ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖನಿಜ ಪ್ರತಿಷ್ಠಾನ ನಿಧಿ ಬಳಕೆ:ನಿಯಮ ಉಲ್ಲಂಘನೆ

ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವಶಂಕರ್
Last Updated 13 ಸೆಪ್ಟೆಂಬರ್ 2021, 6:16 IST
ಅಕ್ಷರ ಗಾತ್ರ

ಸಂಡೂರು: ಜಿಲ್ಲಾ ಖನಿಜ ಪ್ರತಿಷ್ಠಾನ ನಿಧಿಯ ಅನುದಾನದಿಂದ ಗಣಿ ಬಾಧಿತ ಪ್ರದೇಶಗಳಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡದೆ, ಮೂಲ ಸೌಕರ್ಯ ಹೆಸರಿನಲ್ಲಿ ರಸ್ತೆ, ಚರಂಡಿ ಕಾಮಗಾರಿ ನಡೆಸಿ ಹಣ ಲೂಟಿ ಮಾಡಲಾಗುತ್ತಿದೆ. ಖನಿಜ ಪ್ರತಿಷ್ಠಾನದ ನಿಯಮಗಳ ಉಲ್ಲಂಘನೆಯಾಗುತ್ತಿದೆ ಎಂದು ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಿ.ಎಸ್. ಶಿವಶಂಕರ್, ಸಿಐಟಿಯು ಸಂಚಾಲಕ ಜೆ.ಎಂ. ಚನ್ನಬಸಯ್ಯ ದೂರಿದರು.

ಸಂಡೂರಿನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ವಿ.ಎಸ್. ಶಿವಶಂಕರ್ ಅವರು ಮಾತನಾಡಿ, ಪ್ರಧಾನಮಂತ್ರಿ ಖನಿಜ ಕ್ಷೇತ್ರ ಕಲ್ಯಾಣ ಯೋಜನೆ ಮಾರ್ಗಸೂಚಿ ಅನ್ವಯ ಖನಿಜ ನಿಧಿಯ ಶೇ 60 ರಷ್ಟು ಹಣವನ್ನು ಕುಡಿಯುವ ನೀರು, ಪರಿಸರ ಸಂರಕ್ಷಣೆ, ಆರೋಗ್ಯ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕೌಶಲಾಭಿವೃದ್ಧಿಗೆ ಹಾಗೂ ಶೇ 40 ರಷ್ಟನ್ನು ಮೂಲ ಸೌಕರ್ಯ, ನೀರಾವರಿ, ಪರಿಸರ ಗುಣಮಟ್ಟ ಹೆಚ್ಚಳಕ್ಕೆ ಖರ್ಚು ಮಾಡಲು ಅವಕಾಶ ನೀಡಲಾಗಿದೆ. ಆದರ, ಗಣಿ ಬಾಧಿತ ಜಿಲ್ಲೆಗಳಲ್ಲಿ ಖನಿಜ ಪ್ರತಿಷ್ಠಾನದ ಮೂಲ ಆಶಯಗಳನ್ನು ಉಲ್ಲಂಘಿಸಲಾಗುತ್ತಿದೆ. ಹೆಚ್ಚಿನ ಪ್ರಮಾಣದ ಕಮಿಷನ್ ದೊರೆಯುವ ರಸ್ತೆ, ಚರಂಡಿ ಕಾಮಗಾರಿಗಳಿಗೆ ಹಣ ವಿನಯೋಗಿಸಲಾಗುತ್ತಿದೆ. ಕಾಮಗಾರಿಗಳನ್ನು ಗುತ್ತಿಗೆ ನೀಡುವ ಮೂಲಕ ಹಣವನ್ನು ಲೂಟಿ ಹೊಡೆಯಲಾಗುತ್ತಿದೆ ಎಂದು ಆರೋಪಿಸಿದರು.

ಜ 2021ರ ವರೆಗೆ ₹ 1364.87 ಕೋಟಿ ಸಂಗ್ರಹಿಸಿ, ₹ 2222.15 ಕೋಟಿ ಹಣಕ್ಕೆ ಅನುಮೋದನೆ ಪಡೆದು, ₹ 404 ಕೋಟಿ ಖರ್ಚು ಮಾಡಲಾಗಿದೆ. ₹ 960.44 ಕೋಟಿ ಹಣ ಉಳಿದಿದೆ ಎಂದು ರಾಜ್ಯ ಸರ್ಕಾರ ಮಾಹಿತಿ ನೀಡಿದೆ. ನಿಧಿಯ ಬಳಕೆಗಾಗಿ ರೂಪಿಸುವ ಕ್ರಿಯಾಯೋಜನೆಗಳಲ್ಲಿ ಸಮಗ್ರ ಅಭಿವೃದ್ಧಿ ದೃಷ್ಟಿಕೋನ ಕಾಣೆಯಾಗಿ, ಸಚಿವ-ಶಾಸಕರ ವೈಯಕ್ತಿಕ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಹಣ ಖರ್ಚಾಗುತ್ತಿದೆ. ಆದರೆ, ಗಣಿಭಾದಿತ ಪ್ರದೇಶಗಳಲ್ಲಿ ಅಭಿವೃದ್ಧಿಯ ಕುರುಹುಗಳು ಕಾಣುತ್ತಿಲ್ಲ. ಅನುದಾನ ಬಳಕೆ ತೃಪ್ತಿಕರವಾಗಿಲ್ಲ ಎಂದು ದೂರಿದರು.

ಗಣಿ ಬಾಧಿತ ಸಂಡೂರು ನಗರ ಸೇರಿದಂತೆ ಕೊಡಾಲು, ತಾಳೂರು ಗ್ರಾಮಗಳಲ್ಲಿ ಜನತೆ ಕುಡಿಯುವ ನೀರಿಗೆ ಪರದಾಡುತ್ತಿದ್ದಾರೆ. ಕುಮಾರಸ್ವಾಮಿ ದೇವಸ್ಥಾನ ಹಾಗೂ ಕಮ್ಮತ್ತೂರು ಗ್ರಾಮಗಳ ರಸ್ತೆಗಳು ದುಸ್ತಿತಿಯಲ್ಲಿವೆ. ಅಪಘಾತಗಳು ಹೆಚ್ಚುತ್ತಿವೆ. ತಾಲ್ಲೂಕಿನ ಹಲವು ಭಾಗಗಳಲ್ಲಿ ನೀರಾವರಿ ಯೋಜನೆಗಳಿಲ್ಲ. ಜನರ ಆರೋಗ್ಯ ಸ್ಥಿತಿ ಶೋಚನೀಯವಾಗಿದೆ. ಜಿಲ್ಲಾ ಖನಿಜ ಪ್ರತಿಷ್ಠಾನದ ಹಣವನ್ನು ಗಣಿ ಬಾಧಿತ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಉಪಯೋಗಿಸಬೇಕು ಎಂದು ಒತ್ತಾಯಿಸಿದರು. ವಿರುಪಾಕ್ಷಪ್ಪ, ಖಲಂದರ್, ಎ ಸ್ವಾಮಿ, ಕಾಲುಬ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT