ಹೊಸಪೇಟೆ: ಇಲ್ಲಿನ ಅನಂತಶಯನಗುಡಿ ರೈಲ್ವೆ ವಸತಿ ಗೃಹಕ್ಕೆ ತೆರಳುವ ಮಾರ್ಗ ಮಧ್ಯದ ಚರಂಡಿ ಬಳಿ ಬಿಸಾಡಿದ ನವಜಾತ ಹೆಣ್ಣು ಶಿಶುವನ್ನು ನಾಯಿಗಳು ತಿಂದದ್ದರಿಂದ ಮಗು ಸತ್ತು ಹೋಗಿರುವ ಹೃದಯ ವಿದ್ರಾವಕ ಘಟನೆ ಗುರುವಾರ ಬೆಳಕಿಗೆ ಬಂದಿದೆ.
‘ನಾಯಿಗಳು ಮಗುವಿನ ಬಲಗೈ ಮತ್ತು ಎಡಕಾಲು ತಿಂದಿವೆ. ಅದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯೊಬ್ಬರು ನೋಡಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಪೊಲೀಸರು ಮಗುವಿನ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಅಲ್ಲಿ ಮರಣೋತ್ತರ ಶವಪರೀಕ್ಷೆ ನಡೆಸಿ, ವಾರಸುದಾರರಿಲ್ಲದ ಕಾರಣ ನಗರಸಭೆ ಸಿಬ್ಬಂದಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಮಗುವಿನ ಪೋಷಕರ ಪತ್ತೆಕಾರ್ಯನಡೆದಿದೆ’ ಎಂದು ಗ್ರಾಮೀಣ ಠಾಣೆ ಸಿಪಿಐ ಶ್ರೀನಿವಾಸ ಮೇಟಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ವಿದ್ಯುತ್ ಸ್ಪರ್ಶ; ಕಾರ್ಮಿಕ ಸಾವು
ನಗರದ ನಾಗಪ್ಪ ಕಟ್ಟೆ ಬಳಿಯ ತುಷಾರ ಆಟೊ ವರ್ಕ್ಸ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ವಿದ್ಯುತ್ ಶಾಕ್‌ನಿಂದ ಬೆಳಗಟ್ಟೆ ಗ್ರಾಮದ ಮೊಹಮ್ಮದ್ ರಫೀಕ್ (30) ಸಾವನ್ನಪ್ಪಿದ್ದಾರೆ.
‘ಸಂಜೆ ಕಾರ್ ತೊಳೆಯಲು ಯಂತ್ರದ ಗುಂಡಿ ತಿವಿಯಲು ಹೋದಾಗ ವಿದ್ಯುತ್ ಪ್ರವಹಿಸಿ ಮೊಹಮ್ಮದ್ ಮೃತಪಟ್ಟಿದ್ದಾರೆ. ನಿರ್ಲಕ್ಷ್ಯ ವಹಿಸಿದ ಗ್ಯಾರೇಜ್ ಮಾಲೀಕ ಹನುಮಂತಪ್ಪ ಎನ್ನುವವರ ವಿರುದ್ಧ ಮೃತರ ಪತ್ನಿ ಠಾಣೆಗೆ ದೂರು ಸಲ್ಲಿಸಿದ್ದಾರೆ’ ಎಂದು ಗ್ರಾಮೀಣ ಠಾಣೆ ಪೊಲೀಸರು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.