ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿ ಕನ್ನಡ ವಿವಿ: ‘ಮುಂದಿನ ವರ್ಷ ಯೋಗ ವಿಜ್ಞಾನ ಕೋರ್ಸ್‌’

ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ಯೋಗ ದಿನ
Last Updated 21 ಜೂನ್ 2020, 8:39 IST
ಅಕ್ಷರ ಗಾತ್ರ

ಹೊಸಪೇಟೆ: ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಭಾನುವಾರ ಅಂತರರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು.

ಸಸಿಗೆ ನೀರೆರೆದು ಕಾರ್ಯಕ್ರಮ ಉದ್ಘಾಟಿಸಿದ ಕುಲಪತಿ ಪ್ರೊ.ಸ.ಚಿ. ರಮೇಶ, ‘ಮುಂದಿನ ಶೈಕ್ಷಣಿಕ ವರ್ಷದಿಂದ ವಿಶ್ವವಿದ್ಯಾಲಯದಲ್ಲಿ ಯೋಗ ವಿಜ್ಞಾನ ಎಂ.ಎಸ್‌.ಸಿ. ಕೋರ್ಸ್‌ ಆರಂಭಿಸಲಾಗುವುದು’ ಎಂದು ತಿಳಿಸಿದರು.

‘ಎಲ್ಲರಿಗೂ ಆರೋಗ್ಯದ ಅರಿವು ಮೂಡಿಸುವುದರ ಜೊತೆಗೆ ಸ್ವ–ಉದ್ಯೋಗಕ್ಕೆ ಅನುಕೂಲವಾಗಲೆಂದು ಹಂಪಿ, ಕನ್ನಡ ವಿಶ್ವವಿದ್ಯಾಲಯದಲ್ಲಿ ಯೋಗ ಅಧ್ಯಯನ ಕೇಂದ್ರವನ್ನು ಪ್ರಾರಂಭಿಸಲಾಗಿದೆ’ ಎಂದರು.

‘ಕೊರೊನಾ ಸಂಕಷ್ಟದ ನಡುವೆಯೂ ನಾವು ಜೀವನ ನಡೆಸಬೇಕಾದ ಪರಿಸ್ಥಿತಿ ಬಂದಿದೆ. ಇಂತಹ ಸಂದರ್ಭದಲ್ಲಿ ಯೋಗವನ್ನು ತಪ್ಪದೇ ಮಾಡುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ. ಆರೋಗ್ಯವೇ ಮಹಾಭಾಗ್ಯ ಎಂದು ಹೇಳಿದ ಅವರು, ಯಾರು ಆರೋಗ್ಯವಾಗಿರುತ್ತಾರೋ ಅವರು ಒಳ್ಳೆಯ ಪ್ರಜೆಯಾಗುತ್ತಾರೆ. ಯಾರು ಒಳ್ಳೆಯ ಪ್ರಜೆಯಾಗುತ್ತಾರೋ ಅವರು ಒಳ್ಳೆಯ ಆಲೋಚನೆ, ಒಳ್ಳೆಯ ಕೆಲಸಗಳನ್ನು ಮಾಡಿ ಸಮಾಜಕ್ಕೆ ಮಾದರಿಯಾಗುತ್ತಾರೆ’ ಎಂದು ಹೇಳಿದರು.

‘ಕೊರೊನಾದಿಂದ ಇಡೀ ಜಗತ್ತು ಸ್ತಬ್ಧವಾಗಿದೆ. ಯೋಗದಿಂದ ಈ ತೆರನಾದ ಸಾಂಕ್ರಾಮಿಕ ರೋಗಗಳನ್ನು ದೂರ ಮಾಡಬಹುದು. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು’ ಎಂದರು.

ಪ್ರೊ. ಬಿ.ಸಿದ್ಧರಾಮೇಶ ಮಾತನಾಡಿ, ‘ಯೋಗ ದಿನ ಇಡೀ ವಿಶ್ವದ ಹಬ್ಬ. ಏಕೆಂದರೆ ಇದು ವಿಶ್ವಕ್ಕೆ ಆರೋಗ್ಯ ನೀಡುತ್ತಿದೆ. ಯೋಗವು ಶಾಂತಿ, ಹಸಿರು, ಸಂಸ್ಕೃತಿ, ಸಂತೋಷ, ನೆಮ್ಮದಿಯನ್ನು ಕೊಡುತ್ತದೆ’ ಎಂದು ತಿಳಿಸಿದರು.

‘ಹನ್ನೆರಡನೇ ಶತಮಾನದಲ್ಲಿ ಯೋಗದ ಬಗ್ಗೆ ಉಲ್ಲೇಖವಾಗಿರುವುದನ್ನು ಅನೇಕ ವಚನಗಳಲ್ಲಿ ಕಾಣುತ್ತೇವೆ. ಯೋಗದ ಮುಖಾಂತರ ಅಂದಿನ ಕಾಲದಲ್ಲಿ ಮನುಷ್ಯರು 120 ವರ್ಷಗಳ ಕಾಲ ಬದುಕುತ್ತಿದ್ದರು. ಅವರಲ್ಲಿ ರೋಗ ನಿರೋಧಕಶಕ್ತಿ ಹೆಚ್ಚಾಗಿರುತ್ತಿತ್ತು. ಎಂತಹ ಮಾರಕ ಕಾಯಿಲೆಗಳು ಬಂದರೂ ಸಹ ಅವರು ಅದಕ್ಕೆ ಹೆದರುತ್ತಿರಲಿಲ್ಲ’ ಎಂದು ಹೇಳಿದರು.

‘ಉಸಿರಾಟದ ತೊಂದರೆ, ಗಳಗಂಡ, ಬೆನ್ನುನೋವು, ಹೃದಯಸಂಬಂಧಿ ಕಾಯಿಲೆ, ಹುಳಿತೇಗು, ಬೊಜ್ಜು, ಸಂಧಿವಾತ ಹೀಗೆ ಹಲವಾರು ರೋಗಗಳಿಂದ ಮುಕ್ತರಾಗಲು ಯೋಗವು ಅವಶ್ಯಕವಾಗಿದೆ. ಯೋಗದಿಂದ ಮನುಷ್ಯನಲ್ಲಿ ನೆನಪಿನ ಶಕ್ತಿ ಮತ್ತು ತಾಳ್ಮೆ ಹೆಚ್ಚಾಗುತ್ತದೆ. ಯೋಗದ ಜೊತೆಗೆ ಊಟದಲ್ಲಿ ಈರುಳ್ಳಿ, ಬೆಳ್ಳುಳ್ಳಿ, ಪಾಲಕ್, ಮೆಂತೆ ಸೊಪ್ಪುಗಳನ್ನು ಹೆಚ್ಚಾಗಿ ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗಿ ಕೋವಿಡ್-19ನಂತಹ ಕಾಯಿಲೆಗಳಿಂದ ದೂರ ಉಳಿಯಬಹುದು’ ಎಂದು ವಿವರಿಸಿದರು.

ಯೋಗ ಅಧ್ಯಯನ ಕೇಂದ್ರದ ನಿರ್ದೇಶಕ ಎಫ್.ಟಿ.ಹಳ್ಳಿಕೇರಿ, ‘ಯೋಗ ಜೀವನಶೈಲಿಯಾಗಿ, ಚಿಕಿತ್ಸೆಯಾಗಿ ಇಡೀ ವಿಶ್ವದಲ್ಲಿ ಬೆಳೆದಿದೆ. 2015ರಲ್ಲಿ ಪ್ರಧಾನ ಮಂತ್ರಿಗಳು ವಿಶ್ವದಲ್ಲಿ ಯೋಗ ದಿನಾಚರಣೆಯನ್ನು ಮಾಡಬೇಕೆಂದು ವಿಶ್ವಸಂಸ್ಥೆಯ ಮುಂದೆ ಇಟ್ಟಾಗ ವಿಶ್ವಸಂಸ್ಥೆಯ ಎಲ್ಲಾ ರಾಷ್ಟ್ರಗಳು ಒಪ್ಪಿಕೊಂಡವು. ಇದು ಯೋಗಕ್ಕಿರುವ ಶಕ್ತಿಯನ್ನು ಸೂಚಿಸುತ್ತದೆ’ ಎಂದು ಅಭಿಪ್ರಾಯಪಟ್ಟರು. ಕುಲಸಚಿವ ಎ.ಸುಬ್ಬಣ್ಣ ರೈ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT