ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈರ್ಮಲ್ಯಕ್ಕೆ ಎಲ್ಲರ ಸಹಕಾರ ಅಗತ್ಯ: ಮನ್ಸೂರ್‌ ಅಲಿ

Last Updated 6 ಆಗಸ್ಟ್ 2021, 11:13 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ‘ನಗರವನ್ನು ಸ್ವಚ್ಛ ಹಾಗೂ ನೈರ್ಮಲ್ಯದಿಂದ ಇಟ್ಟುಕೊಳ್ಳಬೇಕಾದರೆ ಎಲ್ಲರ ಸಹಕಾರ ಅಗತ್ಯ’ ಎಂದು ನಗರಸಭೆ ಪೌರಾಯುಕ್ತ ಮನ್ಸೂರ್‌ ಅಲಿ ತಿಳಿಸಿದರು.

ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಪ್ರೌಢದೇವರಾಯ ತಾಂತ್ರಿಕ ಕಾಲೇಜಿನ ಸಹಭಾಗಿತ್ವದಲ್ಲಿ ಗುರುವಾರ ನಗರದಲ್ಲಿ ಏರ್ಪಡಿಸಿದ್ದ ‘ಸ್ವಚ್ಛ ನಗರ- ಹಸಿರು ನಗರ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಮಹಾತ್ಮ ಗಾಂಧೀಜಿ ಸ್ವಾತಂತ್ರ್ಯಕ್ಕಿಂತ ನೈರ್ಮಲ್ಯ ಮುಖ್ಯ ಎಂದು ಹೇಳಿದರು. ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ಗಾಂಧಿ ಜೀವನ ವಿಧಾನದ ಅವಿಭಾಜ್ಯ ಅಂಗವಾಗಿಸಿದ್ದರು. ದೈಹಿಕ ಯೋಗಕ್ಷೇಮ ಮತ್ತು ಆರೋಗ್ಯಕರ ವಾತಾವರಣಕ್ಕೆ ಸ್ವಚ್ಛತೆ ಅತಿ ಮುಖ್ಯ ಎಂದು ಹೇಳಿದ್ದರು’ ಎಂದು ನೆನಪಿಸಿದರು.

‘ಕೊರೊನಾ ಸಾಂಕ್ರಾಮಿಕ ಪಿಡುಗಿನ ಈ ಸಂದರ್ಭದಲ್ಲಿ ನೈರ್ಮಲ್ಯದ ಪ್ರಾಮುಖ್ಯತೆ ಎಲ್ಲರಿಗೂ ಅರಿವಾಗುತ್ತಿದೆ. ಸ್ವಚ್ಛತೆ, ನೈರ್ಮಲ್ಯದ ಬಗ್ಗೆ ಜನಜಾಗೃತಿ ಮೂಡಿಸಲು ಕಾಲೇಜು ವಿದ್ಯಾರ್ಥಿಗಳು ಮುಂದಾಗಿರುವುದು ಸ್ವಾಗತಾರ್ಹ’ ಎಂದರು.

ಪ್ರೌಢದೇವರಾಯ ಕಾಲೇಜಿನ ಪ್ರಾಚಾರ್ಯ ಎಸ್.ಎಂ.ಶಶಿಧರ್, ‘ತಾಂತ್ರಿಕ ವಿದ್ಯಾರ್ಥಿಗಳು ಕೇವಲ ಪುಸ್ತಕದ ಹುಳುಗಳಾಗಬಾರದು. ಸಾಮಾಜಿಕ ಸಮಸ್ಯೆಗಳನ್ನು ಗುರುತಿಸಿ ಅವುಗಳಿಗೆ ಪರಿಹಾರ ಒದಗಿಸುವುದು ತಂತ್ರಜ್ಞಾನದ ಮುಖ್ಯ ಧ್ಯೇಯವಾಗಿದೆ. ಈ ಉದ್ದೇಶಕ್ಕಾಗಿ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಸಂಸ್ಥೆಯು ಬಿ.ಇ ಪದವಿ ಪಡೆಯಲು ನಾಲ್ಕು ವರ್ಷಗಳಲ್ಲಿ ಸುಮಾರು ನಾಲ್ಕು ನೂರು ಗಂಟೆಗಳ ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದನ್ನು ಕಡ್ಡಾಯಗೊಳಿಸಿದೆ’ ಎಂದರು.

ಆರೋಗ್ಯ ಅಧಿಕಾರಿ ವೆಂಕಟೇಶ್ ಕುಮಾರ್, ಎಂಜಿನಿಯರ್ ತೇಜಸ್ವಿನಿ, ಪ್ರೌಢದೇವರಾಯ ಕಾಲೇಜಿನ ಸಿವಿಲ್ ವಿಭಾಗದ ಮುಖ್ಯಸ್ಥ ಶಿವಕೇಶವ ಕುಮಾರ್, ಪ್ರಾಧ್ಯಾಪಕರಾದ ಪ್ರಶಾಂತ್, ಬಸವರಾಜ್ ಆರ್, ರಜನಿ, ವೇದಾ, ಲೋಕೇಶ್, ವಿದ್ಯಾರ್ಥಿಗಳಾದ ಶ್ರೇಯಸ್ ಸೊಲ್ಲಾಪುರ, ಅಮೃತಾ ಕೊಟ್ಟೂರು, ಅಖೀವ್ ಜಾವೀದ್, ಆಕಾಶ್, ಮಣಿಕಂಠ, ಇತೇಂದ್ರ, ಪ್ರಮೋದ್ ಇದ್ದರು. ಇದಕ್ಕೂ ಮುನ್ನ ನಗರಾಭಿವೃದ್ಧಿ ಪ್ರಾಧಿಕಾರ ವೃತ್ತ, ಮುನ್ಸಿಪಲ್‌ ಮೈದಾನದಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT