ಗುರುವಾರ , ಸೆಪ್ಟೆಂಬರ್ 23, 2021
27 °C

ಮೂರಂಗಡಿ ವೃತ್ತದಲ್ಲಿ ಸಂಚಾರ ನಿರ್ಬಂಧ: ಎರಡನೇ ದಿನವೂ ತೆರವು ಮುಂದುವರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ: ಇಲ್ಲಿನ ಮೂರಂಗಡಿ ವೃತ್ತದಲ್ಲಿನ ದರ್ಗಾ ಮಸೀದಿಯ 21 ಮಳಿಗೆಗಳ ತೆರವು ಕಾರ್ಯಾಚರಣೆ ಎರಡನೇ ದಿನ ಮಂಗಳವಾರವೂ ಮುಂದುವರಿಯಿತು.

ಮೂರಂಗಡಿ ವೃತ್ತದಿಂದ ಉದ್ಯೋಗ ಪೆಟ್ರೋಲ್‌ ಬಂಕ್‌ ಹಾಗೂ ನಗರಸಭೆ ಕಚೇರಿಗೆ ಸಂಪರ್ಕ ಕಲ್ಪಿಸುವ ಎರಡೂ ರಸ್ತೆಗಳಲ್ಲಿ ಬ್ಯಾರಿಕೇಡ್‌ ಅಳವಡಿಸಿ, ಸಾರ್ವಜನಿಕ ಸಂಚಾರದ ಮೇಲೆ ನಿರ್ಬಂಧ ಹೇರಿ ಜೆ.ಸಿ.ಬಿ.ಯಿಂದ ಕಟ್ಟಡಗಳನ್ನು ತೆರವುಗೊಳಿಸುವ ಕೆಲಸ ನಡೆಯಿತು. ಎರಡು ಪ್ರಮುಖ ರಸ್ತೆಗಳಲ್ಲಿ ಸಂಚಾರದ ಮೇಲೆ ನಿರ್ಬಂಧ ಹೇರಿದ್ದರಿಂದ ಮಹಾತ್ಮ ಗಾಂಧಿ ವೃತ್ತದಲ್ಲಿ ಜನದಟ್ಟಣೆ ಉಂಟಾಗಿತ್ತು.

ತಹಶೀಲ್ದಾರ್‌ ಎಚ್‌. ವಿಶ್ವನಾಥ್‌ ನೇತೃತ್ವದಲ್ಲಿ ಕಾರ್ಯಾಚರಣೆ ಮುಂದುವರಿದಿದೆ. ಸ್ಥಳದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ.

ಸುಪ್ರೀಂಕೋರ್ಟ್‌ ಆದೇಶದ ಪ್ರಕಾರ, ನಗರದಲ್ಲಿನ ಧಾರ್ಮಿಕ ಕಟ್ಟಡಗಳ ಅತಿಕ್ರಮಣ ತೆರವು ಕೆಲಸವನ್ನು ತಾಲ್ಲೂಕು ಆಡಳಿತ ಕೈಗೆತ್ತಿಕೊಂಡಿದೆ. ಇತ್ತೀಚೆಗೆ ಧಾರವಾಡ ಹೈಕೋರ್ಟ್‌ ಸಂಚಾರಿ ಪೀಠದಿಂದ ತಡೆಯಾಜ್ಞೆ ತೆರವಾಗಿತ್ತು.

ಇದೇ ಭಾಗದಲ್ಲಿನ ಹೂವಿನ ಅಂಗಡಿಗಳ ಎದುರಿನ ಕಟ್ಟಡಗಳನ್ನು ತೆರವುಗೊಳಿಸಲು ನಿರ್ಧರಿಸಲಾಗಿದ್ದು, ಸೋಮವಾರ ಮಾರ್ಕಿಂಗ್‌ ಮಾಡಲಾಗಿದೆ. ಮಂಗಳವಾರ ಆಯಾ ಕಟ್ಟಡಗಳ ಮಾಲೀಕರು ಸ್ವಯಂಪ್ರೇರಣೆಯಿಂದ ವಸ್ತುಗಳನ್ನು ಬೇರೆಡೆ ಕೊಂಡೊಯ್ದು ತಾಲ್ಲೂಕು ಆಡಳಿತಕ್ಕೆ ಸಹಕರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು