ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಟ್ಟಿಗೆ ಒಲೆ ಮೇಲೆ ಚಹಾ ತಯಾರಿಸಿ ತಹಶೀಲ್ದಾರ್‌ ಕಚೇರಿ ಮುಂದೆ ಪ್ರತಿಭಟನೆ

Last Updated 7 ಜುಲೈ 2021, 11:42 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಕೇಂದ್ರ ಸರ್ಕಾರ ಸತತವಾಗಿ ತೈಲ ದರ ಹೆಚ್ಚಿಸುತ್ತಿರುವುದನ್ನು ವಿರೋಧಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್‌ (ಡಿವೈಎಫ್‌ಐ) ಕಾರ್ಯಕರ್ತರು ಬುಧವಾರ ನಗರದ ತಹಶೀಲ್ದಾರ್‌ ಕಚೇರಿ ಮುಂದೆ ಇಟ್ಟಿಗೆ ಒಲೆ ಮಾಡಿ, ಅದರ ಮೇಲೆ ಚಹಾ ತಯಾರಿಸಿ ವಿನೂತನವಾಗಿ ಪ್ರತಿಭಟನೆ ನಡೆಸಿದರು. ಬಳಿಕ ಅಲ್ಲಿದ್ದವರಿಗೆ ಚಹಾ ವಿತರಿಸಿದರು.

ಪ್ರತಿ ಲೀಟರ್‌ ಪೆಟ್ರೋಲ್‌ ಬೆಲೆ ಈಗಾಗಲೇ ₹100 ಗಡಿ ದಾಟಿದೆ. ಈಗ ಡೀಸೆಲ್‌ ಬೆಲೆ ಕೂಡ ಅದರ ಸನಿಹಕ್ಕೆ ಬರುತ್ತಿದೆ. ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌, ಅಡುಗೆ ಎಣ್ಣೆ, ಧಾನ್ಯಗಳ ಬೆಲೆ ಗಗನಕ್ಕೆ ಏರಿದೆ. ಕೋವಿಡ್‌ ಲಾಕ್‌ಡೌನ್‌ನಿಂದ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಈ ಕಷ್ಟಕಾಲದಲ್ಲಿ ಮೋದಿ ಸರ್ಕಾರ ಸತತವಾಗಿ ಬೆಲೆ ಹೆಚ್ಚಿಸುತ್ತಲೇ ಇದೆ. ಇದು ಜನವಿರೋಧಿ ಸರ್ಕಾರ. ಇದಕ್ಕೆ ಜನಸಾಮಾನ್ಯರ ಕಷ್ಟ, ನೋವು ಆಲಿಸಲು ಕಣ್ಣು, ಕಿವಿಗಳಿಲ್ಲ ಎಂದು ಮುಖಂಡರು ಜರಿದರು.

ಎರಡು ವರ್ಷಗಳಿಂದ ಕೊರೊನಾ ಇನ್ನಿಲ್ಲದಂತೆ ಕಾಡುತ್ತಿದೆ. ಅನೇಕರು ಕೆಲಸ ಕಳೆದುಕೊಂಡು ಮನೆಯಲ್ಲಿ ಕುಳಿತುಕೊಂಡಿದ್ದಾರೆ. ಹಲವರ ವ್ಯಾಪಾರ ವಹಿವಾಟು ನಿಂತು ಹೋಗಿದೆ. ಸಾಲ ಮಾಡಿದವರು ಅದನ್ನು ತೀರಿಸಲಾಗದೆ ಕಷ್ಟಕ್ಕೆ ಸಿಲುಕಿದ್ದಾರೆ. ಯುವಕರಿಗೆ ಹೊಸ ಉದ್ಯೋಗಗಳು ಸಿಗುತ್ತಿಲ್ಲ. ಇದರ ನಡುವೆ ಎಲ್ಲ ವಸ್ತುಗಳ ಬೆಲೆ ಏರಿಸಿ ಜನಸಾಮಾನ್ಯರ ಬದುಕನ್ನು ಬಿಜೆಪಿ ನರಕ ಮಾಡಿದೆ. ಎಲ್ಲ ವಸ್ತುಗಳ ಬೆಲೆ ಆದಷ್ಟು ಶೀಘ್ರ ಇಳಿಕೆ ಮಾಡದಿದ್ದಲ್ಲಿ ನಿರಂತರವಾಗಿ ಹೋರಾಟ ನಡೆಸಲಾಗುವುದು ಎಚ್ಚರಿಕೆ ನೀಡಿದರು.

ಫೆಡರೇಶನ್‌ ರಾಜ್ಯ ಘಟಕದ ಉಪಾಧ್ಯಕ್ಷ ಬಿಸಾಟಿ ಮಹೇಶ್‌, ಜಿಲ್ಲಾ ಅಧ್ಯಕ್ಷ ವಿ.ಸ್ವಾಮಿ, ತಾಲ್ಲೂಕು ಅಧ್ಯಕ್ಷ ಈಡಿಗರ ಮಂಜುನಾಥ, ಕಾರ್ಯದರ್ಶಿ ಕಲ್ಯಾಣಯ್ಯ, ಮುಖಂಡರಾದ ಕಿನ್ನಾಳ್‌ ಹನುಮಂತ, ಮರಡಿ ಜಂಬಯ್ಯ ನಾಯಕ, ತಾಯಪ್ಪ ನಾಯಕ, ಕೆ. ನಾಗರತ್ನಮ್ಮ, ಆರ್‌. ಭಾಸ್ಕರ್‌ ರೆಡ್ಡಿ, ಕೆ.ಎಂ. ಸಂತೋಷ್‌ ಕುಮಾರ್‌, ಪವನಕುಮಾರ್‌, ಸೂರ್ಯಕಿರಣ್‌, ಶಿವು, ಅಲ್ತಾಫ್‌, ಕುಲ್ಲಾಯಪ್ಪ, ಮಹಾಂತೇಶ್, ರಮೇಶ್, ಸತ್ಯಮೂರ್ತಿ, ಸಜ್ಜದ್ ಖಾನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT