ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಶ್ವತ ಪರಿಹಾರಕ್ಕೆ ರೈತರ ಒತ್ತಾಯ

ಅರಣ್ಯ ಜಮೀನಿನಲ್ಲಿ ಉಳುಮೆ: ರೈತರು,ಅಧಿಕಾರಿಗಳ ಸಭೆ
Last Updated 15 ಸೆಪ್ಟೆಂಬರ್ 2020, 7:03 IST
ಅಕ್ಷರ ಗಾತ್ರ

ಸಂಡೂರು: ತಾಲ್ಲೂಕಿನ ತೋರಣಗಲ್ಲು ಹೋಬಳಿಯ ಎಂ.ಲಕ್ಕಲಹಳ್ಳಿ, ಮೆಟ್ರಿಕಿ, ರಾಮಸಾಗರ ಮುಂತಾದ ಗ್ರಾಮಗಳಲ್ಲಿನ ಅರಣ್ಯ ಜಮೀನಿನಲ್ಲಿ ಉಳುಮೆ ಮಾಡುತ್ತಿರುವ ರೈತರು ಹಾಗೂ ಅರಣ್ಯ ಇಲಾಖೆ ನಡುವೆ ಉದ್ಭವಿಸಿರುವ ಸಮಸ್ಯೆ ಚರ್ಚಿಸಲು ಸೋಮವಾರ ಅಧಿಕಾರಿಗಳು ಹಾಗೂ ರೈತರ ಸಭೆ ನಡೆಯಿತು.

ಎಂ.ಲಕ್ಕಲಹಳ್ಳಿ ಗ್ರಾಮದ ರೈತರಾದ ಹನುಮಂತಪ್ಪ, ನುಂಕಪ್ಪ, ಮಾದಪ್ಪ, ತಿಪ್ಪೇಸ್ವಾಮಿ, ಬಸಪ್ಪ ಮಾತನಾಡಿದ, ‘ಎಂ.ಲಕ್ಕಲಹಳ್ಳಿ ಮತ್ತು ಸುತ್ತಲಿನ ಗ್ರಾಮಗಳಲ್ಲಿನ 2,000 ಎಕರೆ ಅರಣ್ಯ ಜಮೀನಿನಲ್ಲಿ ದಶಕಗಳಿಂದ ಉಳುಮೆ ಮಾಡುತ್ತಿದ್ದೇವೆ. ಉಳುಮೆ ಮಾಡುವ ಜಮೀನಿಗೆ ಪಹಣಿಯನ್ನೂ ನೀಡಲಾಗಿದೆ. ತೆರಿಗೆ ಕಟ್ಟಿದ್ದೇವೆ. ಅರಣ್ಯ ಹಕ್ಕು ಸಮಿತಿಯಲ್ಲಿ ಹಾಕಿದ ಅರ್ಜಿಗಳು ತಿರಸ್ಕೃತವಾಗಿವೆ. ನಮ್ಮ ಬಳಿ ಕೈಯಲ್ಲಿ ಬರೆದುಕೊಟ್ಟ ಪಹಣಿ ಪತ್ರಗಳು ಮಾತ್ರ ಇವೆ ಎಂದು ತಿಳಿಸಿದರು.

ನಾವು ಉಳುಮೆ ಮಾಡುತ್ತಿದ್ದ ಜಮೀನು ಅರಣ್ಯ ಇಲಾಖೆಗೆ ಸೇರಿದೆ ಎಂದು ಹೇಳುತ್ತಿರುವ ಅರಣ್ಯ ಇಲಾಖೆಯ ಅಧಿಕಾರಿಗಳು ಉಳುಮೆ ಮಾಡಲು ಬಿಡುತ್ತಿಲ್ಲ. ಉಳುಮೆಗೆ ಅವಕಾಶ ನೀಡಬೇಕು’ ಎಂದು ತಮ್ಮ ಅಳಲು ತೋಡಿಕೊಂಡರು.

ಮುಖಂಡರಾದ ತಿರುಮಲ, ರಾಘವೇಂದ್ರ, ಹೊಸಗೇರಪ್ಪ ಮಾತನಾಡಿ, ’70–80 ವಷಗಳಿಂದ ಉಳುಮೆ ಮಾಡುತ್ತಿರುವ ರೈತರಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಸುತ್ತಲಿನ ಗ್ರಾಮಗಳಲ್ಲಿನ ಕಂದಾಯ ಜಮೀನನ್ನು ಗುರುತಿಸಿ ಅರಣ್ಯ ಜಮೀನುಗಳಲ್ಲಿ ಉಳುಮೆ ಮಾಡುತ್ತಿರುವ ರೈತರಿಗೆ ಭೂಮಿ ನೀಡಬೇಕು. ರೈತರಿಗೆ ಅನ್ಯಾಯ ಆಗದಂತೆ ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿ ಕಾರಿ ಸಿದ್ಧರಾಮಪ್ಪ ಮಾತನಾಡಿ, ‘ಅರಣ್ಯ ಜಮೀನನ್ನು ಬಿಟ್ಟುಕೊಡಲು ಬರುವುದಿಲ್ಲ. ಇದಕ್ಕೆ ಕಾನೂನು ತಿದ್ದುಪಡಿಯಾಗಬೇಕು. ಕಂದಾಯ ಭೂಮಿ ಗುರುತಿಸಿ ಅರಣ್ಯ ಭೂಮಿಯಲ್ಲಿ ಉಳುಮೆ ಮಾಡುತ್ತಿರುವ ರೈತರಿಗೆ ಕೊಡುವ ರೈತರ ಪ್ರಸ್ತಾವ ಮತ್ತು ಅರಣ್ಯ ಹಕ್ಕು ಸಮಿತಿಯಲ್ಲಿ ತಿರಸ್ಕೃತವಾಗಿರುವ ಅರ್ಜಿಗಳನ್ನು ಪುನರ್ ಪರಿಶೀಲಿಸುವ ಕುರಿತು ಜಿಲ್ಲಾಧಿಕಾರಿ ಜತೆ ಚರ್ಚಿಸಲಾಗುವುದು’ ಎಂದರು.

‘ಪರ್ಯಾಯ ಜಮೀನಿನ ವ್ಯವಸ್ಥೆ ಕಲ್ಪಿಸುವ ವರೆಗೆ ಉಳುಮೆಗೆ ಅವಕಾಶ ನೀಡಿ’ ಎಂದು ರೈತರು ಒತ್ತಾಯಿಸಿದರು.

ಈ ಕುರಿತು ಜಿಲ್ಲಾಧಿಕಾರಿ ಜತೆ ಚರ್ಚಿಸುವುದಾಗಿ ಅಧಿಕಾರಿಗಳು ತಿಳಿಸಿದರು.

ಪ್ರೊಬೇಷನರಿ ಐಎಎಸ್ ಅಧಿಕಾರಿ ರಾಹುಲ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಕಂಟೆಪ್ಪ, ಡಿವೈಎಸ್‍ಪಿ ಜಿ.ಹರೀಶ್, ತಹಶೀಲ್ದಾರ್ ಎಚ್.ಜೆ.ರಶ್ಮಿ, ವಲಯ ಅರಣ್ಯಾಧಿಕಾರಿಗಳಾದ ಎಸ್.ವಿ.ಮಂಜುನಾಥ್, ಡಿ.ಸೋಮಶೇಖರ ರೆಡ್ಡಿ, ಸಯ್ಯದ್ ದಾದಾ ಖಲಂದರ್, ಸರ್ಕಲ್ ಇನ್‍ಸ್ಪೆಕ್ಟರ್ ಎಂ.ಉಮೇಶ್, ಮುಖಂಡ ಡಿ.ರಾಘವೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT