ಭಾನುವಾರ, ಮೇ 29, 2022
20 °C
ಸಂಗೀತ ವಿಭಾಗದ ಪದವಿ, ಸ್ನಾತಕೋತ್ತರ ಪದವಿಗೆ ಒಂದೇ ಸಿಬ್ಬಂದಿ

ಹಂಪಿ ವಿವಿಯಲ್ಲಿ ಸಂಗೀತ ಗೊತ್ತಿಲ್ಲದವರೂ ಸಂಗೀತ ವಿಭಾಗಕ್ಕೆ ಮುಖ್ಯಸ್ಥ!

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂಗೀತ ಮತ್ತು ನೃತ್ಯ ವಿಭಾಗಕ್ಕೆ ಸಂಗೀತ ಗೊತ್ತಿಲ್ಲದವರನ್ನೇ ಮುಖ್ಯಸ್ಥರಾಗಿ ನೇಮಕ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಸಂಗೀತದ ಗಂಧ, ಗಾಳಿ ಗೊತ್ತಿಲ್ಲದವರನ್ನು ಸಂಗೀತ ವಿಭಾಗಕ್ಕೆ ನೇಮಕ ಮಾಡಿರುವುದರಿಂದ ವಿಭಾಗದ ಒಟ್ಟಾರೆ ಬೆಳವಣಿಗೆಯೇ ಕುಂಠಿತಗೊಳ್ಳುವ ಸಾಧ್ಯತೆ ಇದೆ ಎಂದು ಸ್ವತಃ ಅಲ್ಲಿನ ಸಿಬ್ಬಂದಿ, ವಿದ್ಯಾರ್ಥಿಗಳೇ ಕಳವಳ ವ್ಯಕ್ತಪಡಿಸಿದ್ದಾರೆ.

ವಿಭಾಗದ ಹಾಲಿ ಮುಖ್ಯಸ್ಥರಾಗಿರುವ ಗೋವಿಂದ್‌ ಅವರು ಬಿ.ಎ, ಎಂ.ಎ ಕನ್ನಡ, ಪಿಎಚ್‌.ಡಿ ಪದವಿ ಪಡೆದಿದ್ದಾರೆ. ಈ ಪದವಿಗಳನ್ನು ಆಧರಿಸಿ 2018ರಲ್ಲಿ ಸಂಗೀತ ಮತ್ತು ನೃತ್ಯ ವಿಭಾಗದಲ್ಲಿ (ಕನ್ನಡ ಸಾಹಿತ್ಯ) ಸಹಾಯಕ ಪ್ರಾಧ್ಯಾಪಕರಾಗಿ ನೇಮಕಗೊಂಡಿದ್ದಾರೆ. ಆದರೆ, ಸಂಗೀತ ವಿಭಾಗದ ಪ್ರಾಧ್ಯಾಪಕರಾಗಬೇಕಾದರೆ ಸಂಗೀತದಲ್ಲಿ ಮೂರು ವರ್ಷ ‘ಬಿ’ ಮ್ಯೂಸಿಕ್‌, 2 ವರ್ಷ ಎಂ ಮ್ಯೂಸಿಕ್‌, ಮೂರು ವರ್ಷ ಪಿಎಚ್‌.ಡಿ. ಮುಗಿಸಿರಬೇಕು. ಇದರೊಂದಿಗೆ ಕೆ–ಸೆಟ್‌, ನೆಟ್‌ ಇರಬೇಕು. ಇದ್ಯಾವುದೂ ಗೋವಿಂದ್‌ ಅವರು ಮಾಡಿಲ್ಲ. ಸಂಗೀತ ವಿಭಾಗದಲ್ಲಿರುವ ಅವರು ಕನ್ನಡ ವಿಷಯದ ಬೋಧನೆ ಮಾಡಬೇಕು. ಆದರೆ, ಸಂಗೀತದ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಅದರ ಬಗ್ಗೆ ಅವರಿಗೆ ಏನೂ ಗೊತ್ತಿಲ್ಲ. ಗೊಂದಲ ಸೃಷ್ಟಿಯಾಗುತ್ತಿದೆ ಎಂದು ವಿದ್ಯಾರ್ಥಿಗಳೇ ಗೋಳು ತೋಡಿಕೊಂಡಿದ್ದಾರೆ.

‘ಸಂಗೀತ ವಿಭಾಗ ಬೆಳೆಯಬೇಕಾದರೆ ಸಂಗೀತದಲ್ಲಿ ಸಂಶೋಧನೆ, ಪುಸ್ತಕಗಳು ಬರಬೇಕು. ಸಂಗೀತ ಕಲಾವಿದರು ಬೆಳೆಯಬೇಕು. ಸಂಗೀತ ತಜ್ಞರು, ಸಂಗೀತ ಓದಿದವರು, ಕಲಿಸುವವರು ಬರಬೇಕು. ಆದರೆ, ಗೋವಿಂದ್‌ ಹೊರತುಪಡಿಸಿದರೆ ಮಿಕ್ಕುಳಿದವರೆಲ್ಲರೂ ತಾತ್ಕಾಲಿಕ ಸಿಬ್ಬಂದಿಯೇ ಇದ್ದಾರೆ. ತಾತ್ಕಾಲಿಕ ಸಿಬ್ಬಂದಿ ಪರಿಣತಿ ಪಡೆದಿದ್ದರೂ ಅವರಿಗೆ ಅವಕಾಶಗಳನ್ನು ನಿರಾಕರಿಸಲಾಗುತ್ತಿದೆ. ಎಲ್ಲರ ಮೇಲೂ ಸವಾರಿ ಮಾಡುತ್ತಿದ್ದಾರೆ. ಇದರಿಂದ ಸಂಗೀತ ವಿಭಾಗ ಹಿಮ್ಮುಖವಾಗಿ ಚಲಿಸುತ್ತಿದೆ’ ಎಂದು ಆರೋಪಿಸಿದ್ದಾರೆ.

ಯುಜಿಸಿ ನಿಯಮದ ಪ್ರಕಾರ, ಸಂಗೀತ ವಿಭಾಗದಲ್ಲಿ ಪದವಿ, ಸ್ನಾತಕೋತ್ತರಕ್ಕೆ ಪ್ರತ್ಯೇಕ ಸಿಬ್ಬಂದಿ ಇರಬೇಕು. ಆದರೆ, ಅದಿಲ್ಲ. ಪದವಿ ಅಧ್ಯಯನ ಮಂಡಳಿ, ಸ್ನಾತಕೋತ್ತರ ಅಧ್ಯಯನ ಮಂಡಳಿ, ಪರೀಕ್ಷಾ ಮಂಡಳಿ ಕೂಡ ಪ್ರತ್ಯೇಕವಾಗಿರಬೇಕು. ಇದ್ಯಾವುದೂ ಇಲ್ಲ. ಸಂಗೀತದ ಆಳ–ಅಗಲ ಗೊತ್ತಿದ್ದವರನ್ನು ವಿಭಾಗಕ್ಕೆ ನೇಮಿಸಬೇಕು. ವಿಭಾಗದಲ್ಲಿ ವೃತ್ತಿಪರ ಸಂಗೀತ ಬೋಧಕರ ಕೊರತೆ ಇದೆ. ಹಾಲಿ ಹುದ್ದೆಗಳ ನೇಮಕಾತಿಯಲ್ಲಿ ಹುದ್ದೆ ತುಂಬಲು ಒತ್ತು ಕೊಡಬೇಕಿತ್ತು. ಆದರೆ, ಆ ಕೆಲಸ ಕೂಡ ಆಗಿಲ್ಲ ಎಂದು ತಿಳಿಸಿದ್ದಾರೆ.

‘ಈ ಹಿಂದಿನ ಕುಲಪತಿ ಮಲ್ಲಿಕಾ ಎಸ್‌. ಘಂಟಿ ಅವರ ತಪ್ಪಿನಿಂದ ಗೋವಿಂದ್‌ ಮುಖ್ಯಸ್ಥರಾಗಿದ್ದಾರೆ. ಗೋವಿಂದ್‌ ಅವರಿಗಿಂತ ಎಲ್ಲದರಲ್ಲೂ ಜಯದೇವಿ ಜಂಗಮಶೆಟ್ಟಿ ಎಂಬುವರು ಹಿರಿದಾದ ಸಾಧನೆ ಮಾಡಿದ್ದರು. ಸಂಗೀತದಲ್ಲಿ ಎಲ್ಲ ಪದವಿ ಪಡೆದಿದ್ದರು. ಆಳ ಜ್ಞಾನವೂ ಇತ್ತು. ಪ್ರತಿಭಾವಂತರನ್ನು ಕಡೆಗಣಿಸಿ, ಯಾವುದೇ ಜ್ಞಾನವಿಲ್ಲದವರಿಗೆ ಮುಖ್ಯಸ್ಥರಾಗಿ ನೇಮಿಸಿದ್ದರಿಂದ ಇಂದು ಈ ಪರಿಸ್ಥಿತಿ ಸೃಷ್ಟಿಯಾಗಿದೆ. ಆದರೆ, ಹಾಲಿ ಕುಲಪತಿಗಳಾದರೂ ತಪ್ಪನ್ನು ಸರಿಪಡಿಸಬೇಕು’ ಎಂದು ಹೆಸರು ಹೇಳಲಿಚ್ಛಿಸದ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕರೊಬ್ಬರು ಹೇಳಿದರು.

 

ವಿದ್ಯಾರ್ಥಿಗಳ ಜಾತಿ ಸಂಘಟನೆ

‘ಸಂಗೀತ ವಿಭಾಗದ ಮುಖ್ಯಸ್ಥರು ವಿದ್ಯಾರ್ಥಿಗಳಿಗೆ ಪಾಠ, ಪ್ರವಚನ ಮಾಡುವುದಕ್ಕಿಂತ ಅವರ ಜಾತಿಗೆ ಸೇರಿದ ವಿದ್ಯಾರ್ಥಿಗಳನ್ನು ಸಂಘಟಿಸಿ ಜಾತಿ ಸಂಘಟನೆ ಮಾಡುತ್ತಿದ್ದಾರೆ. ಇತರೆ ಜಾತಿಗಳ ವಿದ್ಯಾರ್ಥಿಗಳನ್ನು ಕೀಳಾಗಿ ಕಾಣುತ್ತಾರೆ. ಜಾತಿ ಹೆಸರಿನಲ್ಲಿ ವಿದ್ಯಾರ್ಥಿಗಳನ್ನು ವರ್ಗೀಕರಣ ಮಾಡುವುದು ಎಷ್ಟು ಸರಿ’ ಎಂದು ಅಲ್ಲಿನ ವಿದ್ಯಾರ್ಥಿಗಳು ಪ್ರಶ್ನಿಸಿದ್ದಾರೆ. ಈ ರೀತಿ ಸಂಘಟನೆ ಕಟ್ಟಲಾಗುತ್ತಿದೆ ಎನ್ನುವುದನ್ನು ಅಲ್ಲಿನ ನೌಕರರು ಕೂಡ ಒಪ್ಪಿಕೊಂಡಿದ್ದಾರೆ.

ಈ ವಿಷಯವನ್ನು ಕೆಲವು ನೌಕರರು ಕುಲಪತಿ ಅವರ ಗಮನಕ್ಕೂ ತಂದಿದ್ದು, ಅವರು ತರಾಟೆಗೆ ತೆಗೆದುಕೊಂಡಿದ್ದರೂ ಅವರು ಬದಲಾಗಿಲ್ಲ ಎಂದು ಗೊತ್ತಾಗಿದೆ. ಉಪಕುಲಸಚಿವರೊಬ್ಬರು ಎಲ್ಲ ಹಂತದಲ್ಲೂ ಅವರಿಗೆ ಬೆಂಬಲವಾಗಿ ನಿಂತಿರುವುದರಿಂದ ಗೋವಿಂದ್‌ ಅವರು ಯಾರನ್ನೂ ಕ್ಯಾರೆ ಎನ್ನುವುದಿಲ್ಲ ಎಂದು ಆರೋಪಿಸಿದ್ದಾರೆ. ಆದರೆ, ಈ ಆರೋಪವನ್ನು ಗೋವಿಂದ್‌ ಅಲ್ಲಗಳೆದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು