ಶನಿವಾರ, ನವೆಂಬರ್ 28, 2020
18 °C
ಅಡೆತಡೆಯಿಲ್ಲದೆ ನಡೆಯುತ್ತಿರುವ ಕಲ್ಲು ಕ್ವಾರಿ ಗಣಿಗಾರಿಕೆ l ವನ್ಯಜೀವಿಗಳ ವಾಸಸ್ಥಳ ನಾಶವಾಗುವ ಭೀತಿ

ಹಂಪಿ ಕೋರ್‌ ಜೋನ್‌ನಲ್ಲಿ ನಿತ್ಯ ಸ್ಫೋಟ!

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ವಿಶ್ವ ಪ್ರಸಿದ್ಧ ಹಂಪಿಯ ಕೋರ್‌ ಜೋನ್‌ನಲ್ಲಿ ನಿತ್ಯ ಸ್ಫೋಟಗಳು ಸಾಮಾನ್ಯವಾಗಿದ್ದು, ಸುತ್ತಮುತ್ತಲಿನ ಸ್ಮಾರಕಗಳು, ಜೀವ ಸಂಕುಲಕ್ಕೆ ಕಂಟಕ ಎದುರಾಗಿದೆ.

ಕಲ್ಲು ಕ್ವಾರಿ ಗಣಿಗಾರಿಕೆಗೆ ಯಾವುದೇ ಅಡೆತಡೆಯಿಲ್ಲದೆ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಸ್ಫೋಟ ನಡೆಸಲಾಗುತ್ತಿದೆ.  ‘ಪ್ರಜಾವಾಣಿ’ ಖುದ್ದು ಆ ಪರಿಸರಕ್ಕೆ ಭೇಟಿ ನೀಡಿದ ವೇಳೆ ಈ ವಿಷಯ ಗಮನಕ್ಕೆ ಬಂದಿದೆ.  

ಹಂಪಿಗೆ ಹೊಂದಿಕೊಂಡಂತೆ ಇರುವ ತಾಲ್ಲೂಕಿನ ಕಾಳಘಟ್ಟ, ಧರ್ಮದಗುಡ್ಡ ಸಮೀಪದ ಬೆಟ್ಟಗುಡ್ಡಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಕಲ್ಲು ಕ್ವಾರಿ ಗಣಿಗಾರಿಕೆ ನಡೆಯುತ್ತಿದೆ. ಈ ಭಾಗದಲ್ಲಿ ಅಲ್ಲಲ್ಲಿ ವಿಜಯನಗರ ಸಾಮ್ರಾಜ್ಯದ ಕುರುಹುಗಳು, ಸ್ಮಾರಕಗಳಿವೆ. ಅಷ್ಟೇ ಅಲ್ಲ, ಚಿರತೆ, ಕರಡಿ, ನವಿಲು ಹಾಗೂ ವಿವಿಧ ಜಾತಿಯ ಪಕ್ಷಿಗಳು ನೆಲೆಸಿವೆ. ಆದರೆ, ಗಣಿಗಾರಿಕೆಯಿಂದ ಅವುಗಳ ವಾಸ ಸ್ಥಳ ನಾಶವಾಗುವ ಭೀತಿ ಎದುರಾಗಿದೆ. 

‘ಹಂಪಿ ಸ್ಮಾರಕಗಳಿಗೆ ಯಾವುದೇ ರೀತಿಯಿಂದ ಹಾನಿ ಉಂಟಾಗದಿರಲೆಂದು ಕೋರ್‌ಜೋನ್‌ ಮಾಡಲಾಗಿದೆ. ಆದರೆ, ಅದನ್ನು ಉಲ್ಲಂಘಿಸಿ, ಕಲ್ಲು ಕ್ವಾರಿ ಗಣಿಗಾರಿಕೆ ನಡೆಸುತ್ತಿರುವುದು ಸರಿಯಲ್ಲ. ಸ್ಫೋಟ ನಡೆಸಿದಾಗ ಸುತ್ತಮುತ್ತಲಿನ ಊರುಗಳಲ್ಲಿ ಶಬ್ದ ಕೇಳಿಸುತ್ತದೆ. ಹೀಗಿದ್ದರೂ ಜಿಲ್ಲಾಡಳಿತ ಮೌನ ವಹಿಸಿರುವುದು ಸರಿಯಲ್ಲ. ಇದನ್ನು ತಡೆಯದಿದ್ದಲ್ಲಿ ಬೀದಿಗಿಳಿದು ಹೋರಾಡಲಾಗುವುದು’ ಎಂದು ವಿಜಯನಗರ ಸ್ಮಾರಕ, ಸಂಸ್ಕೃತಿ ಸಂರಕ್ಷಣ ಸೇನೆ ಅಧ್ಯಕ್ಷ ವಿಶ್ವನಾಥ್‌ ಮಾಳಗಿ ತಿಳಿಸಿದ್ದಾರೆ.

‘ಕಾಳಘಟ್ಟ ಸಮೀಪ ನನ್ನ ಜಮೀನಿದೆ. ಮೊದಲಿನಿಂದಲೂ ಈ ಭಾಗದ ಬೆಟ್ಟಗುಡ್ಡಗಳಲ್ಲಿ ಚಿರತೆ, ಕರಡಿ ಸೇರಿದಂತೆ ಇತರೆ ಪ್ರಾಣಿ, ಪಕ್ಷಿಗಳಿವೆ. ಆಗಾಗ ರೈತರ ಹೊಲಗಳಲ್ಲಿಯೂ ಕಾಣಿಸಿಕೊಳ್ಳುತ್ತವೆ. ಸ್ಫೋಟ ಆರಂಭವಾದಾಗಿನಿಂದ ಯಾವ ಪ್ರಾಣಿಗಳೂ ಕಾಣಿಸಿಕೊಳ್ಳುತ್ತಿಲ್ಲ’ ಎಂದು ರೈತ ಚನ್ನಪ್ಪ ತಿಳಿಸಿದ್ದಾರೆ.

‘ಈ ಹಿಂದೆ ಅಲ್ಲಲ್ಲಿ ಕೆಲವರು ಸಣ್ಣ ಪ್ರಮಾಣದಲ್ಲಿ ಗಣಿಗಾರಿಕೆ ಮಾಡುತ್ತಿದ್ದರು. ಆದರೆ, ಕೆಲ ತಿಂಗಳಿಂದ ಇದು ಹೆಚ್ಚಾಗಿದೆ. ಎಷ್ಟೋ ಸಲ ನಾನು ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಸ್ಫೋಟದಿಂದ ಕಲ್ಲಿನ ಚೂರುಗಳು ಬಂದು ಬಿದ್ದಿವೆ. ಹೀಗೆ ಕಲ್ಲಿನ ಚೂರುಗಳು ಬಂದು ತಾಕುವುದರಿಂದ ರೈತರು ಭಯದಲ್ಲಿ ಕೆಲಸ ಮಾಡುವಂತಾಗಿದೆ’ ಎಂದರು.

‘ನವರಾತ್ರಿಗೆ ಧರ್ಮದಗುಡ್ಡದ ಚನ್ನಬಸವಣ್ಣ ದೇವಸ್ಥಾನದಲ್ಲಿ ನಿತ್ಯ ಪೂಜೆ ನಡೆಯುತ್ತಿದೆ. ನೂರಾರು ಜನ ದೇವಸ್ಥಾನಕ್ಕೆ ಭೇಟಿ ಕೊಡುತ್ತಿದ್ದಾರೆ. ಆಯುಧಪೂಜೆ, ವಿಜಯದಶಮಿ ದಿನ ಸಾವಿರಾರು ಜನ ಸೇರುತ್ತಾರೆ. ಅವರಿಗೆ ಏನಾದರೂ ತೊಂದರೆಯಾದರೆ ಯಾರು ಹೊಣೆ’ ಎಂದು ಅವರು ಪ್ರಶ್ನಿಸಿದ್ದಾರೆ.

***

ಧರ್ಮದಗುಡ್ಡ ಸುತ್ತಮುತ್ತಲಿನ ಪ್ರದೇಶದಲ್ಲಿ ವಿಶಿಷ್ಟ ಪ್ರಾಣಿ, ಪಕ್ಷಿ ಸಂಕುಲವಿದೆ. ಗಣಿಗಾರಿಕೆ ನಡೆಸಿದರೆ ಅದೆಲ್ಲ ನಾಶವಾಗಲಿದೆ. ಕೂಡಲೇ ಗಣಿಗಾರಿಕೆ ತಡೆಯಬೇಕು.

–ಸಮದ್‌ ಕೊಟ್ಟೂರು, ವನ್ಯಜೀವಿ ತಜ್ಞ

***

ಆ ಸ್ಥಳದಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ಪರಿಶೀಲಿಸಿದ ನಂತರ ಕಾನೂನು ಕ್ರಮ ಕೈಗೊಳ್ಳಲಾಗುವುದು.

–ಎಸ್‌.ಎಸ್‌. ನಕುಲ್‌, ಜಿಲ್ಲಾಧಿಕಾರಿ, ಬಳ್ಳಾರಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು