ಮಂಗಳವಾರ, ಸೆಪ್ಟೆಂಬರ್ 21, 2021
29 °C

ಸಿನಿಮಾ ನಟರಲ್ಲ, ಪೋಷಕರು ಆದರ್ಶ: ಗವಿಶ್ರೀ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ(ವಿಜಯನಗರ): ‘ವಿದ್ಯಾರ್ಥಿಗಳು ಸಿನಿಮಾ ನಟ–ನಟಿಯರಲ್ಲ, ತಂದೆ–ತಾಯಿಯನ್ನು ಆದರ್ಶವಾಗಿ ಇಟ್ಟುಕೊಳ್ಳಬೇಕು’ ಎಂದು ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ನಗರದ ರೈಲು ನಿಲ್ದಾಣ ರಸ್ತೆಯಲ್ಲಿನ ಚಾಣಕ್ಯ ಕರಿಯರ್ ಅಕಾಡೆಮಿ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಕೇಂದ್ರದಲ್ಲಿ ಬುಧವಾರ ಸ್ಪರ್ಧಾರ್ಥಿಗಳಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಜಗತ್ತಿನಲ್ಲಿ ದುಡ್ಡಿಲ್ಲದವರು ಬಡವರಲ್ಲ. ಕನಸುಗಳು ಇಲ್ಲದವ ನಿಜವಾದ ಬಡವ. ನಿಮಗೆ ಸಿನಿಮಾ ನಟ, ನಟಿಯರು ಆದರ್ಶವಾಗುವುದು ಬೇಡ. ತಂದೆ–ತಾಯಿಯೆ ಆದರ್ಶವಾಗಬೇಕು. ನಿಮ್ಮ ಭವಿಷ್ಯ ರೂಪಿಸಲು ಎಷ್ಟು ಕಷ್ಟ ಅನುಭವಿಸಿರುತ್ತಾರೆ. ಅವರು ಹರಿದು ಬಟ್ಟೆ ತೊಟ್ಟು, ನಿಮಗೆ ಹೊಸ ಬಟ್ಟೆಗಳನ್ನು ಕೊಡಿಸುತ್ತಾರೆ. ಅವರೇ ಪ್ರೇರಣೆಯಾಗಬೇಕು. ಪಾಲಕರ ಬೆವರಿನ ಹನಿ ಬಗ್ಗೆ ನಿಮಗೆ ಅರಿವಾದರೆ ಅದೇ ಸಾಧನೆಗೆ ದಾರಿಯಾಗುತ್ತದೆ’ ಎಂದರು.

‘ಅಸಾಧ್ಯವಾದುದ್ದನ್ನು ಸಾಧಿಸುವ ಆತ್ಮವಿಶ್ವಾಸದಿಂದ ಮುನ್ನಡೆದರೆ ಯಶಸ್ಸಿನ ಮೆಟ್ಟಿಲು ಹತ್ತುವುದು ಸುಲಭ. ಯಶಸ್ಸು ಎಂಬುವುದು ಅಧಿಕಾರ, ದುಡ್ಡಿರುವವರ ಸ್ವತ್ತಲ್ಲ. ಯಶಸ್ಸು ಎಂಬುದು ಶ್ರಮಿಕರ ಸ್ವತ್ತು. ಹೀಗಾಗಿ ಎಲ್ಲರೂ ಶ್ರದ್ಧೆಯಿಂದ ಓದಿ ಮುಂದೆ ಬರಬೇಕು’ ಎಂದು ಹೇಳಿದರು. ಅಕಾಡೆಮಿ ನಿರ್ದೇಶಕ ಪ್ರದೀಪ್ ಗುಡ್ಡದ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.