ಭಾನುವಾರ, ಜೂನ್ 13, 2021
21 °C

ಪ್ರಚಾರದ ಪರಿಹಾರ ಸಲ್ಲದು: ಸಿಪಿಐಎಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ(ವಿಜಯನಗರ): ಕೋವಿಡ್-19 ಲಾಕ್‌ಡೌನ್‌ನಲ್ಲಿ ರಾಜ್ಯದ ಜನತೆಗೆ ರಾಜ್ಯ ಸರ್ಕಾರ ಘೋಷಿಸಿದ ₹1,100 ಕೋಟಿ ಪರಿಹಾರ ಕೇವಲ ತೋರಿಕೆಯಾಗಬಾರದು ಎಂದು ಸಿಪಿಐಎಂ ಆಗ್ರಹಿಸಿದೆ.

ರಾಜ್ಯ ಸರ್ಕಾರ ₹608 ಕೋಟಿ ಮತ್ತು ಕಾರ್ಮಿಕ ಕಲ್ಯಾಣ ಮಂಡಳಿಯ ₹492 ಕೋಟಿ ಪರಿಹಾರದ ಪ್ಯಾಕೇಜ್ ಘೋಷಿಸಿದೆ. ಕೋವಿಡ್ ಎರಡನೇ ಅಲೆಯ ಬಾಧೆಗೊಳಗಾದ ಜನತೆಗೆ ಹಾಗೂ ಸೆಪ್ಟಂಬರ್ ನಂತರ ಮೂರನೇ ಅಲೆ ಅಪ್ಪಳಿಸುವ ಭೀತಿಯೂ ಇದೆ‌. ಪರಿಸ್ಥಿತಿ ಸಹಜ ಸ್ಥಿತಿಗೆ ಬರುವವರೆಗೆ ಆರ್ಥಿಕವಾಗಿ ದುರ್ಬಲರಾದವರಿಗೆ ಸರ್ಕಾರ ನೆರವು ನೀಡಬೇಕು ಎಂದು ಒತ್ತಾಯಿಸಿದೆ.

ಮಂಗಳವಾದ್ಯ ಕಲಾವಿದರು, ಬಾಣಸಿಗರು, ಅಕ್ಷರ ದಾಸೋಹ, ಹಾಸ್ಟೆಲ್ ಸಿಬ್ಬಂದಿ ಸೇರಿದಂತೆ ಹಲವು ವರ್ಗದ ಕಾರ್ಮಿಕರಿಗೆ ಯಾವುದೇ ನೆರವಿಲ್ಲ. ಮಸಣಗಳಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರಿಗೆ ವಿಮೆಯಾಗಲೀ, ಸುರಕ್ಷತಾ ಕ್ರಮಗಳಾಗಲೀ, ವಿಶೇಷ ನೆರವಾಗಲಿ ಇಲ್ಲ. ಕರ್ಫ್ಯೂ, ಲಾಕ್ ಡೌನ್, ಸಂಪೂರ್ಣ ಲಾಕ್ ಡೌನ್ ಕಾರಣದಿಂದ, ಆದಾಯವಿಲ್ಲದವರ ಸಾಲ ಹಾಗೂ ಸ್ತ್ರೀಶಕ್ತಿ, ಸ್ವ ಸಹಾಯ ಗುಂಪುಗಳ ಮಹಿಳೆಯರು ಪಡೆದಿರುವ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡದೇ ಇರುವುದು ದುರದೃಷ್ಟಕರ ಎಂದಿದೆ.

ಎಲ್ಲಾ ಬಿಪಿಎಲ್, ಅಂತ್ಯೋದಯ ಹಾಗೂ ಅಗತ್ಯವಿರುವ ಎಪಿಎಲ್ ಕಾರ್ಡ್ ದಾರರಿಗೆ ತಲಾ ₹10 ಕೆ.ಜಿ ಅಕ್ಕಿ ಸೇರಿದಂತೆ ಅಗತ್ಯ ವಿವಿಧ ಆಹಾರ ಸಾಮಗ್ರಿಗಳನ್ನು ಕೇರಳ ಸರ್ಕಾರದ ಮಾದರಿಯಲ್ಲಿ ನೀಡಬೇಕು. ಸರ್ಕಾರ ಪಡಿತರ ಕಡಿತ ಮಾಡಿರುವ ಆದೇಶ ವಾಪಸ್‌ ಪಡೆದು ಪೂರ್ಣ ಪಡಿತರ ನೀಡಬೇಕು. ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ, ಕನಿಷ್ಠ ಈ ಎಲ್ಲಾ ಕುಟುಂಬಗಳಿಗೆ ಮಾಸಿಕ ₹10,000 ನೆರವು ಒದಗಿಸುವ ಕ್ರಮಗಳಿಗೆ ತುರ್ತು ಗಮನ ನೀಡಲೇಬೇಕು ಎಂದು ಪಕ್ಷದ ಮುಖಂಡರಾದ ಆರ್. ಭಾಸ್ಕರ್ ರೆಡ್ಡಿ, ಮರಡಿ ಜಂಬಯ್ಯ ನಾಯಕ, ನಾಗರತ್ನಮ್ಮ, ಎ.ಕರುಣಾನಿಧಿ ಒತ್ತಾಯಿಸಿದ್ದಾರೆ‌.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು