ಗುರುವಾರ , ಜನವರಿ 21, 2021
25 °C

ಹಳ್ಳಿಗಳಲ್ಲಿ ರೈತರ ಆಗ್ರಹ ಜಾಥಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ರೈತ–ಕೃಷಿ ಕಾರ್ಮಿಕ (ಆರ್‌ಕೆಎಸ್‌) ಸಂಘಟನೆಯಿಂದ ಶುಕ್ರವಾರ ತಡಸಂಜೆ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ‘ರೈತರ ಆಗ್ರಹ ಜಾಥಾ’ ನಡೆಸಲಾಯಿತು.

ತಾಲ್ಲೂಕಿನ ಕಮಲಾಪುರ, ಉಪ್ಪಾರಹಳ್ಳಿ, ನಲ್ಲಾಪುರ, ಚಿನ್ನಾಪುರ, ಹೊಸಮಲಪನಗುಡಿ, ಹಳೆಮಲಪನಗುಡಿ, ಕೊಂಡನಾಯಕನಹಳ್ಳಿ, ಬೆನಕಾಪುರ, ನಾಗೇನಹಳ್ಳಿ, ಬಸವನದುರ್ಗ, ಡಣಾಪುರ ಗ್ರಾಮದಲ್ಲಿ ಜಾಥಾ ನಡೆಸಿದ ಕಾರ್ಯಕರ್ತರು ಮೂರು ಕೃಷಿ ಕಾಯ್ದೆಗಳಿಂದ ರೈತರಿಗಾಗುವ ಸಮಸ್ಯೆಗಳನ್ನು ಬಿಚ್ಚಿಟ್ಟರು.

ಪಂಜಾಬಿನ ವಿಕ್ರಂ ಸಿಂಗ್‌, ಕರಣ್‌ ಸಿಂಗ್‌ ಮಾತನಾಡಿ, ‘ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿರುವ ಮೂರು ಕೃಷಿ ಕಾಯ್ದೆಗಳು ರೈತರಿಗೆ ಮಾರಕವಾಗಿವೆ. ಈ ಕಾಯ್ದೆಗಳಿಂದ ಕಾರ್ಪೊರೇಟ್‌ನವರಿಗೆ ಅನುಕೂಲ ಹೊರತು ರೈತರಿಗಲ್ಲ. ಈ ಕಾಯ್ದೆಗಳಿಂದ ರೈತರ ಬದುಕು ಹಸನಾಗಲಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ’ ಎಂದರು.

‘ನವದೆಹಲಿಯಲ್ಲಿ ದೇಶದ ವಿವಿಧ ಭಾಗದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ದಿನೇ ದಿನೇ ಅದಕ್ಕೆ ಅಪಾರ ಬೆಂಬಲ ವ್ಯಕ್ತವಾಗುತ್ತಿದೆ. ಹೀಗಿದ್ದರೂ ಕೇಂದ್ರ ಹಠಮಾರಿ ಧೋರಣೆ ಅನುಸರಿಸುತ್ತಿದೆ. ಇದು ಸರಿಯಲ್ಲ. ದೇಶದ ಎಲ್ಲ ರೈತರು ಅದರ ವಿರುದ್ಧ ಧ್ವನಿ ಎತ್ತಬೇಕು. ಇಲ್ಲವಾದಲ್ಲಿ ಭವಿಷ್ಯದಲ್ಲಿ ರೈತರು ಅವರ ಜಮೀನಿನಲ್ಲಿಯೇ ಜೀತದಾಳುಗಳಾಗಿ ಕೆಲಸ ಮಾಡುವ ದಿನಗಳು ದೂರವಿಲ್ಲ’ ಎಂದು ಎಚ್ಚರಿಸಿದರು.

ಎಐಡಿಎಸ್‍ಒ ವಿದ್ಯಾರ್ಥಿ ಸಂಘಟನೆಯ ರಾಷ್ಟ್ರೀಯ ಉಪಾಧ್ಯಕ್ಷ ಪ್ರಮೋದ್, ‘ಇದುವರೆಗೆ ಆಹಾರ ಧಾನ್ಯ ಸರ್ಕಾರ ಮಾತ್ರ ಸಂಗ್ರಹಿಸಿ ಇಡಬಹುದಿತ್ತು. ಹೊಸ ಕಾಯ್ದೆ ಪ್ರಕಾರ ಯಾರು ಬೇಕಾದರೂ ಸಂಗ್ರಹಿಸಬಹುದು. ಇದರಿಂದಾಗಿ ಬರುವ ದಿನಗಳಲ್ಲಿ ಹಣವಿದ್ದವರೂ ಖರೀದಿಸಿ, ಸಂಗ್ರಹಿಸಿ ಮಾರುಕಟ್ಟೆಯಲ್ಲಿ ಕೃತಕವಾಗಿ ಬೆಲೆ ಹೆಚ್ಚಿಸಬಹುದು’ ಎಂದು ಆತಂಕ ವ್ಯಕ್ತಪಡಿಸಿದರು.

ಆರ್‌ಕೆಎಸ್ ಮುಖಂಡರಾದ ಹನುಮಂತಪ್ಪ, ಗೋವಿಂದ್, ಎಐಡಿವೈಒ ಮುಖಂಡರಾದ ಯರ್ರಿಸ್ವಾಮಿ, ಹುಲಗಪ್ಪ, ಕಲ್ಮೇಶ್, ಗೌಸ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.