ಸೋಮವಾರ, ಆಗಸ್ಟ್ 19, 2019
21 °C

ಪ್ರತಿಭಟನೆ ಹಿಂಪಡೆದ ವಿದ್ಯಾರ್ಥಿಗಳು

Published:
Updated:
Prajavani

ಹೊಸಪೇಟೆ: ಫೆಲೋಶಿಪ್‌ ನೀಡುವಂತೆ ಆಗ್ರಹಿಸಿ ಮೂರು ದಿನಗಳಿಂದ ಧರಣಿ ನಡೆಸುತ್ತಿದ್ದ ಎಸ್ಸಿ/ಎಸ್ಟಿ ಸಂಶೋಧನಾ ವಿದ್ಯಾರ್ಥಿಗಳನ್ನು ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಗುರುವಾರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದು, ತಾತ್ಕಾಲಿಕವಾಗಿ ಧರಣಿ ಕೈಬಿಟ್ಟಿದ್ದಾರೆ.

’ಸರ್ಕಾರದಿಂದ ಇಷ್ಟರಲ್ಲೇ ಅನುದಾನ ಬಿಡುಗಡೆಗೊಳಿಸುವ ಭರವಸೆ ಸಿಕ್ಕಿದೆ. ಅನುದಾನ ಬಂದ ನಂತರ ಕಂತಿನ ರೂಪದಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಫೆಲೋಶಿಪ್‌ ಕೊಡಲಾಗುವುದು‘ ಎಂದು ಕುಲಪತಿ ಪ್ರೊ.ಸ.ಚಿ. ರಮೇಶ ಹಾಗೂ ಕುಲಸಚಿವ ಎ. ಸುಬ್ಬಣ್ಣ ರೈ ಅವರು ಭರವಸೆ ನೀಡಿದರು. ಇದರಿಂದಾಗಿ ವಿದ್ಯಾರ್ಥಿಗಳು ಅನಿರ್ದಿಷ್ಟಾವಧಿ ಧರಣಿ ಹಿಂಪಡೆದರು.

’ವಿದ್ಯಾರ್ಥಿಗಳಿಗೆ ಫೆಲೋಶಿಪ್‌ ಸಿಗದ ಕಾರಣ ತೊಂದರೆಯಾಗುತ್ತಿದೆ. ಈ ವಿಷಯವನ್ನು ಸರ್ಕಾರದ ಗಮನಕ್ಕೆ ತರಲಾಗಿದೆ. ಎಸ್ಸಿ/ಎಸ್ಟಿ ಘಟಕದ ಸಲಹಾ ಸಮಿತಿ ಸಭೆಯಲ್ಲೂ ಈ ಕುರಿತು ಗಂಭೀರವಾಗಿ ಚರ್ಚಿಸಲಾಗಿದೆ. ಆದಷ್ಟು ಬೇಗ ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಯುವ ವಿಶ್ವಾಸ ಇದೆ‘ ಎಂದು ಕುಲಸಚಿವರು ’ಪ್ರಜಾವಾಣಿ‘ಗೆ ತಿಳಿಸಿದರು.

500ಕ್ಕೂ ಹೆಚ್ಚು ಎಸ್ಸಿ/ಎಸ್ಟಿ ವಿದ್ಯಾರ್ಥಿಗಳಿಗೆ ಎರಡು ವರ್ಷಗಳಿಂದ ಫೆಲೋಶಿಪ್‌ ಕೊಟ್ಟಿಲ್ಲ. ಸಂಶೋಧನಾ ಚಟುವಟಿಕೆಗಳಿಗೆ ಹಿನ್ನಡೆಯಾಗುತ್ತಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಕ್ರಿಯಾಶಕ್ತಿ ಭವನದ ಎದುರು ಧರಣಿ ಕುಳಿತಿದ್ದರು. ಮೂರು ದಿನಗಳಿಂದ ಸ್ಥಳದಲ್ಲೇ ಉಪಾಹಾರ. ಊಟ ಮಾಡಿದ್ದರು. ಅಹೋರಾತ್ರಿ ಜಾಗರಣೆ ಮಾಡಿದ್ದರು.

Post Comments (+)