ಬುಧವಾರ, ಸೆಪ್ಟೆಂಬರ್ 29, 2021
19 °C
ಎಸ್ಸೆಸ್ಸೆಲ್ಸಿಯಲ್ಲಿ ಎಲ್ಲ ವಿದ್ಯಾರ್ಥಿಗಳು ಪಾಸಾಗಿರುವುದರಿಂದ ಪಿಯು ಕಾಲೇಜುಗಳಿಗೆ ಬೇಡಿಕೆ

Pv Web Exclusive; ಪಿಯು ಕಾಲೇಜಿಗೆ ಬೇಡಿಕೆ, ಸವಾಲಿನ ವರ್ಷ

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ (ವಿಜಯನಗರ): ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಬಳ್ಳಾರಿ–ವಿಜಯನಗರ ಜಿಲ್ಲೆಯ ಎಲ್ಲ ವಿದ್ಯಾರ್ಥಿಗಳು ಈ ಸಲ ಪಾಸಾಗಿರುವುದರಿಂದ ಪಿಯುಸಿ ಕಾಲೇಜುಗಳಿಗೆ ಬೇಡಿಕೆ ಹೆಚ್ಚಾಗಿದೆ. ವಿದ್ಯಾರ್ಥಿಗಳನ್ನು ಸರಿದೂಗಿಸಿ ಅಗತ್ಯ ಸೌಲಭ್ಯ ಕಲ್ಪಿಸುವ ಸವಾಲಿನ ವರ್ಷ ಕೂಡ ಆಗಿರಲಿದೆ.

ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಶೇ 30ರಿಂದ 35ರಷ್ಟು ಹೆಚ್ಚು ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿಯಲ್ಲಿ ತೇರ್ಗಡೆ ಹೊಂದಿದ್ದಾರೆ. 

ವಿಜ್ಞಾನ, ವಾಣಿಜ್ಯ ವಿಭಾಗಕ್ಕೆ ಹೆಚ್ಚಿನ ಒತ್ತು ಕೊಟ್ಟು ಬೋಧನೆ ಮಾಡುತ್ತಿದ್ದ ಕಾಲೇಜುಗಳಿಗೆ ಈ ಹಿಂದಿನಿಂದಲೂ ಜಿಲ್ಲೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. ಈ ಸಲ ಅವುಗಳಿಗೆ ಮತ್ತಷ್ಟು ಬೇಡಿಕೆ ಸೃಷ್ಟಿಯಾಗಿದೆ. ಕೋವಿಡ್‌ ಸಂದರ್ಭದಲ್ಲಿ ಕಾಲೇಜುಗಳು ಶುಲ್ಕ ಹೆಚ್ಚಿಸದಂತೆ ಸರ್ಕಾರದ ನಿರ್ದೇಶನವಿದ್ದರೂ ಸದ್ದಿಲ್ಲದೆ ಶುಲ್ಕ ಹೆಚ್ಚಿಸಿವೆ. ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಭರದಲ್ಲಿ ಹೆಚ್ಚುವರಿ ಶುಲ್ಕದ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಪ್ರವೇಶ ಸಿಕ್ಕಿದರಾಯಿತು ಎಂಬ ನಿಲುವು ತಾಳಿದ್ದಾರೆ.

ಗುಣಮಟ್ಟದ ಬೋಧನೆಗೆ ಹೆಸರಾಗಿರುವ ಜಿಲ್ಲೆಯ ಕೆಲವು ಸರ್ಕಾರಿ ಕಾಲೇಜುಗಳಿಗೂ ಈ ವರ್ಷ ಹೆಚ್ಚಿನ ಬೇಡಿಕೆ ಬಂದಿದೆ. ಈಗಾಗಲೇ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿರುವುದರಿಂದ ನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಳ್ಳುತ್ತಿದ್ದಾರೆ.

‘ಎಷ್ಟೇ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಪ್ರವೇಶ ಕೇಳಿ ಬಂದರೆ ಅವರಿಗೆ ಕಡ್ಡಾಯವಾಗಿ ಕೊಡಲೇಬೇಕು. ಯಾವುದೇ ಕಾರಣಕ್ಕೂ ಪ್ರವೇಶ ನಿರಾಕರಿಸುವಂತಿಲ್ಲ ಎಂದು ಇಲಾಖೆಯಿಂದ ಸೂಚನೆ ಬಂದಿದೆ. ಹೀಗಾಗಿ ಎಲ್ಲರಿಗೂ ಪ್ರವೇಶ ನೀಡಲಾಗುತ್ತಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ವ್ಯವಸ್ಥೆ ಇದೆಯೇ?:

ಈ ಹಿಂದಿನ ವರ್ಷಗಳಿಗಿಂತ ಶೇ 30ರಿಂದ 35ರಷ್ಟು ಹೆಚ್ಚುವರಿ ವಿದ್ಯಾರ್ಥಿಗಳಿಗೆ ಪಿಯು ಕಾಲೇಜುಗಳು ಪ್ರವೇಶ ಕೊಡುವ ಅನಿವಾರ್ಯತೆಯಲ್ಲಿವೆ. ಬಹುತೇಕ ಖಾಸಗಿ ಕಾಲೇಜುಗಳಲ್ಲಿ ಎಷ್ಟೇ ವಿದ್ಯಾರ್ಥಿಗಳು ಬಂದರೂ ಅದಕ್ಕೆ ಅಗತ್ಯ ಸಂಪನ್ಮೂಲ ಲಭ್ಯವಿದೆ. ಆದರೆ, ಹೆಚ್ಚಿನ ಸರ್ಕಾರಿ ಕಾಲೇಜುಗಳಲ್ಲಿ ಈ ವ್ಯವಸ್ಥೆ ಇಲ್ಲ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗುವುದರ ಬಗ್ಗೆ ಅನುಮಾನ ಕಾಡುತ್ತಿದೆ.

‘ಈ ಹಿಂದಿಗಿಂತ ಶೇ 1ರಿಂದ 2ರಷ್ಟು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದರೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಆದರೆ, ಶೇ 5ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆದರೆ ಬೋಧನೆ ಮೇಲೆ ಪರಿಣಾಮ ಬೀರಲಿದೆ. ಸೀಮಿತ ಕೊಠಡಿಗಳು, ಉಪನ್ಯಾಸಕರಿರುವುದೇ ಅದಕ್ಕೆ ಮುಖ್ಯ ಕಾರಣ’ ಎಂದು ಸರ್ಕಾರಿ ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.

ಪಿಯು ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್‌. ರಾಜು ಅವರು ಹೇಳುವುದೇ ಬೇರೆ. ‘ಗ್ರಾಮೀಣ ಪ್ರದೇಶಗಳಿಗಿಂತ ನಗರ ಪ್ರದೇಶದ ಕಾಲೇಜುಗಳಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದು. ಕಾಲೇಜು ಅಭಿವೃದ್ಧಿ ಸಮಿತಿ ಹಾಗೂ ಇಲಾಖೆಯ ಒಪ್ಪಿಗೆ ಪಡೆದು ಅತಿಥಿ ಉಪನ್ಯಾಸಕರನ್ನು ತೆಗೆದುಕೊಳ್ಳಲಾಗುತ್ತದೆ. ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಯಾವುದೇ ತೊಡಕಾಗದಂತೆ ಕ್ರಮ ಜರುಗಿಸಲಾಗುವುದು. ಹೊಸ ಕಾಲೇಜು ಆರಂಭಕ್ಕೆ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿದೆ. ಅದಕ್ಕೆ ಒಪ್ಪಿಗೆ ಸಿಕ್ಕರಂತೂ ಸಮಸ್ಯೆಯೇ ಉದ್ಭವಿಸುವುದಿಲ್ಲ’ ಎಂದರು.

‘ಈಗಷ್ಟೇ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ. ಯಾವುದೆ ಕಾಲೇಜಿನಲ್ಲಿ ಸೀಟು ಸಿಕ್ಕಿಲ್ಲ ಎಂದು ವಿದ್ಯಾರ್ಥಿಗಳು, ಪೋಷಕರಿಂದ ದೂರುಗಳು ಬಂದಿಲ್ಲ. ಸರ್ಕಾರಿ, ಅನುದಾನಿತ ಕಾಲೇಜುಗಳಲ್ಲಿ ಬಹಳಷ್ಟು ವಿದ್ಯಾರ್ಥಿಗಳು ಬರುತ್ತಿದ್ದಾರೆ. ಕೆಲವು ಕಾಲೇಜಿನವರು ಹೆಚ್ಚುವರಿ ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶ ಕೊಡಬೇಕೆಂದು ಕೇಳಿದ್ದಾರೆ. ಅದನ್ನು ಇಲಾಖೆಗೆ ಪ್ರಸ್ತಾವ ಕಳುಹಿಸಲಾಗಿದೆ. ಈ ಹಿಂದಿನ ವರ್ಷಗಳಲ್ಲಿ ಖಾಲಿ ಉಳಿಯುತ್ತಿದ್ದ ಸೀಟುಗಳು ಈ ವರ್ಷ ಸಂಪೂರ್ಣ ಭರ್ತಿಯಾಗಲಿವೆ’ ಎಂದು ಹೇಳಿದರು.

......

ಅಂಕಿ ಅಂಶ

ಬಳ್ಳಾರಿ–ವಿಜಯನಗರ ಜಿಲ್ಲೆಯಲ್ಲಿ ಪಿಯು ಕಾಲೇಜು ವಿವರ
47 ಸರ್ಕಾರಿ ಕಾಲೇಜು
23 ಅನುದಾನಿತ ಕಾಲೇಜು
96 ಅನುದಾನ ರಹಿತ ಕಾಲೇಜು
04 ಮೊರಾರ್ಜಿ ದೇಸಾಯಿ ವಸತಿ ಶಾಲೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು