ಶನಿವಾರ, ಜುಲೈ 31, 2021
20 °C

ಲಾಕ್‌ಡೌನ್‌ಗೆ ಉತ್ತಮ ಪ್ರತಿಕ್ರಿಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ಕೊರೊನಾ ಸೋಂಕು ವ್ಯಾಪಕವಾಗಿ ಹರಡುವುದನ್ನು ತಡೆಯಲು ರಾಜ್ಯ ಸರ್ಕಾರ ಘೋಷಿಸಿರುವ 14 ದಿನಗಳ ಲಾಕ್‌ಡೌನ್‌ ಮಂಗಳವಾರ ರಾತ್ರಿಯಿಂದ ಜಾರಿಗೆ ಬಂದಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮಂಗಳವಾರ ರಾತ್ರಿ ಹತ್ತು ಗಂಟೆಯಾಗುತ್ತಲೇ ನಗರದ ಪ್ರಮುಖ ರಸ್ತೆಗಳಲ್ಲಿ ಜನಸಂಚಾರ ನಿಂತು ಹೋಯಿತು. ದಿನಸಿ, ಹೋಟೆಲ್‌, ಬಾರ್‌ ಅಂಡ್‌ ರೆಸ್ಟೊರೆಂಟ್‌ಗಳು ಬಾಗಿಲು ಮುಚ್ಚಿದವು. ಸಾರಿಗೆ ಸಂಸ್ಥೆ ಬಸ್‌ಗಳ ಸಂಚಾರ ನಿಂತು ಬಿಟ್ಟಿತು. ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ ಪೊಲೀಸರು ಕಂಡು ಬಂದರು.

ಬುಧವಾರ ಬೆಳಿಗ್ಗೆ ಆರು ಗಂಟೆಯಿಂದ ಹತ್ತು ಗಂಟೆಯ ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಿದ್ದರಿಂದ ನಗರದಲ್ಲಿ ಆರಂಭಿಸಲಾಗಿರುವ ಆರೂ ತಾತ್ಕಾಲಿಕ ಮಾರುಕಟ್ಟೆಗಳಲ್ಲಿ ಜನಸಂದಣಿ ಕಂಡು ಬಂತು. ದಿನಸಿ ಅಂಗಡಿ, ಮಾಂಸದಂಗಡಿ, ಎಟಿಎಂಗಳ ಎದುರು ಜನರ ಉದ್ದನೆಯ ಸಾಲು ಕಂಡು ಬಂತು.

ಹತ್ತು ಗಂಟೆ ಸಮೀಪಿಸುತ್ತಿದ್ದಂತೆ ಜನ ಮನೆಗಳತ್ತ ಮುಖ ಮಾಡಿದರು. ಹತ್ತು ಗಂಟೆ ಮೀರಿಯೂ ಕೆಲವರು ಓಡಾಡುತ್ತಿದ್ದರು. ಪೊಲೀಸರು ಅಂತಹವರನ್ನು ತಡೆದು ದಂಡ ವಿಧಿಸಿದರು. ಕೆಲವರ ವಾಹನಗಳನ್ನು ವಶಪಡಿಸಿಕೊಂಡರು. ವೈದ್ಯಕೀಯ ಸೇರಿದಂತೆ ಇತರೆ ತುರ್ತು ಕೆಲಸಗಳಿದ್ದವರಿಗೆ ಓಡಾಡಲು ಅವಕಾಶ ಕಲ್ಪಿಸಿದರು.

ನಗರದ ಕಾಲೇಜು ರಸ್ತೆ, ರೋಟರಿ ವೃತ್ತ, ಡಾ.ಬಿ. ಆರ್‌. ಅಂಬೇಡ್ಕರ್‌ ವೃತ್ತಗಳಲ್ಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದರು. ತುರ್ತು ಕೆಲಸಕ್ಕೆ ಹೋಗುತ್ತಿದ್ದವರನ್ನು ತಡೆದು, ಅವರ ಪಾಸ್‌ ನೋಡಿ ತೆರಳಲು ಅವಕಾಶ ಕೊಟ್ಟರು. ಜನರ ಓಡಾಟವಿಲ್ಲದೆ ಪ್ರಮುಖ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಎಲ್ಲೆಡೆ ಮೌನ ಆವರಿಸಿಕೊಂಡಿತು. ನಗರದ ಬಹುತೇಕ ಎಲ್ಲ ರಸ್ತೆಗಳಲ್ಲಿ ಪೊಲೀಸರು ಗಸ್ತು ತಿರುಗಿದರು. ಬುಧವಾರ ಮೊದಲ ದಿನದ ಲಾಕ್‌ಡೌನ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು