ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಡ್ಲಿಗಿ| ಜನ ಬದಲಾದರೂ ಬದಲಾಗದ ಪಟ್ಟಣ

ನಿಧಾನ ಗತಿಯಲ್ಲಿ ಅಭಿವೃದ್ಧಿ ಕಡೆಗೆ ದಾಪುಗಾಲಿಡುತ್ತಿರುವ ಕೂಡ್ಲಿಗಿ ಪಟ್ಟಣ
Last Updated 6 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಕೂಡ್ಲಿಗಿ: ಈ ಪಟ್ಟಣದ ಜನ ಸಾಕಷ್ಟು ಬದಲಾಗಿದ್ದಾರೆ. ಬಹುತೇಕರು ಸುಸಜ್ಜಿತವಾದ ಮನೆಗಳನ್ನು ಕಟ್ಟಿಸಿಕೊಂಡಿದ್ದಾರೆ. ಎಲ್ಲರ ಬಳಿಯೂ ಸ್ಮಾರ್ಟ್‌ಫೋನ್‌ಗಳಿವೆ. ಆದರೆ, ಪಟ್ಟಣ ಮಾತ್ರ ಇನ್ನೂ ಸ್ಮಾರ್ಟ್‌ ಆಗಿಲ್ಲ.

ಆಧುನಿಕತೆಯತ್ತ ಪಟ್ಟಣ ಹೆಜ್ಜೆ ಇಡುತ್ತಿದ್ದರೂ ಅದು ಆಮೆ ಗತಿಯದ್ದಾಗಿದೆ. ಅದಕ್ಕೆ ಚುರುಕು ಮುಟ್ಟಿಸಬೇಕಾದವರಲ್ಲಿ ಇಚ್ಛಾಶಕ್ತಿ ಕೊರತೆಯೇ ಅದಕ್ಕೆ ಕಾರಣ ಎನ್ನುತ್ತಾರೆ ಸ್ಥಳೀಯರು.

ಒಟ್ಟು 20 ವಾರ್ಡ್‌ಗಳನ್ನು ಒಳಗೊಂಡಿರುವ ಕೂಡ್ಲಿಗಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಅನೇಕ ಬಡಾವಣೆಗಳನ್ನು ನೋಡಿದರೆ ಇಂದಿಗೂ ಯಾವ ಸೌಕರ್ಯಗಳು ತಲುಪದ ಕುಗ್ರಾಮಗಳು ನೆನಪಿಗೆ ಬರುತ್ತವೆ. ಅಷ್ಟರಮಟ್ಟಿಗೆ ಕೆಲ ಕಾಲೊನಿಗಳು ಸಮಸ್ಯೆಗಳ ಗೂಡಾಗಿವೆ.

ಪಟ್ಟಣದ ಹೃದಯ ಭಾಗದಲ್ಲಿರುವ ಮದಕರಿ ನಾಯಕ ವೃತ್ತದಿಂದ ಕೂಗಳತೆ ದೂರದಲ್ಲಿರುವ ಮ್ಯಾಸಕೇರಿ, ಡಾ.ಬಿ.ಆರ್‌. ಅಂಬೇಡ್ಕರ್‌ ನಗರ, ರಾಮ ನಗರ, ರಾಜೀವ ಗಾಂಧಿ ನಗರ ಈಗಲೂ ಮೂಲ ಸೌಕರ್ಯಗಳಿಂದ ವಂಚಿತವಾಗಿವೆ. ಇಡೀ ಪಟ್ಟಣದಲ್ಲಿ ಇನ್ನೂ ಒಳಚರಂಡಿ ಕಾಮಗಾರಿ ಪೂರ್ಣಗೊಂಡಿಲ್ಲ. ಇದರ ಪರಿಣಾಮ ಬಹುತೇಕ ಗಟಾರಗಳು ತುಂಬಿ ಹರಿಯುತ್ತವೆ.

ರಾಮನಗರ, ಮ್ಯಾಸಕೇರಿಯಲ್ಲಿ ರಸ್ತೆಯ ಮಧ್ಯದಲ್ಲಿಯೇ ಚರಂಡಿ ನೀರು ಹರಿಯುತ್ತದೆ. ಅದರ ನಡುವೆಯೇ ಜನ ಓಡಾಡಿಕೊಂಡಿರುತ್ತಾರೆ. ಮ್ಯಾಸಕೇರಿ, ಅಂಬೇಡ್ಕರ್‌ ನಗರದಲ್ಲಿ ವಾಸಿಸುವವರು ಹೆಚ್ಚಿನವರು ಬಡವರು. ಚಿಕ್ಕ ಚಿಕ್ಕ ಮನೆಗಳಿರುವುದರಿಂದ ಅವರ ಬಹುತೇಕ ದೈನಂದಿನ ಕೆಲಸಗಳು ರಸ್ತೆ ಬದಿಯಲ್ಲೇ ನಡೆಯುತ್ತವೆ. ಹರಿಯುತ್ತಿರುವ ಚರಂಡಿ ಪಕ್ಕವೇ ಕುಳಿತುಕೊಂಡು ಜನ ಬಟ್ಟೆ ಹಾಗೂ ಪಾತ್ರೆಗಳನ್ನು ತೊಳೆಯುತ್ತಾರೆ.

ಸಮಸ್ಯೆಗಳಿಂದ ರೋಸಿ ಹೋಗಿರುವ ಮ್ಯಾಸದಕೇರಿ ಜನ ಈ ಸಲ ಅವರ ಪೈಕಿ ಒಬ್ಬರನ್ನು ಕಣಕ್ಕಿಳಿಸಿದ್ದಾರೆ. ‘ಬೇರೆ ಬಡಾವಣೆಯವರನ್ನು ಆರಿಸಿ ನೋಡಿದ್ದೇವೆ. ಅವರಿಂದ ನಮಗೇನೂ ಆಗಿಲ್ಲ. ಈ ಸಲ ನಮ್ಮ ಬಡಾವಣೆಯವರೇ ಆದ ಮ್ಯಾಕಲ್‌ ಚಂದ್ರಪ್ಪ ಎಂಬುವರನ್ನು ಚುನಾವಣೆಗೆ ನಿಲ್ಲಿಸಿದ್ದೇವೆ. ಅವರು ಗೆದ್ದರೆ ನಮ್ಮ ಸಮಸ್ಯೆಗಳನ್ನು ಬಗೆಹರಿಸುತ್ತಾರೆ ಎಂಬ ಭರವಸೆ ಇದೆ’ ಎಂದು ಮ್ಯಾಸಕೇರಿಯ ಎಂ. ಮಂಜುನಾಥ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಗ, ಓಡಾಡಲು ಜಾಗವೇ ಇಲ್ಲ. ಮಳೆ ಬಂದರೆ ಚರಂಡಿ ನೀರು ಮನೆಯೊಳಗೆ ಹೊಕ್ಕುತ್ತದೆ. ಸೊಳ್ಳೆ ಕಾಟ ವಿಪರೀತ ಇದೆ. ವಾರಕ್ಕೊಮ್ಮೆ ಕಸ ತೆಗೆದುಕೊಂಡು ಹೋಗುತ್ತಾರೆ. ಹೆಚ್ಚಿನವರು ಶೌಚಾಲಯಕ್ಕೆ ಬಯಲಿಗೆ ಹೋಗುತ್ತಾರೆ’ ಎಂದು ಅಂಬೇಡ್ಕರ್‌ ನಗರದ ದುಃಸ್ಥಿತಿಯನ್ನು ಅಲ್ಲಿನ ನಿವಾಸಿ ಮರಿಯವ್ವ ಬಿಚ್ಚಿಟ್ಟರು.

ಇನ್ನೂ ಸಿರಾಜ್‌ ಶೇಖ್‌ ಶಾಸಕರಾಗಿದ್ದ ಅವಧಿಯಲ್ಲಿ ಮಾದರಿ ರೀತಿಯಲ್ಲಿ ನಿರ್ಮಿಸಲಾಗಿದ್ದ ರಾಜೀವ ಗಾಂಧಿ ನಗರದ ದುಃಸ್ಥಿತಿಯೂ ಹೇಳತೀರದಾಗಿದೆ. ಅಲ್ಲಿರುವ ರಂಗಮಂದಿರ, ವ್ಯಾಯಾಮ ಶಾಲೆ ನಿರ್ವಹಣೆ ಇಲ್ಲದೆ ಕಳೆಗುಂದಿವೆ. 2001ರಿಂದ ಇಲ್ಲಿಯವರೆಗೆ ರಸ್ತೆಗಳು ಡಾಂಬರ್‌ ಕಂಡಿಲ್ಲ.

ಇನ್ನೂ ಗುಡೇಕೋಟೆ ರಸ್ತೆ, ಕೊಟ್ಟೂರಿಗೆ ಹೋಗುವ ಮಾರ್ಗ ಚತುಷ್ಪಥವಾಗಿವೆ. ಆ ಮಾರ್ಗದಲ್ಲಿ ಹೋಗುತ್ತಿದ್ದರೆ ಮಹಾನಗರದಂತೆ ಭಾಸವಾಗುತ್ತದೆ. ಆದರೆ, ಅದಕ್ಕೆ ಹೊಂದಿಕೊಂಡಂತೆ ಇರುವ ಬಡಾವಣೆಗಳಲ್ಲಿ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಬೆಂಗಳೂರು ರಸ್ತೆಗೆ ಅಂಟಿಕೊಂಡಿರುವ ವಿದ್ಯಾನಗರದಲ್ಲಿ ಉತ್ತಮ ಸಿ.ಸಿ. ರಸ್ತೆ, ಚರಂಡಿಗಳ ನಿರ್ಮಾಣವಾಗಿದ್ದು, ಸ್ವಚ್ಛತೆಗೆ ಒತ್ತು ಕೊಡಲಾಗಿದೆ. ಇತರೆ ಬಡಾವಣೆಗಳೂ ಇದರಂತೆ ಆಗಬೇಕು ಎನ್ನುವುದು ಸ್ಥಳೀಯರ ಒತ್ತಾಯ.

ಹೊಸಪೇಟೆ ಹಾಗೂ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ಅಷ್ಟೇ ಅಲ್ಲ, ಅವುಗಳು ಬಹಳ ಕಿರಿದಾಗಿರುವುದರಿಂದ ನಿತ್ಯ ವಾಹನ ದಟ್ಟಣೆ ಸಾಮಾನ್ಯವಾಗಿದೆ. ‘ಈ ಎರಡೂ ರಸ್ತೆಗಳನ್ನು ಆದಷ್ಟು ಶೀಘ್ರ ವಿಸ್ತರಿಸಬೇಕು’ ಎನ್ನುತ್ತಾರೆ ಸ್ಥಳೀಯ ನಿವಾಸಿ ಸುರೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT