ಗುರುವಾರ , ಆಗಸ್ಟ್ 18, 2022
25 °C
ಜಿಲ್ಲಾಧಿಕಾರಿ ಅನಿರುದ್ಧ್‌ ಶ್ರವಣ್‌ ಅವರಿಂದ ಕಲ್ಲಹಳ್ಳಿಯಲ್ಲಿ ಗ್ರಾಮ ವಾಸ್ತವ್ಯ

ಮಕ್ಕಳ ಪದ್ಯ ಆಲಿಸಿದರು, ಏಣಿ ಏರಿದರು

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ಜಿಲ್ಲಾಧಿಕಾರಿ ಅನಿರುದ್ಧ್‌ ಶ್ರವಣ್‌ ಪಿ. ಅವರು ತಾಲ್ಲೂಕಿನ ಕಲ್ಲಹಳ್ಳಿಯಲ್ಲಿ ಶುಕ್ರವಾರ ಗ್ರಾಮ ವಾಸ್ತವ್ಯ ಮಾಡಿ, ಸಾರ್ವಜನಿಕರ ಸಮಸ್ಯೆ ಆಲಿಸಿದರು.

ಗ್ರಾಮಕ್ಕೆ ಬರುತ್ತಿದ್ದಂತೆ ಅವರಿಗೆ ಆರತಿ ಬೆಳಗಿ, ಹಣೆಗೆ ತಿಲಕವಿಟ್ಟು ಪೂರ್ಣಕುಂಭ ಸ್ವಾಗತ ನೀಡಲಾಯಿತು. ಬಳಿಕ ಅವರು ಆಂಜನೇಯ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದರು. ಅದಾದ ನಂತರ 3ನೇ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದರು. ‘ಜಾನಿ ಜಾನಿ ಯೆಸ್‌ ಪಾಪ...’ ಎಂಬ ಪದ್ಯ ಮಕ್ಕಳಿಂದ ಆಲಿಸಿದರು. ಅಂಗನವಾಡಿ ಕಟ್ಟಡವನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ನಿರ್ಗಮಿಸಿದರು.

ನಂತರ ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿ ನೀಡಿ, ಕಾಂಪೌಂಡ್‌ ಮೇಲೆ ಬಿಡಿಸಿರುವ ಸರ್ಕಾರದ ವಿವಿಧ ಯೋಜನೆಗಳ ಚಿತ್ರಕಲೆ, ಕಚೇರಿ ಕಟ್ಟಡ, ಸೋಲಾರ್‌ ಬಳಕೆಯ ಮಾಹಿತಿ ಪಡೆದರು.

ಪಂಚಾಯಿತಿ ಅಧ್ಯಕ್ಷೆ ಶಕುಂತಲಾಬಾಯಿ, ‘ಕಟ್ಟಡ ಬಹಳ ಹಳೆಯದು. ಚಿಕ್ಕದು ಕೂಡ. ಇದನ್ನು ಕೆಡವಿ ಹೊಸ ಕಟ್ಟಡ ನಿರ್ಮಿಸಿಕೊಡಬೇಕು’ ಎಂದು ಮನವಿ ಮಾಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಡಿ.ಸಿ., ‘ಒಂದುವೇಳೆ ಜಾಗದ ಕೊರತೆಯಿದ್ದರೆ ಇದರ ಮೇಲ್ಭಾಗದಲ್ಲಿ ಹೊಸ ಕಟ್ಟಡ ನಿರ್ಮಿಸಬಹುದು. ಉತ್ತಮ ಸ್ಥಿತಿಯಲ್ಲಿರುವ ಈ ಕಟ್ಟಡವನ್ನು ಕೆಡವುದೇಕೆ?’ ಎಂದು ಕೇಳಿದರು. ಬಳಿಕ ಅವರು ಲೋಹದ ಏಣಿ ಏರಿ ಪಂಚಾಯಿತಿ ಕಟ್ಟಡದ ಮೇಲ್ಭಾಗಕ್ಕೆ ತೆರಳಿ ಪರಿಶೀಲಿಸಿದರು.

ನಂತರ 2ನೇ ಅಂಗನವಾಡಿ ಕೇಂದ್ರಕ್ಕೆ ತೆರಳಿದರು. ‘3ನೇ ಕೇಂದ್ರಕ್ಕೆ ಹೋಲಿಸಿದರೆ ಈ ಕೇಂದ್ರ ಅಷ್ಟು ಚೆನ್ನಾಗಿಲ್ಲ’ ಎಂದು ಸಿಡಿಪಿಒ ಸಿಂಧು ಯಲಿಗಾರ ಅವರಿಗೆ ಹೇಳಿದರು. ಬಳಿಕ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ಸಮಸ್ಯೆ ಆಲಿಸಿದರು. ‘ಔಷಧ ಸೇರಿದಂತೆ ಇತರೆ ವಸ್ತುಗಳನ್ನು ಸಂಗ್ರಹಿಸಿ ಇಡಲು ವ್ಯವಸ್ಥೆ ಇಲ್ಲ. ನೀರಿಗೆ ಸಮಸ್ಯೆ ಬಹಳ ಇದೆ’ ಎಂದು ಅಲ್ಲಿನ ಸಿಬ್ಬಂದಿ ಗಮನಕ್ಕೆ ತಂದರು. ಅಗತ್ಯ ಕ್ರಮ ಕೈಗೊಳ್ಳಲು ಡಿಎಚ್‌ಒ ಡಾ. ಸಲೀಂ ಅವರಿಗೆ ಸೂಚಿಸಿದರು.

ಅಲ್ಲಿಂದ ಸರ್ಕಾರಿ ಶಾಲೆಗೆ ತೆರಳಿ, ಅದರ ಆವರಣದಲ್ಲಿ ಸಸಿ ನೆಟ್ಟರು. ಕುಡಿಯುವ ನೀರಿನ ಹೊಸ ಘಟಕ ಉದ್ಘಾಟಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವಸ್ತು ಪ್ರದರ್ಶನ ಉದ್ಘಾಟಿಸಿದರು.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಕೃಷ್ಣ ನಾಯ್ಕ, ಗಣಿ ಲಾರಿಗಳ ಓಡಾಟದಿಂದಾಗುತ್ತಿರುವ ಸಮಸ್ಯೆಯನ್ನು ಗಮನಕ್ಕೆ ತಂದರು. ಯಲ್ಲಾಲಿಂಗ ಅವರು, ಕಾಡಂಚಿನಲ್ಲಿ ಉಳುಮೆ ಮಾಡುತ್ತಿರುವವರಿಗೆ ಪಟ್ಟಾ ನೀಡಬೇಕೆಂದು ಕೋರಿದರು. ಅಡ್ಲಿಗೆರೆ ಬಳಿ ಸೇತುವೆ ನಿರ್ಮಿಸಬೇಕು, ಕಣಿವೆರಾಯನಗುಡಿಯಲ್ಲಿ ಸ್ಮಶಾನಕ್ಕೆ ಜಾಗ ಕೊಡಬೇಕು, ಪ್ರೌಢಶಾಲೆ ಮಂಜೂರು ಮಾಡಬೇಕು, ವಸತಿ ರಹಿತರಿಗೆ ಮನೆ ಮಂಜೂರು ಮಾಡಬೇಕೆಂದು ಸಾರ್ವಜನಿಕರು ಅಹವಾಲು ಸಲ್ಲಿಸಿದರು.

ಎಲ್ಲರ ಸಮಸ್ಯೆ ಆಲಿಸಿದ ಅನಿರುದ್ಧ್‌ ಶ್ರವಣ್‌, ‘ಬೇರೆ ಕಡೆ ಗ್ರಾಮ ವಾಸ್ತವ್ಯ ಮಾಡಿದಾಗ ನೂರಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ಆದರೆ, ಈ ಗ್ರಾಮದಲ್ಲಿ ಸುಮಾರು 30 ಅರ್ಜಿಗಳು ಬಂದಿವೆ. ಹೆಚ್ಚಿನವು ಮನೆ ನಿರ್ಮಿಸಿಕೊಡಬೇಕು ಎನ್ನುವುದಕ್ಕೆ ಸಂಬಂಧಿಸಿವೆ. ಸರ್ಕಾರದ ಗಮನಕ್ಕೆ ತಂದು ವ್ಯವಸ್ಥೆ ಮಾಡಲಾಗುವುದು’ ಎಂದರು ಭರವಸೆ ನೀಡಿದರು.

ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ, ತಹಶೀಲ್ದಾರ್‌ ವಿಶ್ವಜೀತ್‌ ಮೆಹ್ತಾ, ತಾಲ್ಲೂಕು ಪಂಚಾಯಿತಿ ಇಒ ವಿಶ್ವನಾಥ, ಡಿಎಚ್‌ಒ ಡಾ. ಸಲೀಂ, ಪಂಚಾಯಿತಿ ಅಧ್ಯಕ್ಷೆ ಶಕುಂತಲಾಬಾಯಿ, ಉಪಾಧ್ಯಕ್ಷೆ ಶಾರದಾ, ಡಿಡಿಎಲ್‌ಆರ್‌ ಕೇಶವಮೂರ್ತಿ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು