ಶುಕ್ರವಾರ, ಜನವರಿ 24, 2020
16 °C
ಕಮಲಾಪುರದ ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನ

ಉದ್ಯಾನದ ಭದ್ರತೆಗೆ ಮಾಜಿ ಯೋಧರು

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ತಾಲ್ಲೂಕಿನ ಕಮಲಾಪುರ ಬಿಳಿಕಲ್‌ ಸಂರಕ್ಷಿತ ಅರಣ್ಯ ಪ್ರದೇಶದ ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನದ ಭದ್ರತೆಗೆ ಮಾಜಿ ಯೋಧರನ್ನು ನಿಯೋಜಿಸಲು ತೀರ್ಮಾನಿಸಲಾಗಿದೆ.

ಒಟ್ಟು ಏಳು ಜನ ಮಾಜಿ ಯೋಧರು ಹಗಲು–ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸುವರು. ಪಾರ್ಕಿಂಗ್‌ ಸ್ಥಳ, ಹುಲಿ, ಸಿಂಹ ಸಫಾರಿ ಹಾಗೂ ಕಿರು ಮೃಗಾಲಯದ ಬಳಿ ಜನರ ಓಡಾಟದ ಮೇಲೆ ಹದ್ದಿನ ಕಣ್ಣಿಡುವರು. ಅವರೊಂದಿಗೆ ಉದ್ಯಾನ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಕೆಲಸ ನಿರ್ವಹಿಸುವರು.

ಈ ಕುರಿತು ಉದ್ಯಾನದ ವತಿಯಿಂದ ಕರ್ನಾಟಕ ಮೃಗಾಲಯ ಪ್ರಾಧಿಕಾರಕ್ಕೆ ತಿಂಗಳ ಹಿಂದೆ ಪ್ರಸ್ತಾವ ಸಲ್ಲಿಸಲಾಗಿತ್ತು. ಅದಕ್ಕೆ ಪ್ರಾಧಿಕಾರ ಇತ್ತೀಚೆಗೆ ಅನುಮತಿ ಕೊಟ್ಟಿದೆ. ಒಂದು ತಿಂಗಳೊಳಗೆ ನೇಮಕ ಪ್ರಕ್ರಿಯೆ ಪೂರ್ಣಗೊಳಲಿದ್ದು, ಅದರ ಬಳಿಕ ಕರ್ತವ್ಯಕ್ಕೆ ಹಾಜರಾಗುವರು.

‘149 ಹೆಕ್ಟೇರ್‌ ಪ್ರದೇಶದಲ್ಲಿ ವಿಸ್ತರಿಸಿಕೊಂಡಿರುವ ಉದ್ಯಾನಕ್ಕೆ ಸೂಕ್ತವಾದ ಭದ್ರತೆಯ ಅಗತ್ಯವಿತ್ತು. ಹೀಗಾಗಿ ಪ್ರಾಧಿಕಾರಕ್ಕೆ ಮಾಜಿ ಯೋಧರ ನಿಯೋಜನೆಗೆ ಸಂಬಂಧಿಸಿದಂತೆ ಪತ್ರ ಬರೆಯಲಾಗಿತ್ತು. ಅವರು ಸಕಾರಾತ್ಮಕವಾಗಿ ಸ್ಪಂದಿಸಿ ಅನುಮತಿ ಕೊಟ್ಟಿದ್ದಾರೆ. ಇಷ್ಟರಲ್ಲೇ ಎಲ್ಲಾ ಪ್ರಕ್ರಿಯೆ ಮುಗಿಯಲಿದ್ದು, ಒಂದು ತಿಂಗಳೊಳಗೆ ಕರ್ತವ್ಯಕ್ಕೆ ಬರುವರು’ ಎಂದು ಉದ್ಯಾನದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೋನಲ್‌ ವೃಶಿಣಿ ಶುಕ್ರವಾರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಉದ್ಯಾನ ಪೂರ್ಣ ಪ್ರಮಾಣದಲ್ಲಿ ಆರಂಭಗೊಂಡ ನಂತರ ಪ್ರವಾಸಿಗರು ಬರುವುದು ಹೆಚ್ಚಾಗಿದೆ. ಅದರಲ್ಲೂ ವಾರಾಂತ್ಯದಲ್ಲಿ ಹೆಚ್ಚಿನ ಜನದಟ್ಟಣೆ ಕಂಡು ಬರುತ್ತಿದೆ. ಸನಿಹದಲ್ಲೇ ಹಂಪಿ ಇರುವುದರಿಂದ ಅಲ್ಲಿಗೆ ಬಂದವರು ಉದ್ಯಾನಕ್ಕೆ ಭೇಟಿ ಕೊಡುತ್ತಿದ್ದಾರೆ. ಎಲ್ಲರ ಮೇಲೆ ನಿಗಾ ವಹಿಸುವುದು ಬಹಳ ಅಗತ್ಯ. ಸಿಂಹ, ಹುಲಿ, ಚಿರತೆ, ಕರಡಿ ಸೇರಿದಂತೆ ಹಲವು ಜಾತಿಯ ಪ್ರಾಣಿಗಳಿವೆ. ಸ್ವಲ್ಪ ಹೆಚ್ಚು ಕಡಿಮೆಯಾದರೂ ಸಮಸ್ಯೆ ಉಂಟಾಗಬಹುದು. ಹಾಗಾಗಿ ಮುಂಜಾಗರೂಕತಾ ಕ್ರಮವಾಗಿ ಮಾಜಿ ಯೋಧರನ್ನು ನಿಯೋಜಿಸಲಾಗುತ್ತಿದೆ’ ಎಂದು ಹೇಳಿದರು.

‘ಉದ್ಯಾನದ ಪರಿಸರಕ್ಕೆ ಎಲ್ಲಾ ಪ್ರಾಣಿಗಳು ಹೊಂದಿಕೊಂಡಿವೆ. ಇಷ್ಟು ದಿನ ಉದ್ಯಾನದಲ್ಲಿನ ಕೊಳವೆಬಾವಿಗಳಿಂದ ನೀರು ಪೂರೈಸುತ್ತಿದ್ದೆವು. ಈಗ ತುಂಗಭದ್ರಾ ಜಲಾಶಯದ ಕೆಳಮಟ್ಟದ ಕಾಲುವೆಯಿಂದ ನೀರು ಬಳಸಿಕೊಳ್ಳಲು ಅನುಮತಿ ಸಿಕ್ಕಿದೆ. ಪೈಪ್‌ಲೈನ್‌ ಕೆಲಸ ಪ್ರಗತಿಯಲ್ಲಿದೆ. ಅದರಿಂದ ಉದ್ಯಾನದ ಹಳ್ಳ, ಕೊಳ್ಳಗಳನ್ನು ತುಂಬಿಸಿಕೊಳ್ಳಲಾಗುವುದು. ಅಷ್ಟೇ ಅಲ್ಲ, ಹಸಿರು ಬೆಳೆಸಲು ಇನ್ನಷ್ಟು ಸಹಾಯವಾಗಲಿದೆ’ ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು