ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಎಸ್‌ಪಿ ಜಾಗದಲ್ಲಿ ಜಿಲ್ಲಾಡಳಿತ ಭವನ: ಸಚಿವ ಆನಂದ್‌ ಸಿಂಗ್‌

Last Updated 12 ಫೆಬ್ರುವರಿ 2021, 15:42 IST
ಅಕ್ಷರ ಗಾತ್ರ

ಹೊಸಪೇಟೆ: ‘ನಗರದ ಟಿ.ಬಿ. ಡ್ಯಾಂ ರಸ್ತೆಯಲ್ಲಿನ ತುಂಗಭದ್ರಾ ಸ್ಟೀಲ್ಸ್‌ ಪ್ರಾಡಕ್ಟ್ಸ್‌ಗೆ (ಟಿಎಸ್‌ಪಿ) ಸೇರಿದ ಜಾಗದಲ್ಲಿ ಎಲ್ಲಾ ಸರ್ಕಾರಿ ಕಚೇರಿಗಳ ಕಟ್ಟಡ ಸಮುಚ್ಚಯ ನಿರ್ಮಾಣಕ್ಕೆ ಕಂದಾಯ ಇಲಾಖೆಯಿಂದ ತಾತ್ವಿಕ ಒಪ್ಪಿಗೆ ಸಿಕ್ಕಿದೆ’ ಎಂದು ಮೂಲಸೌಕರ್ಯ, ಹಜ್‌ ಮತ್ತು ವಕ್ಫ್‌ ಖಾತೆ ಸಚಿವ ಆನಂದ್‌ ಸಿಂಗ್‌ ತಿಳಿಸಿದರು.

ಶುಕ್ರವಾರ ಸಂಜೆ ನಗರದಲ್ಲಿ ಬಿಜೆಪಿ ನಗರ ಘಟಕದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ‘ಟಿಎಸ್‌ಪಿ ಮುಚ್ಚಿದ ನಂತರ ಆ ಜಾಗ ಗೃಹಮಂಡಳಿಗೆ ಹಸ್ತಾಂತರ ಮಾಡಲಾಗಿತ್ತು. ಆದರೆ, ವಿಜಯನಗರ ಜಿಲ್ಲೆ ಘೋಷಣೆಯಾದ ನಂತರ ಎಲ್ಲ ಸರ್ಕಾರಿ ಕಚೇರಿಗಳ ಕಟ್ಟಡ ಒಂದೇ ಕಡೆ ನಿರ್ಮಿಸಲು ಉದ್ದೇಶಿಸಿ ಆ ಜಾಗ ಉಳಿಸಿಕೊಳ್ಳಲಾಗಿತ್ತು. ಈಗ ಅಲ್ಲಿ ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ಕಂದಾಯ ಇಲಾಖೆಯಿಂದ ಒಪ್ಪಿಗೆ ಸಿಕ್ಕಿದೆ. ಶನಿವಾರದಿಂದಲೇ (ಫೆ.13) ಸ್ವಚ್ಛತೆ ಸೇರಿದಂತೆ ಇತರೆ ಕೆಲಸ ಆರಂಭಿಸಲಾಗುವುದು’ ಎಂದು ಹೇಳಿದರು.

‘ಜೆಡಿಎಸ್‌–ಕಾಂಗ್ರೆಸ್‌ ಸರ್ಕಾರದಲ್ಲಿ ನನಗೆ ಸಚಿವ ಸ್ಥಾನ ಕೊಡುತ್ತೇನೆ ಎಂದು ಆಮಿಷ ಒಡ್ಡಿದ್ದರು. ಆದರೆ, ನನ್ನ ಆತ್ಮಸಾಕ್ಷಿ ಒಪ್ಪಲಿಲ್ಲ. ವಿಜಯನಗರ ಜಿಲ್ಲೆ ರಚನೆ, ಏತ ನೀರಾವರಿ ಯೋಜನೆ ಜಾರಿಗೊಳಿಸುವುದು ನನ್ನ ಮುಖ್ಯ ಆದ್ಯತೆ ಆಗಿತ್ತು. ಜಿಲ್ಲೆಗೆ ಬೇಡಿಕೆ ಇಟ್ಟಾಗ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಒಪ್ಪಿರಲಿಲ್ಲ. ಆದರೆ, ನನ್ನ ಪಟ್ಟು ಸಡಿಲಿಸಲಿಲ್ಲ. ಅದು ಬಿಜೆಪಿ ಸರ್ಕಾರದಲ್ಲಿ ಈಡೇರಿದೆ. ಜಿಲ್ಲೆ ರಚಿಸಲೆಂದೆ ಹಂಪಿ ವಿರೂಪಾಕ್ಷ ನನ್ನೊಂದಿಗೆ 16 ಜನ ಶಾಸಕರನ್ನು ಬಿಜೆಪಿಗೆ ಕಳಿಸಿದ’ ಎಂದರು.

‘ವಿಷಕಂಠನಂತೆ ಮಂತ್ರಿ ಸ್ಥಾನ ಪಡೆದು ಜಿಲ್ಲೆ ಘೋಷಣೆಗೆ ಕಾಯುತ್ತಿದ್ದೆ. ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದೇನೆ ಹೊರತು ಪಕ್ಷಕ್ಕಾಗಿ ದುಡಿಯುವುದಿಲ್ಲ ಎಂದಿಲ್ಲ. ಜಿಲ್ಲೆ ಒಂದು ಸ್ವರೂಪ ಪಡೆದುಕೊಳ್ಳುವವರೆಗೆ ಆಡಳಿತದಲ್ಲಿ ಇರುತ್ತೇನೆ. ಉತ್ತಮ ಕೆಲಸ ಮಾಡುತ್ತೇನೆ’ ಎಂದು ಹೇಳಿದರು.

ಇದೇ ವೇಳೆ ನೂತನ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರನ್ನು ಸನ್ಮಾನಿಸಲಾಯಿತು. ಪಕ್ಷದ ಅಂಗವಿಕಲ ಕಾರ್ಯಕರ್ತ ಹುಲುಗಪ್ಪ ಅವರಿಗೆ ಮನೆ ಕಟ್ಟಿಸಿಕೊಳ್ಳಲು ಆನಂದ್‌ ಸಿಂಗ್‌ ಅವರು ವೈಯಕ್ತಿಕವಾಗಿ ₹3 ಲಕ್ಷ ನೆರವು ನೀಡಿದರು.

ಬಿಜೆಪಿ ಮಂಡಲ ಅಧ್ಯಕ್ಷ ಬಸವರಾಜ ನಾಲತ್ವಾಡ, ಎಸ್ಟಿ ಮೋರ್ಚಾ ತಾಲ್ಲೂಕು ಅಧ್ಯಕ್ಷ ವ್ಯಾಸನಕೆರೆ ಶ್ರೀನಿವಾಸ, ಹಿಂದುಳಿದ ಮೋರ್ಚಾ ಜಿಲ್ಲಾ ಅಧ್ಯಕ್ಷ ಅಯ್ಯಾಳಿ ತಿಮ್ಮಪ್ಪ, ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ಕವಿತಾ ಈಶ್ವರ್‌ ಸಿಂಗ್‌, ಮಂಡಲ ಅಧ್ಯಕ್ಷೆ ಭಾರತಿ ಪಾಟೀಲ್‌, ಅಲ್ಪಸಂಖ್ಯಾತರ ಘಟಕದ ತಾಲ್ಲೂಕು ಅಧ್ಯಕ್ಷ ಟಿಂಕರ್‌ ರಫೀಕ್‌, ಮುಖಂಡರಾದ ಕಟಗಿ ರಾಮಕೃಷ್ಣ, ರಾಮಲಿಂಗಪ್ಪ, ಶಶಿಧರ್‌ ಸ್ವಾಮಿ ಇದ್ದರು.

‘ಅಸಮಂಜಸ ಹೇಳಿಕೆ ಸಲ್ಲ’
‘ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ ಬಳ್ಳಾರಿ, ವಿಜಯನಗರ ಸೇರಿಸಿ ಅಖಂಡ ಜಿಲ್ಲೆ ಮಾಡುತ್ತೇವೆ ಎಂದು ಕೆಲ ನಾಯಕರು ಅಸಮಂಜಸ ಹೇಳಿಕೆ ನೀಡಿದ್ದಾರೆ. ಆ ರೀತಿಯ ಹೇಳಿಕೆ ಯಾರು ನೀಡಬಾರದು. ಒಂದುವೇಳೆ ವಿಜಯನಗರವನ್ನು ಪುನಃ ಬಳ್ಳಾರಿಗೆ ಸೇರಿಸಿದರೆ ಯಾದಗಿರಿ, ಕೊಪ್ಪಳ ಜಿಲ್ಲೆಗಳಲ್ಲಿ ಆ ಕೂಗು ಕೇಳಿ ಬರಬಹುದು’ ಎಂದು ಸಚಿವ ಆನಂದ್‌ ಸಿಂಗ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT