ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಪ್ಲಿ ತಾಲ್ಲೂಕಿನಲ್ಲಿ ಪ್ರಥಮ ಪ್ರಯತ್ನ: ವೈಜ್ಞಾನಿಕ ಪದ್ಧತಿಯಲ್ಲಿ ಈರುಳ್ಳಿ ಬೆಳೆ

Last Updated 23 ಫೆಬ್ರುವರಿ 2022, 5:11 IST
ಅಕ್ಷರ ಗಾತ್ರ

ಕಂಪ್ಲಿ: ಹನಿ ನೀರಾವರಿ ಪದ್ಧತಿ, ಮಲ್ಚಿಂಗ್ ಶೀಟ್ ಹೊದಿಕೆ ಅಳವಡಿಸಿಕೊಂಡು ನಾಟಿ ಪದ್ಧತಿಯಲ್ಲಿ ರೈತರೊಬ್ಬರು ಈರುಳ್ಳಿಯನ್ನು ವೈಜ್ಞಾನಿಕವಾಗಿ ಬೆಳೆದಿದ್ದಾರೆ.

ತಾಲ್ಲೂಕಿನಲ್ಲಿ ಬಹುತೇಕ ರೈತರು ಸಾಮಾನ್ಯವಾಗಿ ಹೊಲದಲ್ಲಿ ಮಡಿ ಸಿದ್ಧಪಡಿಸಿ ನೇರ ಬಿತ್ತನೆಯಲ್ಲಿ ಕೈಯಿಂದ ಬೀಜ ಚೆಲ್ಲುವುದು ವಾಡಿಕೆ. ಆದರೆ, ತಾಲ್ಲೂಕಿನ ದೇವಸಮುದ್ರ ಗ್ರಾಮದ ರೈತ ವಿ. ಶಿವನಾಗಪ್ರಸಾದ್ (ನಾಣಿ) ಶೇಡ್ ನೆಟ್‍ನಲ್ಲಿ (ನರ್ಸರಿ) ಮಡಿ ತಯಾರಿಸಿ ಒಂದೂವರೆ ಕೆ.ಜಿ ಈರುಳ್ಳಿ ಬೀಜ ಚೆಲ್ಲಿದ ನಂತರ ಬೆಳೆದ ಸಸಿಯನ್ನು ಒಂದು ತಿಂಗಳು ಬಿಟ್ಟು ಕೀಳಿ ನಾಟಿ ಮಾಡಿದ್ದಾರೆ.

ತೋಟಗಾರಿಕೆ ಬೆಳೆಗಳನ್ನು ಬೆಳೆಯುವುದರಲ್ಲಿ ಸಿದ್ಧಹಸ್ತರಾಗಿರುವ ಅವರು ಒಂದು ಎಕರೆ ಗುತ್ತಿಗೆ ಪಡೆದು ನಾಟಿ ಪದ್ಧತಿಯಲ್ಲಿ ಅರ್ಕಾ ಕಲ್ಯಾಣ ತಳಿ ಈರುಳ್ಳಿ ಬೆಳೆ ಬೆಳೆಯುವ ಹೊಸ ಪ್ರಯತ್ನ ಮಾಡಿದ್ದಾರೆ.

ಮಹಾರಾಷ್ಟ್ರದ ಜಲಗಾಂವನಲ್ಲಿ ರೈತರೊಬ್ಬರು ಈ ಪದ್ಧತಿಯಲ್ಲಿ ಈರುಳ್ಳಿ ಬೆಳೆದಿರುವುದೇ ನನಗೆ ಪ್ರೇರಣೆ ಎಂದು ತಿಳಿಸಿದರು.

1 ಎಕರೆಯಲ್ಲಿ 16 ಸಾಲಿನ ಬೆಡ್ ಸಿದ್ಧಪಡಿಸಿ ಮಲ್ಚಿಂಗ್ ಶೀಟ್ ಜೊತೆಗೆ ಹನಿ ನೀರಾವರಿ ಅಳವಡಿಸಿದ ನಂತರ ಈರುಳ್ಳಿ ಸಸಿಯಿಂದ ಸಸಿಗೆ 8 ಇಂಚು ಅಂತರದಲ್ಲಿ ನಾಟಿ ಮಾಡಿದ್ದಾರೆ.

‘ಈಗಾಗಲೇ ಎಕರೆ ಈರುಳ್ಳಿ ಬೆಳೆಗೆ ಬೀಜ, ಗೊಬ್ಬರ, ಕ್ರಿಮಿನಾಶಕ, ನಿರ್ವಹಣೆ ಸೇರಿ ಇಲ್ಲಿಯವರೆಗೆ ಸುಮಾರು ₹ 29,000 ಖರ್ಚು ಬಂದಿದೆ. ಬೆಳೆ ಬಂದ ನಂತರ ಹೊಲದ ಮಾಲೀಕರಿಗೆ ಗುತ್ತಿಗೆ ₹ 15,000 ಕೊಡಬೇಕು. ಈರುಳ್ಳಿ 120 ದಿನದಲ್ಲಿ ಅಂದರೆ ಮೇ ಮೊದಲ ವಾರದಲ್ಲಿ ಕೀಳಲು ಸಿದ್ಧವಾಗುತ್ತದೆ. ಆ ವೇಳೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರೆತಲ್ಲಿ ಈ ಹಿಂದೆ ಬೆಳೆದ ಟೊಮೆಟೊ ಬೆಲೆಯಲ್ಲಿ ಆದ ನಷ್ಟವನ್ನು ಸರಿದೂಗಿಸಿಕೊಳ್ಳಬಹುದು ಎಂದರು.

ಗಂಗಾವತಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ₹ 14,400 ಮೌಲ್ಯದ ಸುಮಾರು 80 ಕೆ.ಜಿ ಮಲ್ಚಿಂಗ್ ಶೀಟ್ ಅನ್ನು ಉಚಿತವಾಗಿ ನೀಡಿ ಪ್ರೋತ್ಸಾಹಿಸಿದ್ದಾರೆ ಎಂದು ರೈತ ಹರ್ಷದಿಂದ ತಿಳಿಸಿದರು.

‘ನೀರಿನ ಉಳಿತಾಯ’
ಹನಿ ನೀರಾವರಿ ಪದ್ಧತಿ, ಮಲ್ಚಿಂಗ್ ಶೀಟ್ ಹೊದಿಕೆ ಅಳವಡಿಸಿಕೊಂಡು ನಾಟಿ ಪದ್ಧತಿಯಲ್ಲಿ ಈರುಳ್ಳಿ ಬೆಳೆಯುವುದರಿಂದ ಕಳೆ ನಿಯಂತ್ರಣ, ತೇವಾಂಶ ಸಂರಕ್ಷಣೆ, ನೀರಿನ ಉಳಿತಾಯವಾಗುತ್ತದೆ. ಕಂಪ್ಲಿ ತಾಲ್ಲೂಕಿನಲ್ಲಿ ಇದು ಪ್ರಾಯೋಗಿಕ ಪ್ರಯತ್ನವಾಗಿದ್ದು, ಈ ರೈತ ಯಶ ಕಂಡಲ್ಲಿ ಉಳಿದೆಡೆಯೂ ವಿಸ್ತರಿಸುವ ಉದ್ದೇಶವಿದೆ ಎಂದು ಗಂಗಾವತಿ ತೋಟಗಾರಿಕೆ ವಿಜ್ಞಾನಿ, ಕೃಷಿ ವಿಜ್ಞಾನ ಕೇಂದ್ರದ ಜ್ಯೋತಿ ಹೇಳಿದರು.

‘ನೀರಾವರಿ ಪದ್ಧತಿ; ಸಹಾಯಧನ’
‘ಕಂಪ್ಲಿ ತಾಲ್ಲೂಕಿನಲ್ಲಿ ಕೊಳವೆಬಾವಿ, ಪಂಪ್‍ಸೆಟ್ ಹೊಂದಿರುವ ರೈತರು ಬೇಸಿಗೆ ಹಂಗಾಮಿಗೆ ಸುಮಾರು 500 ಎಕರೆಯಲ್ಲಿ ಈರುಳ್ಳಿ ಬೆಳೆದಿದ್ದಾರೆ. ವೈಜ್ಞಾನಿಕ ಪದ್ಧತಿಯಲ್ಲಿ ಈರುಳ್ಳಿ ಬೆಳೆಯಲು ಮಲ್ಚಿಂಗ್ ಶೀಟ್ ಎಕರೆಗೆ ₹ 6,400 ಸಹಾಯಧನ ಲಭ್ಯವಿದೆ. ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಲು ಸಹಾಯಧನವಿದೆ’ ಎಂದು ಜೆ. ಶಂಕರ್, ಹಿರಿಯ ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT