ಸರ್ಕಾರಿ ಕಾಲೇಜಿನಲ್ಲಿ ಪ್ರವೇಶಕ್ಕೆ ಬೇಡಿಕೆ

ಬುಧವಾರ, ಮೇ 22, 2019
29 °C
ಬಿ.ಎಸ್ಸಿ, ಬಿ.ಕಾಂ. ಪ್ರವೇಶಕ್ಕೆ ಹೆಚ್ಚಿನವರ ಆಸಕ್ತಿ; ಸರ್ಟಿಫಿಕೇಟ್‌ ಕೋರ್ಸ್‌ ಆರಂಭ

ಸರ್ಕಾರಿ ಕಾಲೇಜಿನಲ್ಲಿ ಪ್ರವೇಶಕ್ಕೆ ಬೇಡಿಕೆ

Published:
Updated:

ಹೊಸಪೇಟೆ: ಸರ್ಕಾರಿ ಕಾಲೇಜು ಎಂದರೆ ಮೂಗು ಮುರಿಯುವವರೆ ಜಾಸ್ತಿ. ಆದರೆ, ನಗರದ ಶಂಕರ್‌ ಆನಂದ್‌ ಸಿಂಗ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅದಕ್ಕೆ ಸಂಪೂರ್ಣ ತದ್ವಿರುದ್ಧ.

ಈ ಕಾಲೇಜಿನಲ್ಲಿ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಮೂಗಿ ಬೀಳುತ್ತಾರೆ. ಮೊದಲಿನಿಂದಲೂ ಬಿ.ಎಸ್ಸಿ., ಬಿ.ಕಾಂ. ಕೋರ್ಸ್‌ಗಳಿಗೆ ಬಹಳ ಬೇಡಿಕೆ ಇದೆ. ವರ್ಷದಿಂದ ವರ್ಷಕ್ಕೆ ಅದು ಹೆಚ್ಚಾಗುತ್ತಿದೆ. ಈ ಬೇಡಿಕೆಯನ್ನು ಮನಗಂಡು ಪ್ರಸಕ್ತ ವರ್ಷದಿಂದ ಬಿ.ಎಸ್ಸಿ.ಯಲ್ಲಿ ಸಿ.ಬಿ.ಝಡ್‌., ಬಿ.ಕಾಂ.ನಲ್ಲಿ ಟಿ.ಟಿ.ಟಿ., ಕಂಪ್ಯೂಟರ್‌ ಸೈನ್ಸ್‌ ಹೊಸ ಕೋರ್ಸ್‌ಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ.

ಬಿ.ಎಸ್ಸಿ.ಯಲ್ಲಿ ಪಿ.ಸಿ.ಎಂ., ಪಿ.ಎಂ.ಸಿ.ಎಸ್‌. ಕೋರ್ಸ್‌ಗಳು ಮೊದಲಿನಿಂದಲೂ ನಡೆಯುತ್ತಿವೆ. ಅದೇ ರೀತಿ ಬಿ.ಕಾಂ. ಸಾಮಾನ್ಯ ಕೋರ್ಸ್‌ ಕೂಡ ಇದೆ. ಹಾಲಿ ವರ್ಷ ಪಿ.ಯು.ಸಿ. ಪೂರ್ಣಗೊಳಿಸಿದವರಿಗೆ ಎರಡು ಸರ್ಟಿಫಿಕೇಟ್‌ ಕೋರ್ಸ್‌ಗಳನ್ನು ಆರಂಭಿಸಲಾಗುತ್ತಿದೆ. ಅನುವಾದ ಮತ್ತು ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಕೋರ್ಸ್‌ಗಳಾಗಿವೆ. ವಿಶ್ವವಿಖ್ಯಾತ ಹಂಪಿ ಸನಿಹದಲ್ಲೇ ಇರುವುದರಿಂದ ಮಾರ್ಗದರ್ಶಿ ಆಗಬಯಸುವವರನ್ನು ಗಮನದಲ್ಲಿ ಇಟ್ಟುಕೊಂಡು ಈ ಕೋರ್ಸ್‌ಗಳನ್ನು ಪ್ರಾರಂಭಿಸುತ್ತಿರುವುದು ವಿಶೇಷ.

ಈ ವರ್ಷ ಬಿ.ಬಿ.ಎ. ಕೋರ್ಸ್‌ ಸಹ ಆರಂಭವಾಗುವ ಸಾಧ್ಯತೆ ಇದೆ. ಹೋದ ವರ್ಷವೇ ಪ್ರವೇಶ ಪ್ರಕ್ರಿಯೆ ಆರಂಭಿಸಲಾಗಿತ್ತು. ಆದರೆ, ಕೇವಲ ಎಂಟು ವಿದ್ಯಾರ್ಥಿಗಳಷ್ಟೇ ಆಸಕ್ತಿ ತೋರಿಸಿದ್ದರು. ಹೀಗಾಗಿ ಅದನ್ನು ಕೈಬಿಡಲಾಗಿತ್ತು. ‘ಈ ವರ್ಷ ಕನಿಷ್ಠ 15 ವಿದ್ಯಾರ್ಥಿಗಳು ಬಂದರೆ ಕೋರ್ಸ್‌ ಆರಂಭಿಸಲಾಗುವುದು. ಖಾಸಗಿ ಕಾಲೇಜುಗಳಲ್ಲಿ ಬಿ.ಬಿ.ಎ. ಕೋರ್ಸ್‌ಗೆ ₹1 ಲಕ್ಷದ ವರೆಗೆ ಶುಲ್ಕ ಇದೆ. ಸರ್ಕಾರಿ ಕಾಲೇಜಿನಲ್ಲಿ ಈ ಕೋರ್ಸ್‌ ಆರಂಭಿಸಿದರೆ ಆರ್ಥಿಕವಾಗಿ ಸ್ಥಿತಿವಂತರಲ್ಲದವರೂ ಕೂಡ ಪ್ರವೇಶ ಪಡೆದು, ವ್ಯಾಸಂಗ ಮಾಡಬಹುದು’ ಎನ್ನುತ್ತಾರೆ ಕಾಲೇಜಿನ ಪ್ರಾಚಾರ್ಯ ಬಿ.ಜಿ. ಕನಕೇಶಮೂರ್ತಿ.

‘ಬಿ.ಎ., ಬಿ.ಎಸ್ಸಿ. ಹಾಗೂ ಬಿ.ಕಾಂ. ಮೂರು ವಿಭಾಗಗಳಲ್ಲಿ ಒಟ್ಟು 1,700 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಬಿ.ಎಸ್ಸಿ., ಬಿ.ಕಾಂ.ಗೆ ಹೆಚ್ಚಿನ ಬೇಡಿಕೆ ಇದೆ. ಈ ವರ್ಷ ಕೆಲ ಹೊಸ ಕೋರ್ಸ್‌ಗಳು ಆರಂಭವಾಗುತ್ತಿರುವುದರಿಂದ ವಿದ್ಯಾರ್ಥಿಗಳ ಸಂಖ್ಯೆ 2,000 ಗಡಿ ದಾಟುವ ಸಾಧ್ಯತೆ ಇದೆ’ ಎಂದು ಭರವಸೆ ವ್ಯಕ್ತಪಡಿಸಿದರು.

‘ಆಪ್ತಮಿತ್ರ ಯೋಜನೆಯ ಅಡಿಯಲ್ಲಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ವಿಜಯನಗರ ಕಾಲೇಜಿನಲ್ಲಿ ಪ್ರಯೋಗಾಲಯದ ವ್ಯವಸ್ಥೆ ಕಲ್ಪಿಸಲಾಗಿದೆ. ಸರ್ಕಾರದಿಂದ ಕಾಲೇಜಿಗೆ ₹4.70 ಕೋಟಿ ಅನುದಾನ ಮಂಜೂರಾಗಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಅದನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮೇ 23ರ ನಂತರ ಹೆಚ್ಚುವರಿ ತರಗತಿ ಕೊಠಡಿ, ಎರಡು ಪ್ರಯೋಗಾಲಯಗಳ ನಿರ್ಮಾಣ ಕಾಮಗಾರಿಗೆ ಚಾಲನೆ ಕೊಡಲಾಗುವುದು’ ಎಂದು ಮಾಹಿತಿ ನೀಡಿದರು. 

‘ಮುಂದಿನ ಶೈಕ್ಷಣಿಕ ವರ್ಷದ ಆರಂಭದೊಳಗೆ ಕಟ್ಟಡ ನಿರ್ಮಾಣ ಕೆಲಸ ಪೂರ್ಣಗೊಳಿಸಲಾಗುವುದು. ಬಳಿಕ ಎಂ.ಎ. ಕನ್ನಡ, ರಾಜ್ಯಶಾಸ್ತ್ರ ಹಾಗೂ ಎಂ.ಕಾಂ. ಕೋರ್ಸ್‌ ಆರಂಭಿಸಲಾಗುವುದು. ಕಾಲೇಜಿನಲ್ಲಿ ಒಟ್ಟು 12 ಜನ ಬೋಧಕ ಸಿಬ್ಬಂದಿಯ ಕೆಲಸ ಕಾಯಂ ಇದೆ. 75 ಜನ ಅತಿಥಿ ಉಪನ್ಯಾಸಕರಿದ್ದಾರೆ. ಅದರಲ್ಲೂ ವಿಜ್ಞಾನ ವಿಭಾಗದಲ್ಲಿ ಬೋಧನೆ ಮಾಡುವವರೆಲ್ಲರೂ ಅತಿಥಿ ಉಪನ್ಯಾಸಕರೇ ಆಗಿದ್ದಾರೆ. ಈ ವಿಷಯವನ್ನು ಶಿಕ್ಷಣ ಇಲಾಖೆಯ ಗಮನಕ್ಕೆ ತರಲಾಗಿದೆ. ಕಾಯಂ ಉಪನ್ಯಾಸಕರನ್ನು ಕೊಟ್ಟರೆ ಫಲಿತಾಂಶದಲ್ಲಿ ಇನ್ನಷ್ಟು ಸುಧಾರಣೆ ಕಾಣಬಹುದು’ ಎಂದರು.

‘ವಿವಿಧ ಶಿಷ್ಯವೇತನಗಳನ್ನು ಬಳಸಿಕೊಳ್ಳುವಲ್ಲಿಯೂ ಕಾಲೇಜು ಹಿಂದೆ ಬಿದ್ದಿಲ್ಲ. ಹೋದ ವರ್ಷ 24 ಜನ ಹೆಣ್ಣು ಮಕ್ಕಳಿಗೆ ತಲಾ ₹24 ಸಾವಿರ ಸಂತೂರ್‌ ಶಿಷ್ಯವೇತನ, 23 ವಿದ್ಯಾರ್ಥಿಗಳಿಗೆ ತಲಾ ₹5 ಸಾವಿರ ಸಿ.ವಿ.ರಾಮನ್‌ ಶಿಷ್ಯವೇತನ, 101 ಜನಕ್ಕೆ ತಲಾ ₹2 ಸಾವಿರ ಸಂಚಿ ಹೊನ್ನಮ್ಮ ಶಿಷ್ಯವೇತನ, ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯಿಂದ ಎಂಟು ಮಂದಿಗೆ ತಲಾ ₹10 ಸಾವಿರ ಶಿಷ್ಯವೇತನ ಬಂದಿದೆ’ ಎಂದು ವಿವರಿಸಿದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !