ಶುಕ್ರವಾರ, ಮೇ 20, 2022
23 °C

‘ಶಿಕ್ಷಕರ ಕೊರತೆ ಇರುವೆಡೆ ದೈಹಿಕ ಶಿಕ್ಷಕರು ಪಾಠ ಮಾಡಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ‘ಶಿಕ್ಷಕರ ಕೊರತೆ ಇರುವ ಸರ್ಕಾರಿ ಶಾಲೆಗಳಲ್ಲಿ ಆಸಕ್ತ ದೈಹಿಕ ಶಿಕ್ಷಣ ಶಿಕ್ಷಕರು ಕೆಲಸಮಯ ವಿದ್ಯಾರ್ಥಿಗಳಿಗೆ ಪಾಠ ಮಾಡಿ ಎಸ್ಸೆಸ್ಸೆಲ್ಸಿಯಲ್ಲಿ ಬಳ್ಳಾರಿ ಜಿಲ್ಲೆಗೆ ರಾಜ್ಯದಲ್ಲೇ ಉತ್ತಮ ಫಲಿತಾಂಶ ಬರಲು ಶ್ರಮಿಸಬೇಕು’ ಎಂದು ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಕೆ.ವಿ.ಎಂ. ನಾಗಭೂಷಣ ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಗ್ರೇಡ್-1, ಗ್ರೇಡ್-2 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಸಹಯೋಗದಲ್ಲಿ ಸೋಮವಾರ ನಗರದ ಪಿ.ಬಿ.ಎಸ್ ಅಂಡ್ ಸನ್ಸ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ದೈಹಿಕ ಶಿಕ್ಷಣ ಶಿಕ್ಷಕರ ಕಾರ್ಯಾಗಾರ ಹಾಗೂ 2020-21ನೇ ಸಾಲಿನ ಪ್ರೌಢ ಶಾಲಾ ಮಕ್ಕಳ ದೈಹಿಕ ಶಿಕ್ಷಣ ಸಾಧನೆಯ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

‘ದೈಹಿಕ ಶಿಕ್ಷಣಕ್ಕೆ ಇಲಾಖೆಯಿಂದ ಸಿಗುವ ಅನುದಾನ ಅಲ್ಪವಾಗಿದೆ. ದಾನಿಗಳ ನೆರವು ಸಹ ದೈಹಿಕ ಶಿಕ್ಷಣಕ್ಕೆ ಸಿಕ್ಕರೆ ಹೆಚ್ಚಿನ ಉಪಯೋಗವಾಗುತ್ತದೆ. ದೈಹಿಕ ಶಿಕ್ಷಕರು ಇಲಾಖೆ ಕೊಟ್ಟ ಪಠ್ಯಕ್ರಮದ ಕ್ರಿಯಾಯೋಜನೆಯನ್ನು ಲಿಖಿತ ರೂಪದಲ್ಲಿ ಮಾಡಬೇಕು. ಬಳ್ಳಾರಿ ಜಿಲ್ಲೆಯಲ್ಲಿ ಅತಿಹೆಚ್ಚು ದೈಹಿಕ ಶಿಕ್ಷಕರಿರುವ ‌ತಾಲ್ಲೂಕು ಹೊಸಪೇಟೆ ಆಗಿದೆ. ಎಲ್ಲರೂ ಪುಸ್ತಕದ ಮೂಲಕ ದಾಖಲೆಗಳನ್ನು ತಯಾರಿಸಿದರೆ ಅನುಕೂಲವಾಗುತ್ತದೆ’ ಎಂದು ಹೇಳಿದರು.

‘ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳನ್ನು ರೂಪಿಸುವ ದೊಡ್ಡ ಹೊಣೆಗಾರಿಕೆ ನಮ್ಮ ಮೇಲಿದೆ. ನಮ್ಮ ಕೆಲಸಗಳಲ್ಲಿ ಹೆಚ್ಚಿನ ಶ್ರದ್ಧೆಯಿಂದ ತೊಡಗಿಸಿಕೊಳ್ಳಬೇಕು. ಇಲಾಖೆಯೊಂದಿಗೆ ದಾನಿಗಳು ಸಹ ಪುಸ್ತಕ ಮುದ್ರಣಕ್ಕೆ ಸಹಕಾರ ನೀಡಿರುವುದು ಶಿಕ್ಷಣ ಪ್ರೇಮವನ್ನು ತೋರಿಸಿಕೊಡುತ್ತದೆ. ಆದರೆ, ಇಷ್ಟಕ್ಕೆ ಇದು ಸೀಮಿತವಾಗಬಾರದು’ ಎಂದರು.

ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ದೈಹಿಕ ಶಿಕ್ಷಕ ಪರಿವೀಕ್ಷಕ ಬಸವರಾಜ ಜತ್ತಿ ಮಾತನಾಡಿ, ‘ಕೋವಿಡ್–19 ಲಾಕ್‌ಡೌನ್‌ ಸಮಯದಲ್ಲಿ ದೈಹಿಕ ಶಿಕ್ಷಕರು ಮನೆ ಮನೆಗೆ ಹಾಲು ಹಾಗೂ ತರಕಾರಿ ಹಂಚಿದ್ದಾರೆ. ಆ ಸಮಯದಲ್ಲಿ ಕಷ್ಟದಲ್ಲಿದ್ದ ಅನೇಕ ದೈಹಿಕ ಶಿಕ್ಷಕರಿಗೆ ದಾನಿಗಳು, ತಾಲ್ಲೂಕು ಆಡಳಿತ ನೆರವು ನೀಡಿದೆ. ದೈಹಿಕ ಶಿಕ್ಷಕರಿಗೆ ಪ್ರೌಢ ಶಾಲಾ ವಿದ್ಯಾರ್ಥಿಗಳ ದೈಹಿಕ ಸಾಮರ್ಥ್ಯ ನಮೂನೆ ಕುರಿತಂತೆ ಪುಸ್ತಕ ಮುದ್ರಿಸಿ ನೀಡಿರುವುದು ಶ್ಲಾಘನೀಯ’ ಎಂದರು.

ಕಾರ್ಯಕ್ರಮದಲ್ಲಿ ಸಮಾಜ ಸೇವಕ ಬೆಳಗೋಡು ಮಂಜುನಾಥ್, ಗ್ರೇಡ್–1 ದೈಹಿಕ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಪಾಂಡುರಂಗ, ಗ್ರೇಡ್–2 ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಗಣೇಶ್, ಪ್ರಧಾನ ಕಾರ್ಯದರ್ಶಿ ಝಾಕೀರ್, ಸಂಘಟನಾ ಕಾರ್ಯದರ್ಶಿ ಎಲ್‌. ವಿಜಯ ಕುಮಾರಿ, ಅನುದಾನ ರಹಿತ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಲಿಂಗಪ್ಪ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ದೈಹಿಕ ಶಿಕ್ಷಕರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು