ಭಾನುವಾರ, ಜೂನ್ 20, 2021
26 °C
ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದರೂ ಎಚ್ಚರವಾಗದ ಜನ

ಅಗತ್ಯ ವಸ್ತು ಖರೀದಿಗೆಮುಗಿಬಿದ್ದ ಸಾರ್ವಜನಿಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ಕೋವಿಡ್‌ನಿಂದ ದಿನೇ ದಿನೇ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದರೂ ಸಾರ್ವಜನಿಕರು ಇನ್ನೂ ಎಚ್ಚರಗೊಂಡಿಲ್ಲ. ಯಾವುದೇ ಮುನ್ನೆಚ್ಚರಿಕೆ ಇಲ್ಲದೆ ವ್ಯವಹರಿಸುತ್ತಿದ್ದಾರೆ.

ಅದರಲ್ಲೂ ಭಾನುವಾರ ಮಾರುಕಟ್ಟೆಗಳಲ್ಲಿ ಅಪಾರ ಜನಜಂಗುಳಿ ಕಂಡು ಬರುತ್ತಿದೆ. ತರಕಾರಿ, ಹಣ್ಣು, ದಿನಸಿ, ಮಾಂಸ ಸೇರಿದಂತೆ ಇತರೆ ವಸ್ತುಗಳನ್ನು ಖರೀದಿಸಲು ಮುಗಿ ಬೀಳುತ್ತಿದ್ದಾರೆ.

ಜನಜಂಗುಳಿ ಸೇರಬಾರದು ಎನ್ನುವ ಕಾರಣಕ್ಕಾಗಿ ನಗರದಲ್ಲಿನ ಮಾರುಕಟ್ಟೆಗಳನ್ನು ಬಂದ್‌ ಮಾಡಲಾಗಿದೆ. ಹೊಸ ಮಾರ್ಗಸೂಚಿ ಬಂದ ನಂತರ ತಾತ್ಕಾಲಿಕವಾಗಿ ತೆರೆಯಲಾಗಿದ್ದ ಆರು ಮಾರುಕಟ್ಟೆಗಳನ್ನು ಮುಚ್ಚಲಾಗಿದೆ. ಆಯಾ ಬಡಾವಣೆಗಳಿಗೆ ತರಕಾರಿ ವ್ಯಾಪಾರಿಗಳು ನೇರ ಹೋಗಿ ತರಕಾರಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಹೀಗಿದ್ದರೂ ಜನಜಂಗುಳಿ ನಿಯಂತ್ರಣವಾಗುತ್ತಿಲ್ಲ. ನಿಯಮ ಪಾಲನೆ ಆಗುತ್ತಿಲ್ಲ.

ನಗರದ ಉದ್ಯೋಗ ಪೆಟ್ರೋಲ್‌ ಬಂಕ್‌ ಬಳಿಯ ಸೋಗಿ ಮಾರುಕಟ್ಟೆ ಬಂದ್‌ ಮಾಡಲಾಗಿದೆ. ಆದರೆ, ಅಲ್ಲಿನ ಬಹುತೇಕ ವ್ಯಾಪಾರಿಗಳು ಮುಖ್ಯರಸ್ತೆಯ ಎರಡೂ ಬದಿಯಲ್ಲಿ ಬಂಡಿಗಳ ಮೇಲೆ ತರಕಾರಿ, ಹಣ್ಣು ಮಾರಾಟ ಮಾಡುತ್ತಿದ್ದಾರೆ. ಯಾವುದೇ ಅಂತರವಿಲ್ಲದೆ ಜನ ಖರೀದಿಸುತ್ತಿದ್ದಾರೆ. ವಾಹನ ದಟ್ಟಣೆ ಹೆಚ್ಚಾಗಿ ಸಂಚಾರ ಅಸ್ತವ್ಯಸ್ತಗೊಳ್ಳುತ್ತಿದೆ. ನಗರದ ರಾಮ ಟಾಕೀಸ್‌ ಮಾಂಸದಂಗಡಿಗಳ ಬಳಿಯೂ ಇದೇ ರೀತಿಯ ದೃಶ್ಯ ಕಂಡು ಬಂತು.

ನಗರದ ಮೇನ್‌ ಬಜಾರ್‌, ಗಾಂಧಿ ವೃತ್ತ, ಬಳ್ಳಾರಿ ವೃತ್ತ, ಪುಣ್ಯಮೂರ್ತಿ ವೃತ್ತ, ಟಿ.ಬಿ. ಡ್ಯಾಂ ರಸ್ತೆಯಲ್ಲೂ ಈ ದೃಶ್ಯಗಳು ಸಾಮಾನ್ಯವಾಗಿವೆ. ಪೊಲೀಸರು ಬಂದಾಗಲಷ್ಟೇ ಜನ ದೂರ ಸರಿಯುತ್ತಾರೆ. ಅವರು ಹೋದ ನಂತರ ಮತ್ತೆ ಗುಂಪು ಗುಂಪಾಗಿ ಸೇರಿ ಖರೀದಿಯಲ್ಲಿ ತೊಡಗುತ್ತಾರೆ.

‘ನಗರಸಭೆ ಸಿಬ್ಬಂದಿ ಒಳಗೊಂಡ ತಂಡಗಳು ನಗರದೆಲ್ಲೆಡೆ ಸಂಚರಿಸಿ ಜನಜಂಗುಳಿ ತಡೆಯುವ ಕೆಲಸ ಮಾಡುತ್ತಿದ್ದಾರೆ. ಆದರೆ, ಸಾರ್ವಜನಿಕರು ಹೆಚ್ಚಾಗಿ ತಲೆಗೆ ಹಾಕಿಕೊಳ್ಳುತ್ತಿಲ್ಲ. ಪೊಲೀಸರಿಗಷ್ಟೇ ಅವರು ಹೆದರುತ್ತಾರೆ’ ಎಂದು ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು