ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ: ಜನರ ಸಮ್ಮುಖದಲ್ಲಿ ದೇವರ ನಿಶ್ಚಿತಾರ್ಥ!

ಹಂಪಿಯಲ್ಲಿ ತಡರಾತ್ರಿ ನಡೆದ ಕಾರ್ಯಕ್ರಮಕ್ಕೆ ಅಪಾರ ಜನಸ್ತೋಮ ಸಾಕ್ಷಿ
Last Updated 15 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ಹೊಸಪೇಟೆ: ಅದೊಂದು ಅಪರೂಪದ ನಿಶ್ಚಿತಾರ್ಥ ಕಾರ್ಯಕ್ರಮ. ಅದು ನಡೆದದ್ದು ಬಟಾ ಬಯಲಿನಲ್ಲಿ. ತಡರಾತ್ರಿ ನಡೆದ ಆ ಸಮಾರಂಭಕ್ಕೆ ಸಹಸ್ರಾರು ಜನ ನಿದ್ದೆಗೆಟ್ಟು ಸಾಕ್ಷಿಯಾದರು.

ತಾಲ್ಲೂಕಿನ ಹಂಪಿಯ ತುಂಗಭದ್ರಾ ನದಿ ತಟದಲ್ಲಿರುವ ಚಕ್ರತೀರ್ಥದ ರಾಮ–ಲಕ್ಷ್ಮಣ ದೇವಸ್ಥಾನದ ಬಳಿ ಶನಿವಾರ ತಡರಾತ್ರಿ ವಿರೂಪಾಕ್ಷ ಹಾಗೂ ಪಂಪಾಂಬಿಕೆಯ ನಿಶ್ಚಿತಾರ್ಥ ನಡೆಯಿತು. ಅಂದಹಾಗೆ, ಅದೇನೂ ಭಿನ್ನವಾದ ಕಾರ್ಯಕ್ರಮವಾಗಿರಲಿಲ್ಲ. ಜನಸಾಮಾನ್ಯರ ನಿಶ್ಚಿತಾರ್ಥದಂತೆ ಅದು ಕೂಡ ನಡೆಯಿತು.

ಪರಸ್ಪರ ಗಂಡು ಮತ್ತು ಹೆಣ್ಣಿನ ಕಡೆಯವರು, ಇಬ್ಬರ ಕೌಟುಂಬಿಕ ಹಿನ್ನೆಲೆ, ಓದು, ಅವರ ಶಕ್ತಿ–ಸಾಮರ್ಥ್ಯ, ಪ್ರತಿಭೆ ಕುರಿತು ಪ್ರಶ್ನಿಸಿದರು. ಅದನ್ನು ಕೇಳಿಸಿಕೊಂಡು ಜನ ಮುಸಿಮುಸಿ ನಗುತ್ತಿದ್ದರು. ಪರಸ್ಪರ ಎರಡೂ ಕಡೆಯವರಿಗೆ ಒಪ್ಪಿಗೆಯಾದ ನಂತರವೇ ನಿಶ್ಚಿತಾರ್ಥ ಜರುಗಿತು. ಅದು ಕೂಡ ಸಹಸ್ರಾರು ಜನರ ಎದುರಿನಲ್ಲಿ ಎನ್ನುವುದು ವಿಶೇಷ. ನದಿ ತಟ, ಬಂಡೆಗಲ್ಲು, ಮಂಟಪಗಳನ್ನೇರಿ ಕುಳಿತುಕೊಂಡು ಜನ ಕಾರ್ಯಕ್ರಮ ಕಣ್ತುಂಬಿಕೊಂಡರು.

ಆ ಅಪರೂಪದ ನಿಶ್ಚಿತಾರ್ಥ ಕಾರ್ಯಕ್ರಮ ಏರ್ಪಡುತ್ತಿದ್ದಂತೆ ಸಿಡಿಮದ್ದು, ಬಾಣ ಬಿರುಸುಗಳ ಚಿತ್ತಾರ ಇಡೀ ತುಂಗಭದ್ರಾ ನದಿಯಲ್ಲಿ ಬೆಳಕು ಚೆಲ್ಲಿತ್ತು. ಮಂತ್ರ ಘೋಷಗಳು ಮೊಳಗಿದವು. ಜನರ ಹರ್ಷೋದ್ಧಾರ, ಜಯಘೋಷ ಮುಗಿಲು ಮುಟ್ಟಿತ್ತು. ಯುಗಾದಿ ಸಂದರ್ಭದಲ್ಲಿ ಹಂಪಿಯಲ್ಲಿ ಮದುವೆ ನೆರವೇರಲಿದ್ದು, ಅದೇ ದಿನ ಜೋಡಿ ರಥೋತ್ಸವ ಜರುಗಲಿದೆ.

ವಿದ್ಯಾರಣ್ಯ ಭಾರತಿ ಸ್ವಾಮೀಜಿ, ಪುರೋಹಿತ ಮೋಹನ್‌ ಚಿಕ್ಕಭಟ್‌ ಜೋಷಿ ಕಾರ್ಯಕ್ರಮ ನಡೆಸಿಕೊಟ್ಟರು. ಗಂಡು, ಹೆಣ್ಣಿನ ವಿಶೇಷತೆಗಳನ್ನು ಸಂಕ್ಷಿಪ್ತ ರೂಪದಲ್ಲಿ ಜನರಿಗೆ ಪರಿಚಯಿಸಿದರು. ಬಳಿಕ ಪಲ್ಲಕ್ಕಿಯಲ್ಲಿ ವಿರೂಪಾಕ್ಷ–ಪಂಪಾಂಬಿಕೆಯನ್ನು ಮೆರೆಸುತ್ತ ದೇವಸ್ಥಾನಕ್ಕೆ ಕೊಂಡೊಯ್ಯಲಾಯಿತು.

ರಥಬೀದಿಯಲ್ಲಿ ನೆರೆದಿದ್ದ ಜನ ದೂರದಿಂದಲೇ ಕೈಮುಗಿದು ನಮಸ್ಕರಿಸಿದರು. ಆನೆ ಲಕ್ಷ್ಮಿ ಗಾಂಭೀರ್ಯದಿಂದ ಹೆಜ್ಜೆ ಹಾಕುತ್ತ ಪಲ್ಲಕ್ಕಿ ಮೆರವಣಿಗೆಗೆ ದಾರಿ ಮಾಡಿಕೊಟ್ಟಳು. ಫಲಪೂಜಾ ಮಹೋತ್ಸವದ ನಿಮಿತ್ತ ನಡೆದ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲು ವಿವಿಧ ಕಡೆಗಳಿಂದ ಅಪಾರ ಜನ ಬಂದಿದ್ದರು. ಕೊರೆಯುವ ಚಳಿಯಲ್ಲಿ, ತಡರಾತ್ರಿ ವರೆಗೆ ಜನ ಜಾಗರಣೆ ಮಾಡಿದರು. ಈ ಕಾರ್ಯಕ್ರಮಕ್ಕೆ ಹಾಜರಾದರೆ ಹರಕೆಗಳು ಈಡೇರುತ್ತವೆ ಎಂಬುದು ಜನರ ನಂಬಿಕೆ.

ವಿಜಯನಗರ ಅರಸ ಮನೆತನದ ಕೃಷ್ಣದೇವರಾಯ, ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಆಯುಕ್ತ ಪಿ.ಎನ್‌. ಲೋಕೇಶ್‌, ವಿರೂಪಾಕ್ಷ ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಚ್‌. ಪ್ರಕಾಶ್‌ ರಾವ್‌ ಇದ್ದರು.

ಭಕ್ತಿ ಭಾವನಾ:ಮರಿದೇವ ಸಂಗೀತ ಸಾಂಸ್ಕೃತಿಕ ಕಲಾವೃಂದದಿಂದ ವಿರೂಪಾಕ್ಷ ದೇಗುಲದ ಅಂಗಳದಲ್ಲಿ 22ನೇ ವರ್ಷದ ಭಕ್ತಿಭಾವನಾ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಿಜಯಕುಮಾರ, ಮಲ್ಲಿಕಾರ್ಜುನ ಬಡಿಗೇರ್‌ ತಂಡ ಸುಗಮ ಸಂಗೀತ, ಅಂಜಲಿ ಭರತನಾಟ್ಯ ಕಲಾಕೇಂದ್ರದಿಂದ ಭರತನಾಟ್ಯ, ಹಂಪಿಯ ಅಭಿನವ ಭರತನಾಟ್ಯ ತಂಡದಿಂದ ಜಾನಪದ ನೃತ್ಯ, ಅಂಗಡಿ ಸಮರ್ಥ, ನವ್ಯ, ರಕ್ಷಾ, ಯಲ್ಲಪ್ಪ ಭಂಡಾರದಾರ ಭಕ್ತಿಗೀತೆ ಹಾಡಿದರು. ಅಂಗಡಿ ವಾಮದೇವ, ದೊಡ್ಡ ಬಸಪ್ಪ ಅಂಗಡಿ, ಕೆ.ಪಂಪನಗೌಡ, ಕುಶಾಲ್ ಜಿಂಗಾಡೆ, ಬಿ.ಜಿ.ಶ್ರೀನಿವಾಸ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT