ಪಿಯು ಫಲಿತಾಂಶ: 19ನೇ ಸ್ಥಾನಕ್ಕೆ ಇಳಿದ ಬಳ್ಳಾರಿ ಜಿಲ್ಲೆ

ಶನಿವಾರ, ಏಪ್ರಿಲ್ 20, 2019
26 °C
ಫಲಿತಾಂಶ ಹೆಚ್ಚಾದರೂ ಜಿಲ್ಲಾವಾರು ಪಟ್ಟಿಯಲ್ಲಿ ಕೆಳಕ್ಕೆ

ಪಿಯು ಫಲಿತಾಂಶ: 19ನೇ ಸ್ಥಾನಕ್ಕೆ ಇಳಿದ ಬಳ್ಳಾರಿ ಜಿಲ್ಲೆ

Published:
Updated:
Prajavani

ಬಳ್ಳಾರಿ: ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ ಜಿಲ್ಲೆಯ ಶೇಕಡಾವಾರು ಪ್ರಮಾಣ ಹೆಚ್ಚಾಗಿದ್ದರೂ ಸಮಾಧಾನ ಪಟ್ಟುಕೊಳ್ಳುವ ಪರಿಸ್ಥಿತಿ ಇಲ್ಲ. ಏಕೆಂದರೆ ಜಿಲ್ಲಾವಾರು ಸಾಧನೆಯ ಪಟ್ಟಿಯಲ್ಲಿ ಹಿಂದಿನ ವರ್ಷ 10ನೇ ಸ್ಥಾನದಲ್ಲಿದ್ದ ಜಿಲ್ಲೆಯು ಈ ಬಾರಿ 19ನೇ ಸ್ಥಾನಕ್ಕೆ ಕುಸಿದಿದೆ.

ಹಿಂದಿನ ವರ್ಷ ಈ ವರ್ಷಕ್ಕಿಂತಲೂ ಜಿಲ್ಲೆಯಲ್ಲಿ ಶೇಕಡಾವಾರು ಫಲಿತಾಂಶ ಕಡಿಮೆ ಇದ್ದು, 20ನೇ ಸ್ಥಾನದಿಂದ ಏಕಾಏಕಿ 10ನೇ ಸ್ಥಾನಕ್ಕೆ ತಲುಪಿತ್ತು. ಅದೊಂದು ಸಾಧನೆ ಎಂಬ ಹೆಮ್ಮೆಯೂ ಮೂಡಿತ್ತು. ಈ ಬಾರಿ ಜಿಲ್ಲೆಗೆ ವ್ಯತಿರಿಕ್ತ ಫಲಿತಾಂಶ ದೊರಕಿದೆ. ಸತತ ಮೂರು ವರ್ಷ 20ನೇ ಸ್ಥಾನದಲ್ಲಿದ್ದ ಜಿಲ್ಲೆಯು 10ನೇ ಸ್ಥಾನಕ್ಕೇರಿದ ಮರು ವರ್ಷವೇ ಮತ್ತೆ 20ರ ಸಮೀಪ,19ಕ್ಕೆ ಬಂದು ನಿಂತಿದೆ.

ಈ ವರ್ಷ ಕಲಾ ವಿಭಾಗದಲ್ಲಿ ಮೊದಲ ಐದು ರ‍್ಯಾಂಕ್‌ಗಳನ್ನು ಜಿಲ್ಲೆಯ ಒಂಭತ್ತು ವಿದ್ಯಾರ್ಥಿಗಳು ಹಂಚಿಕೊಂಡರೂ, ಈ ವಿಭಾಗದಲ್ಲಿ ಉತ್ತೀರ್ಣರಾದವರ ಪ್ರಮಾಣ ಇನ್ನೆರಡು ವಿಭಾಗಗಳಿಗೆ ಹೋಲಿಸಿದರೆ ಅತಿ ಕಡಿಮೆ ಇದೆ. ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗವು ಎರಡನೇ ಸ್ಥಾನದಲ್ಲಿದೆ.

ಅತಿಥಿ ಶಿಕ್ಷಕರು: ‘ಜಿಲ್ಲೆಯ ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿ ಖಾಲಿ ಇರುವ ಬೋಧಕರ ಹುದ್ದೆಗಳಿಗೆ ತಾತ್ಕಾಲಿಕವಾಗಿ 71 ಅತಿಥಿ ಶಿಕ್ಷಕರನ್ನು ನೇಮಿಸಿದ್ದರಿಂದ ಬೋಧನೆ ತೊಡಕಿಲ್ಲದೆ ನಡೆಯಿತು’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಪ್ರಭಾರಿ ಉಪ ನಿರ್ದೇಶಕ ತಿಮ್ಮಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮನೆಯಲ್ಲಿ ಶೈಕ್ಷಣಿಕ ವಾತಾವರಣ ಇಲ್ಲದ ಹಳ್ಳಿಗಳ ವಿದ್ಯಾರ್ಥಿಗಳಿಗೆ ರಾತ್ರಿ ವೇಳೆಯಲ್ಲಿ ಓದಿಕೊಳ್ಳಲು ಗ್ರಾಮ ಪಂಚಾಯ್ತಿ ನೇತೃತ್ವದಲ್ಲಿ ಸ್ಥಳೀಯ ಶಾಲೆ, ಕಾಲೇಜಿನಲ್ಲಿ ವಿದ್ಯುತ್‌ ದೀಪ ಮತ್ತು ನೀರಿನ ಸೌಕರ್ಯವನ್ನು ಕಲ್ಪಿಸಲಾಗಿತ್ತು. ಬಹಳ ವಿದ್ಯಾರ್ಥಿಗಳು ಅದರ ಪ್ರಯೋಜನ ಪಡೆದರು. ಜಿಲ್ಲಾಧಿಕಾರಿ ಡಾ.ವಿ.ರಾಮಪ್ರಸಾದ್‌ ಮನೋಹ್‌ ಅವರು ಕೈಗೊಂಡ ಇಂಥ ವಿದ್ಯಾರ್ಥಿಪರ ಕಾರ್ಯಗಳಿಂದ ಫಲಿತಾಂಶ ಹೆಚ್ಚಿದೆ’ ಎಂದು ಹೇಳಿದರು.

ವಿಶ್ವಾಸ ಕಿರಣ: ‘ಇಲಾಖೆಯು ಆಗಸ್ಟ್‌ನಿಂದ ಜನವರಿವರೆಗೆ ಪ್ರತಿ ಭಾನುವಾರ ಇಂಗ್ಲಿಷ್‌ ವಿಶೇಷ ತರಗತಿಗಳನ್ನು ನಡೆಸಿತ್ತು. ಇಂಗ್ಲಿಷ್‌ನಲ್ಲಿ ಅನುತ್ತೀರ್ಣಗೊಳ್ಳುವ ಸಾಧ್ಯತೆ ಇದ್ದ, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಈ ತರಗತಿಗಳಿಂದ ಹೆಚ್ಚಿನ ಪ್ರಯೋಜನವಾಯಿತು’ ಎಂದು ತಿಳಿಸಿದರು.

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !