ಗುರುವಾರ , ಜನವರಿ 21, 2021
27 °C

‘ಪಂಚಾಯಿತಿ ಸದಸ್ಯರು ಜವಾಬ್ದಾರಿ ಅರಿತು ಕೆಲಸ ಮಾಡಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ‘ಗ್ರಾಮ ಪಂಚಾಯಿತಿಯ ನೂತನ ಸದಸ್ಯರು ಅವರ ಜವಾಬ್ದಾರಿ ಅರಿತು ಕೆಲಸ ನಿರ್ವಹಿಸಬೇಕಿದೆ’ ಎಂದು ಅಬ್ದುಲ್‌ ನಜೀರ್ ಸಾಬ್‌ ರಾಜ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಜಿ.ಎಸ್‌. ಗಣೇಶ್‌ ಪ್ರಸಾದ್‌ ತಿಳಿಸಿದರು.

ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗದ ಸಹಭಾಗಿತ್ವದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪಂಚಾಯಿತಿ ಸದಸ್ಯರ ಸಾಮರ್ಥ್ಯ ಅಭಿವೃದ್ಧಿ ತರಬೇತಿದಾರರ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದರು.

‘ಸದಸ್ಯರಿಗೆ ಅವರ ಹಕ್ಕುಗಳಿರುವಂತೆ, ಕರ್ತವ್ಯ ಕೂಡ ಇರುತ್ತದೆ. ಅದನ್ನು ಇಲ್ಲಿ ತರಬೇತಿ ಪಡೆದವರು ಸದಸ್ಯರಿಗೆ ಮನವರಿಕೆ ಮಾಡಿಕೊಡಬೇಕು. ಅದು ಗೊತ್ತಾದರೆ ಪಂಚಾಯಿತಿಗಳು ಸುಗಮವಾಗಿ ಕಾರ್ಯನಿರ್ವಹಿಸಲು ಅನುಕೂಲವಾಗುತ್ತದೆ’ ಎಂದು ಹೇಳಿದರು.

ಅಭಿವೃದ್ಧಿ ಅಧ್ಯಯನ ವಿಭಾಗದ ಮುಖ್ಯಸ್ಥ ಜನಾರ್ದನ ಮಾತನಾಡಿ, ‘ಪಂಚಾಯಿತಿ ಚುನಾವಣೆಯಲ್ಲಿ ಅಕ್ಷರಸ್ಥರು, ಅನಕ್ಷರಸ್ಥರು, ಈ ಹಿಂದೆ ಸದಸ್ಯರಾಗಿ ಕೆಲಸ ನಿರ್ವಹಿಸಿದರು ಪುನಃ ಆಯ್ಕೆಗೊಂಡಿದ್ದಾರೆ. ಅವರಿಗೆ ಅವರ ಭಾಷೆಯಲ್ಲಿಯೇ ಅರ್ಥವಾಗುವಂತೆ ಪಂಚಾಯಿತಿ ಆಡಳಿತದ ಬಗ್ಗೆ ತಿಳಿಸಿಕೊಡಬೇಕು’ ಎಂದು ತಿಳಿಸಿದರು.

‘ರಾಜ್ಯ ಸರ್ಕಾರದ ಪಂಚಾಯತ್ ರಾಜ್ ವ್ಯವಸ್ಥೆಗೆ ಸಂಬಂಧಿಸಿದ ಅನೇಕ ಯೋಜನೆಗಳ ಮಾದರಿಗಳನ್ನು ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗವು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದೆ. ಅವುಗಳಲ್ಲಿ ಕೆಲವೊಂದು ಯೋಜನೆಗಳನ್ನು ನೇರವಾಗಿ ಸರ್ಕಾರವು ಅನುಷ್ಠಾನಗೊಳಿಸಿದೆ’ ಎಂದರು.

ತರಬೇತಿ ಕಾರ್ಯಾಗಾರದ ಸಂಚಾಲಕ ಎಚ್.ಡಿ. ಪ್ರಶಾಂತ್ ಮಾತನಾಡಿ, ‘ಸಮಯ ಪ್ರಜ್ಞೆ ಜೀವನದಲ್ಲಿ ಬಹಳ ಅವಶ್ಯಕ. ಅದನ್ನು ಮನಗಂಡು ಕೆಲಸ ನಿರ್ವಹಿಸಬೇಕು’ ಎಂದು ಹೇಳಿದರು.

ರಾಜ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಬೋಧಕರಾದ ಮಲ್ಲಿಕಾರ್ಜುನ್, ಶಿವಪುತ್ರಪ್ಪ, ಲಾರೆನ್ಸ್‌, ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಎ.ಶ್ರೀಧರ, ಶಿವಾನಂದ ವಿರಕ್ತಮಠ, ಲೋಕೇಶ್ ಬ್ಯಾಳಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.