ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಹೋರಾಟ ಬೆಂಬಲಿಸಿ ಪ್ರತಿಭಟನೆ

Last Updated 3 ಡಿಸೆಂಬರ್ 2020, 9:33 IST
ಅಕ್ಷರ ಗಾತ್ರ

ಹೊಸಪೇಟೆ: ಕೃಷಿಗೆ ಸಂಬಂಧಿಸಿದ ಮೂರು ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ನವದೆಹಲಿಯ ಹೊರವಲಯದಲ್ಲಿ ರೈತರು ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಿ ವಿವಿಧ ಸಂಘಟನೆಗಳವರು ಗುರುವಾರ ನಗರದ ರೋಟರಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ರೈತರ ಹೋರಾಟವನ್ನು ಚಾರಿತ್ರಿಕ ಹೋರಾಟವೆಂದು ಬಣ್ಣಿಸಿದ ಮುಖಂಡರು, ಅಖಿಲ ಭಾರತ ರೈತರ ಐಕ್ಯತಾ ದಿನವಾಗಿ ಆಚರಿಸಿದರು. ಆಲ್‌ ಇಂಡಿಯಾ ಡೆಮೊಕ್ರಟಿಕ್‌ ಯುತ್‌ ಆರ್ಗನೈಜೇಶನ್‌, ರೈತ ಕೃಷಿಕ ಕಾರ್ಮಿಕ ಸಂಘಟನೆಯ ಕಾರ್ಯಕರ್ತರು ಪಾಲ್ಗೊಂಡಿದ್ದರು.

‘ಲಾಕ್‌ಡೌನ್‌ ನಡುವೆ ಕೇಂದ್ರ ಸರ್ಕಾರವು ಕೃಷಿ, ಭೂಸುಧಾರಣೆ ಮತ್ತು ಎಪಿಎಂಸಿ ಕಾಯ್ದೆಗಳಿಗೆ ತರಾತುರಿಯಲ್ಲಿ ತಿದ್ದುಪಡಿ ತಂದು ರೈತರಿಗೆ ಮರಣ ಶಾಸನ ಬರೆದಿದೆ. ಅನೇಕ ತಿಂಗಳಿಂದ ರೈತರು ದೇಶದ ವಿವಿಧ ಭಾಗಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಅದಕ್ಕೆ ಕೇಂದ್ರ ಕಿವಿಗೊಟ್ಟಿಲ್ಲ. ಇದರಿಂದ ಬೇಸತ್ತ ರೈತರು ನವದೆಹಲಿಗೆ ಮುತ್ತಿಗೆ ಹಾಕಲು ಹೊರಟಿದ್ದಾರೆ. ಪೊಲೀಸರು, ಸೈನಿಕರ ಮೂಲಕ ಅವರನ್ನು ತಡೆದು ನವದೆಹಲಿಯ ಹೊರವಲಯದಲ್ಲಿ ನಿಲ್ಲಿಸಿದ್ದಾರೆ. ವಿಪರೀತ ಚಳಿ ಲೆಕ್ಕಿಸದೆ ರೈತರು ಅಹೋರಾತ್ರಿ ಧರಣಿ ಮುಂದುವರೆಸಿದ್ದಾರೆ. ಅವರಿಗೆ ನೈತಿಕ ಬೆಂಬಲ ನೀಡುವುದಕ್ಕಾಗಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲಾಗಿದೆ’ ಎಂದು ಜಿಲ್ಲಾ ಅಧ್ಯಕ್ಷ ವಸಂತ ಬಡಿಗೇರ್‌ ತಿಳಿಸಿದರು.

‘ರೈತರ ಮೇಲೆ ಲಾಠಿ ಪ್ರಹಾರ ನಡೆಸಿ, ಅಶ್ರುವಾಯು ಪ್ರಯೋಗಿಸಿ ದೌರ್ಜನ್ಯ ಎಸಗಿದ ಕೇಂದ್ರ ಸರ್ಕಾರದ ಕ್ರಮ ಖಂಡನೀಯ. ಕಾರ್ಪೊರೇಟ್‌ ಪರವಾದ ನೀತಿಗಳನ್ನು ಜಾರಿಗೆ ತಂದು ರೈತರನ್ನು ಕೃಷಿಯಿಂದ ವಿಮುಖಗೊಳಿಸುತ್ತಿರುವ ನಡೆ ಖಂಡನಾರ್ಹ’ ಎಂದು ಟೀಕಿಸಿದರು.

ಮುಖಂಡರಾದ ಹುಲುಗೆಪ್ಪ, ರವಿ, ಅಹಮ್ಮದ್‌, ಗೌಸ್‌, ಮೆಹಬೂಬ್‌, ಉಮಾಪತಿ, ಉಮೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT