ಶುಕ್ರವಾರ, ಮಾರ್ಚ್ 5, 2021
30 °C

‘ಸರ್ಕಾರಕ್ಕೆ ಯಾವುದೇ ಧರ್ಮ ಇಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರಕ್ಕೆ ಯಾವುದೇ ಧರ್ಮ ಇಲ್ಲ. ಆದರೆ, ಪ್ರತಿಯೊಬ್ಬರಿಗೂ ಅವರದೇ ಧರ್ಮ ಅನುಸರಿಸಲು ಸಂವಿಧಾನ ಅವಕಾಶ ಕಲ್ಪಿಸಿದೆ’ ಎಂದು ಹಿರಿಯ ವಕೀಲ ಎ. ಕರುಣಾನಿಧಿ ತಿಳಿಸಿದರು.

ತಾಲ್ಲೂಕು ಕಾನೂನು ಸೇವಾ ಸಮಿತಿ, ಅಖಿಲ ಭಾರತ ವಕೀಲರ ಸಂಘ ಹಾಗೂ ಥಿಯೋಸಫಿಕಲ್ ಮಹಿಳಾ ಕಾಲೇಜಿನ ಸಹಭಾಗಿತ್ವದಲ್ಲಿ ಶನಿವಾರ ನಗರದಲ್ಲಿ ಹಮ್ಮಿಕೊಂಡಿದ್ದ ಯುವ ದಿನಾಚರಣೆಯಲ್ಲಿ ಉಪನ್ಯಾಸ ನೀಡಿದರು.

‘ಪ್ರಜೆಗಳಿಗೆ ಸಂವಿಧಾನವು ಮೂಲಭೂತ ಹಕ್ಕುಗಳನ್ನು ಕೊಟ್ಟಿದೆ. ಆದರೂ ನಮ್ಮ ಜೀವನ ಸುಧಾರಿಸಿಲ್ಲ. ಇದಕ್ಕೆ ಮುಖ್ಯ ಕಾರಣ ಆರ್ಥಿಕ ನ್ಯಾಯ ಸರಿಯಾಗಿ ಸಿಗದೇ ಇರುವುದು. ಆರ್ಥಿಕ ನ್ಯಾಯವೇ ಪ್ರಜೆಗಳ ಜೀವನವನ್ನು ಉದ್ಧರಿಸುತ್ತದೆ’ ಎಂದರು.

‘ಭಾರತೀಯರೆಲ್ಲರೂ ಸಂವಿಧಾನದ ಮೂಲ ಆಶಯವನ್ನು ತಿಳಿಯಬೇಕಿದೆ, ಸ್ವಾತಂತ್ರ್ಯ ನಂತರ ಭಾರತವು ಪ್ರಜಾಪ್ರಭುತ್ವ ರಾಷ್ಟ್ರವಾಗಿ ಕಟ್ಟಲು ಪಣ ತೊಡಲಾಗಿತ್ತು, ದೇಶದ ಪ್ರತಿಯೊಬ್ಬ ಪ್ರಜೆಯೂ ರಾಜಕೀಯ ವ್ಯವಸ್ಥೆಯಲ್ಲಿ ಪಾಲ್ಗೊಳ್ಳಬೇಕು ಎಂಬ ಉದ್ದೇಶದಿಂದ ಸಂವಿಧಾನವನ್ನು ರಚಿಸಿ ಪ್ರಜಾಪ್ರಭುತ್ವ ರಾಷ್ಟ್ರವಾಗಿ ನಿರ್ಮಿಸಲಾಯಿತು. ಅಧಿಕಾರದ ಸಂಪನ್ಮೂಲ ಜನರೇ ಆಗಬೇಕು. ಆದರೆ, ಆಗುತ್ತಿರುವುದೇ ಬೇರೆ’ ಎಂದು ಹೇಳಿದರು.

ಗಿಡಕ್ಕೆ ನೀರೆರೆದು ಕಾರ್ಯಕ್ರಮ ಉದ್ಘಾಟಿಸಿದ ಪ್ರಧಾನ ಸಿವಿಲ್ ನ್ಯಾಯಾಧೀಶ ಆನಂದ್ ಎಸ್. ಕರಿಯಮ್ಮನವರ್, ‘ಕೆಟ್ಟ ಕಾರ್ಯ ಮಾಡುತ್ತ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ, ಅವಶ್ಯಕತೆ ಅರಿತುಕೊಂಡು, ಛಲದಿಂದ ಹೋರಾಡಿದಾಗ ಯಶಸ್ಸು ಸಿಗುತ್ತದೆ. ತಂತ್ರಜ್ಞಾನ ಬಹಳ ಮುಂದುವರೆದಿದ್ದು, ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು’ ಎಂದರು.

ಹೆಚ್ಚುವರಿ ಸಿವಿಲ್ ಹಾಗೂ ಜೆ.ಎಂ.ಎಫ್.ಸಿ ನ್ಯಾಯಾಧೀಶೆ ತೃಪ್ತಿ ಧರಣಿ ಮಾತನಾಡಿ, ‘ಸಾರ್ವಜನಿಕರಿಗೆ ಕಾನೂನಿನ ಅರಿವು ಮೂಡಿಸಲು, ಪ್ರಜೆಗಳಿಗೆ ಕಾನೂನಿನ ರಕ್ಷಣೆ ಒದಗಿಸುವ ಸಲುವಾಗಿ ಹಲವಾರು ಕಾಯ್ದೆಗಳು ಇವೆ. ಅದರಲ್ಲಿ ಮಹಿಳೆಯರಿಗೆ ಸೆಕ್ಷನ್ 350ಬಿ ಅತಿ ಪ್ರಮುಖವಾಗಿದ್ದು, ಯಾವುದೇ ವ್ಯಕ್ತಿ ಬಲವಂತದಿಂದ ಹಲ್ಲೆ ನಡೆಸಿ ಅಥವಾ ಭಯ, ಕಿರಿಕಿರಿ ಉಂಟು ಮಾಡಿದರೆ ಅಂತಹ ಕೃತ್ಯವನ್ನು ಕಾನೂನು ಬಲದಿಂದ ತಡೆಗಟ್ಟಬಹುದು’ ಎಂದು ಹೇಳಿದರು.

ಎರಡನೇ ಹೆಚ್ಚುವರಿ ಸಿವಿಲ್ ಹಾಗೂ ಜೆ.ಎಂ.ಎಫ್.ಸಿ ನ್ಯಾಯಾಧೀಶೆ ಜಿ. ಶಶಿಕಲಾ, ‘ಅಪ್ರಾಪ್ತ ವಯಸ್ಸನ್ನು ವೃಥಾ ಕಾಲಹರಣದಲ್ಲಿ ಹರಿಬಿಟ್ಟರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ, ಪೋಷಕರ ತ್ಯಾಗದ ಮುಂದೆ ನಮ್ಮ ಆಸೆ, ಆಕಾಂಕ್ಷೆ ಏನೂ ಅಲ್ಲ. ಉನ್ನತವಾದುದ್ದನ್ನು ಯೋಚಿಸಿ ಉನ್ನತ ಸ್ಥಾನಕ್ಕೆ ಹೋಗಬೇಕು’ ಎಂದು ತಿಳಿಸಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಶೋಕ್ ಜೀರೆ, ವಕೀಲರ ಸಂಘದ ಅಧ್ಯಕ್ಷ ತಾರಿಹಳ್ಳಿ ಹನುಮಂತಪ್ಪ, ಥಿಯೋಸಾಫಿಕಲ್ ಮಹಿಳಾ ಕಾಲೇಜಿನ ಪ್ರಾಚಾರ್ಯ ಸಂಗೀತ ಗಾಂವಕರ್‌, ವಕೀಲರಾದ ಕೆ.ಪ್ರಹ್ಲಾದ್, ಭಾಗ್ಯಲಕ್ಷ್ಮೀ ಭರಾಡೆ, ವಕೀಲರ ಸಂಘದ ಕಾರ್ಯದರ್ಶಿ ಜಿ.ಕೊಟ್ರಗೌಡ, ಕೆ.ಸಿ.ಶರಣಪ್ಪ, ಕಲ್ಯಾಣಯ್ಯ, ವೆಂಕಟೇಶಲು, ಪಾಂಡುರಂಗ ಶೆಟ್ಟಿ, ಮಹಮ್ಮದ್ ಬಡಿಗೇರ್, ಬಿಸಾಟಿ ಮಹೇಶ್‌ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.