನ ಪ್ರಾಚಾರ್ಯ ಡಾ. ಕೇದಾರೇಶ್ವರ ದಂಡಿನ್‌, ಡಾ. ನಟರಾಜ, ಡಾ. ಸಂತೋಷ, ಡಾ. ಕಾರ್ತಿಕ್‌, ಡಾ. ವಿಜಯಕುಮಾರ, ಡಾ. ಮಹೇಶ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.