ಹಗರಿಬೊಮ್ಮನಹಳ್ಳಿ: ಸರ್ಕಾರ ಜಾರಿಗೆ ತಂದಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿರೋಧಿಸಿ ಸಿಪಿಎಂ ಪಕ್ಷದ ತಾಲ್ಲೂಕು ಘಟಕದ ಪದಾಧಿಕಾರಿಗಳು ತಹಶೀಲ್ದಾರ್ ಕಚೇರಿ ಎದುರು ಧರಣಿ ನಡೆಸಿದರು.
ಪಕ್ಷದ ತಾಲ್ಲೂಕು ಘಟಕದ ಕಾರ್ಯದರ್ಶಿ ಎಸ್.ಜಗನ್ನಾಥ್ ಮಾತನಾಡಿ, ನೂತನ ಶಿಕ್ಷಣ ನೀತಿಯು ಕನ್ನಡ ಭಾಷೆ ಹಾಗೂ ಕನ್ನಡಿಗರ ಅಭಿವೃದ್ಧಿಗೆ ಮಾರಕವಾಗಿದೆ. ರಾಜ್ಯದ ಶೇ 95ರಷ್ಟು ಜನರನ್ನು ಶಿಕ್ಷಣದಿಂದ ವಂಚಿಸುವ ಅತ್ಯಂತ ಅಪಾಯಕಾರಿ ಹಂತಕ್ಕೆ ತಲುಪಿಸುವ ಉದ್ದೇಶವನ್ನು ಇದು ಹೊಂದಿದೆ ಎಂದರು.
ಕನ್ನಡ ಹಾಗೂ ಕನ್ನಡೇತರ ಮಾತೃಭಾಷೆಗಳಾದ ತುಳು, ಕೊಡವ, ತೆಲುಗು, ಉರ್ದು, ಕೊಂಕಣಿ, ಲಂಬಾಣಿ, ಮರಾಠಿ ಮುಂತಾದ ಭಾಷೆಗಳ ಮೇಲೆ ಇಂಗ್ಲಿಷ್, ಹಿಂದಿ, ಸಂಸ್ಕೃತ ಭಾಷೆಗಳನ್ನು ಒತ್ತಾಯವಾಗಿ ಹೇರುವ ಹುನ್ನಾರವಾಗಿದೆ. ಇದರಿಂದ ಲಕ್ಷಾಂತರ ಅಂಗನವಾಡಿ ಕೇಂದ್ರಗಳು, ಏಕೋಪಾಧ್ಯಾಯ ಹಾಗೂ ವಿದ್ಯಾರ್ಥಿಗಳ ಕೊರತೆ ಎದುರಿಸುವ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳು ಶಾಶ್ವತವಾಗಿ ಮುಚ್ಚಲಿವೆ ಎಂದು ಆತಂಕ ವ್ಯಕ್ತಪಡಿಸಿದರು. ಆದ್ದರಿಂದ ನೂತನ ಶಿಕ್ಷಣ ನೀತಿಯನ್ನು ಜಾರಿಗೆ ತರಬಾರದು ಎಂದು ಆಗ್ರಹಿಸಿದರು.
ಪಕ್ಷದ ರಾಜ್ಯ ಸಮಿತಿ ಸದಸ್ಯೆ ಬಿ.ಮಾಳಮ್ಮ, ಕೊಟಗಿ ಮಲ್ಲಿಕಾರ್ಜುನ, ಕೆ.ಗಾಳೆಪ್ಪ, ಜಿ.ಸರೋಜಾ, ಕೆ.ಬಸವರಾಜ್, ಹುಲುಗಪ್ಪ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.