ಸೋಮವಾರ, ಮೇ 23, 2022
30 °C
ಮೈಲಾರ ಕಾಗಿನೆಲೆ ಶಾಖಾ ಮಠದಲ್ಲಿ ಸ್ಫಟಿಕ ಶಿವಲಿಂಗ ಪ್ರತಿಷ್ಠಾಪನೆ; ಸಾಮೂಹಿಕ ವಿವಾಹ

‘ಕುರುಬರು ಅನ್ಯ ಸಮಾಜ ಗೌರವಿಸಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೂವಿನಹಡಗಲಿ: ‘ಕುರುಬ ಸಮುದಾಯದವರು ಅನ್ಯ ಸಮಾಜದ ಜತೆ ಪ್ರೀತಿ, ವಿಶ್ವಾಸದಿಂದ ಬದುಕುವುದನ್ನು ರೂಢಿಸಿಕೊಳ್ಳಬೇಕು. ನಮ್ಮ ನಡವಳಿಕೆಗಳನ್ನು ತಿದ್ದಿಕೊಳ್ಳದಿದ್ದಲ್ಲಿ ಮುಂದೊಂದು ದಿನ ಕುರುಬ ಸಮುದಾಯ ಏಕಾಂಗಿ ಆಗಬೇಕಾಗುತ್ತದೆ’ ಎಂದು ಜೆ.ಡಿ.ಎಸ್‌. ರಾಜ್ಯ ಅಧ್ಯಕ್ಷ ಎಚ್.ವಿಶ್ವನಾಥ ಎಚ್ಚರಿಸಿದರು.

ತಾಲ್ಲೂಕಿನ ಮೈಲಾರ ಗ್ರಾಮದ ಕಾಗಿನೆಲೆ ಶಾಖಾ ಮಠದಲ್ಲಿ ಗುರುವಾರ ಆಯೋಜಿಸಿದ್ದ ಸ್ಥಿರಬಿಂಬ ಸ್ಫಟಿಕ ಶಿವಲಿಂಗ ಪ್ರತಿಷ್ಠಾಪನೆ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಕಾಗಿನೆಲೆ ಧರ್ಮಪೀಠ ಜಾತ್ಯತೀತ ಮತ್ತು ಸಾಮಾಜಿಕ ನ್ಯಾಯದ ತಳಹದಿಯ ಮೇಲೆ ಸ್ಥಾಪಿತವಾಗಿದೆ. ಮೊದಲ ಪೀಠಾಧಿಪತಿಯನ್ನು ಮುಸ್ಲಿಮರು, ವೀರಶೈವರು, ಬ್ರಾಹ್ಮಣರು, ವಾಲ್ಮೀಕಿ ಸಮಾಜದವರು ಪಲ್ಲಕ್ಕಿಯಲ್ಲಿ ಹೊತ್ತು ಮೆರೆಸಿದ್ದಾರೆ. ಕುರುಬ ಸಮುದಾಯ ಈ ಮಹತ್ವವನ್ನು ಅರಿತು ತಮ್ಮ ನಡವಳಿಕೆಗಳನ್ನು ತಿದ್ದಿಕೊಳ್ಳಬೇಕು. ಅನ್ಯ ಜಾತಿ, ಧರ್ಮ, ಭಾಷಿಕರ ಜತೆ ಅನ್ಯೋನ್ಯವಾಗಿ ಬೆರೆತು ಸಾಮರಸ್ಯವನ್ನು ಗಟ್ಟಿಗೊಳಿಸಬೇಕು’ ಎಂದು ತಿಳಿಸಿದರು.

ಹೊಸದುರ್ಗ ಕಾಗಿನೆಲೆ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ, ‘ಇಲ್ಲಿ ಮಠ ಕಟ್ಟಿದ್ದರಿಂದ ಕೆಲವರಿಗೆ ಆತಂಕ ಶುರುವಾಗಿದೆ. ನಾವು ಯಾರ ಅಧಿಕಾರ ಕಬಳಿಸಲು ಮಠ ಕಟ್ಟಿಲ್ಲ. ಧಾರ್ಮಿಕ ಜಾಗೃತಿ ಹಾಗೂ ಸಾಮಾಜಿಕ ಸಾಮರಸ್ಯ ಮೂಡಿಸುವ ಉದ್ದೇಶದಿಂದ ಇಲ್ಲಿ ಮಠ ನಿರ್ಮಿಸಿದ್ದೇವೆ’ ಎಂದು ಹೇಳಿದರು.

ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ, ‘ಭಕ್ತರ ಮನೋಕ್ಲೇಶಗಳನ್ನು ದೂರ ಮಾಡಲು ಮಠಗಳು ಅವಶ್ಯವಾಗಿವೆ. ನಾವು ಜಾತಿ ಮಠಗಳನ್ನು ಕಟ್ಟಿಕೊಂಡಿದ್ದರೂ ನಮ್ಮ ನಿಲುವು ಜಾತ್ಯತೀತವಾಗಿದೆ. ಎಲ್ಲರೂ ಅನ್ನ, ಅಕ್ಷರ, ಅಧ್ಯಾತ್ಮ ಜಾಗೃತಿ ಬೆಳೆಸಿಕೊಂಡು ಸಮ ಸಮಾಜದ ಕಡೆ ಮುಖ ಮಾಡಬೇಕು’ ಎಂದು ತಿಳಿಸಿದರು.

ಸಿರಿಗೆರೆ ತರಳಬಾಳು ಬೃಹನ್ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕೂಡಲಸಂಗಮ ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ, ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ, ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಹೊಸದುರ್ಗ ಭಗೀರಥ ಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ, ರಾಣೇಬೆನ್ನೂರು ಶಾಸಕ ಆರ್.ಶಂಕರ್ ಮಾತನಾಡಿದರು.

ಅಂಬಿಗರ ಚೌಡಯ್ಯ ಗುರುಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ, ಕುಂಚಿಟಿಗ ಮಹಾಸಂಸ್ಥಾನಮಠದ ಶಾಂತವೀರ ಸ್ವಾಮೀಜಿ, ಮಡಿವಾಳ ಮಾಚಿದೇವ ಗುರುಪೀಠದ ಮಾಚಿದೇವಾನಂದ ಸ್ವಾಮೀಜಿ ಇದ್ದರು. ಕಾಗಿನೆಲೆ ಕನಕಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಎಲ್ಲ ಮಠಾಧೀಶರನ್ನು ಗೌರವಿಸಿದರು. ಇದೇ ವೇಳೆ 16 ಜೋಡಿಗಳ ಸಾಮೂಹಿಕ ವಿವಾಹ ಜರುಗಿತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು