ಮಂಗಳವಾರ, ಮಾರ್ಚ್ 21, 2023
30 °C

ಹರಪನಹಳ್ಳಿ: ಮಹಾತ್ಮನ ಪಾದಸ್ಪರ್ಶಕ್ಕೆ ಸ್ಮಾರಕವಾದ ಕೊಠಡಿ

ವಿಶ್ವನಾಥ ಡಿ. Updated:

ಅಕ್ಷರ ಗಾತ್ರ : | |

Prajavani

ಹರಪನಹಳ್ಳಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ತಂಗಿದ್ದ ಪಟ್ಟಣದ ಕೊಠಡಿಯೊಂದು ಈಗ ಸ್ಮಾರಕವಾಗಿ ಬದಲಾಗಿದೆ.

ದುಂಡು ಮೇಜಿನ ಪರಿಷತ್ತಿನ ಮುಕ್ತಾಯದ ನಂತರ ಗಾಂಧೀಜಿಯವರು ಹರಿಜನ ಉದ್ಧಾರಕ್ಕಾಗಿ ದೇಶದಾದ್ಯಂತ ದೇಣಿಗೆ ಸಂಗ್ರಹಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಅದರ ನಿಮಿತ್ತ 1934ರಲ್ಲಿ ಇಲ್ಲಿನ ಸರ್ಕಾರಿ ಜ್ಯೂನಿಯರ್‌ ಕಾಲೇಜಿನಲ್ಲಿ ಕೊಠಡಿಯೊಂದರಲ್ಲಿ ವಾಸ್ತವ್ಯ ಮಾಡಿದ್ದರು. ಅಂದಿನಿಂದ ಆ ಕೊಠಡಿಯನ್ನು ದೇವಸ್ಥಾನದಂತೆ ಪವಿತ್ರವಾಗಿ ಸ್ಥಳೀಯರು ನೋಡುತ್ತಾರೆ, ಗೌರವಿಸುತ್ತಾರೆ. ಯಾರೇ ಆ ಕೊಠಡಿಯೊಳಗೆ ಹೋದರೂ ಕೈಮುಗಿದು ತೆರಳುತ್ತಾರೆ.

ಅಂದಹಾಗೆ, ಗಾಂಧಿ ಬಂದು ಹೋದ ನಂತರ ಆ ಕೊಠಡಿ ಹೋರಾಟದ ಕೇಂದ್ರವಾಗಿಯೂ ಬದಲಾಯಿತು. ಬಳಿಕ ಅನ್ಯ ಭಾಗಗಳಿಗೂ ವಿಸ್ತರಣೆಗೊಂಡಿತು. 1930ರಲ್ಲಿ ಮದ್ಯಪಾನ ನಿಷೇಧ ಚಳವಳಿ ನಡೆಯಿತು. ಚಳವಳಿ ನೇತೃತ್ವ ವಹಿಸಿದ್ದ ವಸುಪಾಲಪ್ಪ, ಟಿ.ಬಿ.ಕೇಶವರಾಯ ಸೇರಿದಂತೆ 30 ಜನರನ್ನು ಕಂಚಿಕೇರಿಯಲ್ಲಿ ಬಂಧಿಸಲಾಗಿತ್ತು. 1932ರ ಆ.15ರಂದು ತೊಗರಿಕಟ್ಟೆ, ಕಣವಿಹಳ್ಳಿಯಲ್ಲಿ ಈಚಲು ಗಿಡ ಕಡಿದು ಹೋರಾಟ ಮಾಡಿದವರನ್ನು ಬ್ರಿಟಿಷರು ವಶಕ್ಕೆ ಪಡೆದಿದ್ದರು. ಸ್ವಾತಂತ್ರ್ಯ ಹೋರಾಟಗಾರರಾದ ಡಾ.ಬಾಬುರಾಜೇಂದ್ರ ಪ್ರಸಾದ, ಗಂಗಾಧರ ರಾವ್ ದೇಶಪಾಂಡೆ ಅವರು ಸಹ ಬರಗಾಲ ನಿಧಿ ಸಂಗ್ರಹಕ್ಕೆ ಇಲ್ಲಿಗೆ ಬಂದಿದ್ದರು.

2018-19ರಲ್ಲಿ ಮಾಜಿ ಶಾಸಕ ದಿವಂಗತ ಎಂ.ಪಿ.ರವೀಂದ್ರ ಅವರ ಪರಿಶ್ರಮದ ಫಲವಾಗಿ ₹30 ಲಕ್ಷ ವೆಚ್ಚದಲ್ಲಿ ಗಾಂಧೀಜಿ ಕಲ್ಲಿನ ಪುತ್ಥಳಿ ಕೊಠಡಿಯಲ್ಲಿ ನಿರ್ಮಿಸಲಾಗಿದೆ. ಶಿಲ್ಪ ಕಲಾವಿದೆ ಎಂ.ಸಂಜೀತಾ ಅವರು ಕೆತ್ತನೆ ಮಾಡಿರುವ ಮಲಗಿರುವ ಭಂಗಿಯ ಗಾಂಧಿ ಪ್ರತಿಮೆ ಆಕರ್ಷಕವಾಗಿದೆ. ಕೊಠಡಿ ಸಂಪೂರ್ಣ ನವೀಕರಿಸಲಾಗಿದೆ. ಒಳ ಪ್ರವೇಶಿಸಿದರೆ ಸ್ವಾತಂತ್ರ್ಯ ಚಳವಳಿ ಕಥಾನಕವೇ ತೆರೆದುಕೊಳ್ಳುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು