ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive| ಓದಿದ್ದು 2ನೇ ತರಗತಿಯಾದರೂ ಎಲ್ಲ ಸಾಹಿತಿಗಳ ಇವರು ಬಲ್ಲರು!

Last Updated 17 ನವೆಂಬರ್ 2020, 8:27 IST
ಅಕ್ಷರ ಗಾತ್ರ

ಹೊಸಪೇಟೆ: ಇವರು ಓದಿದ್ದು ಎರಡನೇ ತರಗತಿ ವರೆಗೆ. ಆದರೆ, ನಾಡಿನ ಎಲ್ಲ ಸಾಹಿತಿಗಳ ಹೆಸರು ಇವರಿಗೆ ಗೊತ್ತು. ಅಷ್ಟೇ ಅಲ್ಲ, ಯಾವ ಸಾಹಿತಿ, ಯಾವ ಪುಸ್ತಕ ಬರೆದಿದ್ದಾರೆ ಎಂದು ಕೇಳಿದರೆ ತಕ್ಷಣವೇ ಹೇಳುತ್ತಾರೆ!

ಅಂದಹಾಗೆ, ಇವರು ಯಾರಿಂದಲೊ ಕೇಳಿಸಿಕೊಂಡೋ ಅಥವಾ ಓದಿನಿಂದ ಇಷ್ಟೆಲ್ಲ ತಿಳಿದುಕೊಂಡಿದ್ದಾರೆ ಎಂದು ಯಾರಾದರೂ ಭಾವಿಸಿದ್ದರೆ ಖಂಡಿತ ತಪ್ಪು. ಹದಿನೈದು ವರ್ಷಗಳಿಂದ ಪುಸ್ತಕಗಳ ನಡುವೆ ಕೆಲಸ ನಿರ್ವಹಿಸುತ್ತಲೇ ಇಷ್ಟೆಲ್ಲ ವಿಷಯ ತಿಳಿದುಕೊಂಡಿದ್ದಾರೆ. ಒಂದು ಕ್ಷಣ ಯಾರಿಗಾದರೂ ಇದು ಅಚ್ಚರಿ ಅನಿಸಬಹುದು ಆದರೆ, ಇದು ನಿಜ.

ಆ ವ್ಯಕ್ತಿಯ ಹೆಸರು ರಾಮಸ್ವಾಮಿ. ಮೂಲತಃ ತಾಲ್ಲೂಕಿನ ಕಮಲಾಪುರದವರು. ಊರಿಗೆ ಹೊಂದಿಕೊಂಡಂತೆ ಇರುವ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ತೋಟದ ಮಾಲಿಯಾಗಿ ಕೆಲಸಕ್ಕೆ ಸೇರಿದವರು. ಒಂದು ರೀತಿಯಲ್ಲಿ ವಿಶ್ವವಿದ್ಯಾಲಯದ ಬೆಳೆದು ಬಂದುದ್ದನ್ನು ಕಣ್ಣಾರೆ ನೋಡುತ್ತ ಬಂದವರು.

ಸದ್ಯ ಇದೇ ವಿಶ್ವವಿದ್ಯಾಲಯದ ಪ್ರಸಾರಾಂಗದ ಪುಸ್ತಕ ದಾಸ್ತಾನು ವಿಭಾಗದಲ್ಲಿ 15 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರಸಾರಾಂಗದ ಏಳಿಗೆಯಲ್ಲಿ ಇವರ ಶ್ರಮದ ಪಾಲು ಕೂಡ ಇದೆ ಎಂದು ಅಲ್ಲಿನ ಸಿಬ್ಬಂದಿಯೂ ಒಪ್ಪಿಕೊಳ್ಳುತ್ತಾರೆ. ರಾಮಸ್ವಾಮಿ ಅವರ ಕೆಲಸದ ಬಗೆಗಿನ ಅದಮ್ಯ ಪ್ರೀತಿ, ಬದ್ಧತೆಯೇ ಅಂತಹದ್ದು. ಸರಿಯಾದ ಸಮಯಕ್ಕೆ ಕೆಲಸಕ್ಕೆ ಹಾಜರಾಗುವ ಅವರು ಸಮಯದ ಪರಿವೆಯೇ ಇಲ್ಲದ ತಡಹೊತ್ತಿನ ವರೆಗೆ ಕೆಲಸ ಮಾಡುತ್ತಿರುತ್ತಾರೆ.

ಸದ್ಯ ಪ್ರಸಾರಾಂಗದ ದಾಸ್ತಾನು ಗೋದಾಮಿನಲ್ಲಿ 1,800ಕ್ಕೂ ಅಧಿಕ ಪುಸ್ತಕಗಳ ಸಂಗ್ರಹವಿದೆ. ಕಲೆ, ಸಾಹಿತ್ಯ, ಸಂಸ್ಕೃತಿ, ಭಾಷೆ, ಪರಂಪರೆ, ಬುಡಕಟ್ಟು, ಹಸ್ತಪ್ರತಿ, ವಿವಿಧ ಸಂಪುಟಗಳು, ಕಾವ್ಯ, ಮಹಾಕಾವ್ಯ, ಕಾದಂಬರಿಗಳ ಸಂಗ್ರಹ ಅವುಗಳಲ್ಲಿ ಪ್ರಮುಖವಾದವುಗಳು.

ರಾಮಸ್ವಾಮಿ ಅವರಿಗೆ ಯಾವುದಾದರೂ ಪುಸ್ತಕದ ಹೆಸರು ಅಥವಾ ಆ ಲೇಖಕರ ಹೆಸರು ಹೇಳಿದರೆ ಅಷ್ಟೊಂದು ಸಂಗ್ರಹವಿರುವ ಪುಸ್ತಕಗಳ ಮಧ್ಯದಿಂದ ಕ್ಷಣ ಮಾತ್ರದಲ್ಲಿ ತಂದು ಕೊಡುತ್ತಾರೆ. ಇಷ್ಟೆ ಅಲ್ಲ, ನಿರ್ದಿಷ್ಟ ಲೇಖಕರು ಬರೆದ ಪುಸ್ತಕಗಳ ಬಗ್ಗೆ ಕೇಳಿದರೆ ಒಂದು ಕ್ಷಣವೂ ಯೋಚಿಸದೆ ಆ ಪುಸ್ತಕಗಳು ಖಾಲಿಯಾಗಿವೆಯೋ ಅಥವಾ ಲಭ್ಯ ಇವೆಯೋ ಎನ್ನುವುದನ್ನು ನಿಂತ ಜಾಗದಲ್ಲಿಯೇ ಹೇಳಿ ಬಿಡುತ್ತಾರೆ.

ಹೊಸದಾಗಿ ಪ್ರಕಟಣೆಗೆ ಬರುವ ಪುಸ್ತಕಗಳ ಮೂಲಪ್ರತಿ, ಈಗಾಗಲೇ ಅಚ್ಚಾದ ಪುಸ್ತಕಗಳ ಮೂಲಪ್ರತಿ, ಹಸ್ತಪ್ರತಿಗಳು, ಯಾವ ಪುಸ್ತಕಕ್ಕೆ ಹೆಚ್ಚಿನ ಬೇಡಿಕೆ ಇದೆ. ಹೀಗೆ ಹತ್ತು ಹಲವು ವಿಷಯಗಳನ್ನು ತಿಳಿದುಕೊಂಡಿದ್ದಾರೆ. ಯಾವುದೇ ಪುಸ್ತಕದ ಕುರಿತು ಮಾಹಿತಿ ತಿಳಿದುಕೊಳ್ಳಬೇಕಾದರೆ ಪ್ರಸಾರಾಂಗದ ಸಿಬ್ಬಂದಿ ಇವರನ್ನೇ ನೆಚ್ಚಿಕೊಂಡಿದ್ದಾರೆ.

ಸಾಹಿತಿಗಳು, ಅವರು ಬರೆದ ಪುಸ್ತಕಗಳ ಬಗ್ಗೆ ಇಷ್ಟೊಂದು ಹೇಗೆ ತಿಳಿದುಕೊಂಡಿದ್ದೀರಿ ಎಂದು ರಾಮಸ್ವಾಮಿ ಅವರನ್ನು ಪ್ರಶ್ನಿಸಿದರೆ, ‘ನನಗೇನೂ ಗೊತ್ತಿಲ್ಲ. ಪ್ರಸಾರಾಂಗದವರು ಏನು ಹೇಳುತ್ತಾರೆ ಅಷ್ಟನ್ನೇ ಮಾಡುವೆ. ಆದರೆ, ಈ ಕೆಲಸ ಮಾಡುವುದರಲ್ಲಿ ಬಹಳ ಖುಷಿ ಸಿಗುತ್ತದೆ’ ಎಂದಷ್ಟೇ ಹೇಳಿದರು.

‘ವಿಶ್ವವಿದ್ಯಾಲಯದ ಆರಂಭದ ದಿನಗಳಲ್ಲೇ ಕೆಲಸಕ್ಕೆ ಸೇರಿದವರ ಪೈಕಿ ರಾಮಸ್ವಾಮಿ ಕೂಡ ಒಬ್ಬರು. 15 ವರ್ಷಗಳಿಂದ ಪ್ರಸಾರಾಂಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಯಾವುದೇ ಪುಸ್ತಕ, ಸಾಹಿತಿ ಹೆಸರು ಹೇಳಿದರೆ ತಕ್ಷಣವೇ ಪುಸ್ತಕ ದಾಸ್ತಾನು ಇರುವ ಗೋದಾಮಿನಿಂದ ತೆಗೆದು ಕೊಡುತ್ತಾರೆ’ ಎಂದು ಪ್ರಸಾರಾಂಗದ ನಿರ್ದೇಶಕ ಎಚ್‌.ಡಿ. ಪ್ರಶಾಂತ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ರಾಮಸ್ವಾಮಿ ಸಂಕೋಚ ಸ್ವಭಾವದ ಮನುಷ್ಯ. ಮಾತು ಕಡಿಮೆ, ಕೆಲಸ ಜಾಸ್ತಿ ಎಂದು ನಂಬಿ ಬದುಕುತ್ತಿರುವ ಮನುಷ್ಯ. ಅಷ್ಟೇ ಸರಳ ಬದುಕು. ಕೆಲಸದ ಅವಧಿ ಮುಗಿದ ನಂತರವೂ ತಡಹೊತ್ತು ಕೆಲಸ ನಿರ್ವಹಿಸುತ್ತಾರೆ. ಯಾವುದೇ ಸಮಯದಲ್ಲಿ ಕರೆದರೂ ಯಾವುದೇ ಬರುತ್ತಾರೆ. ಇವರು ಪ್ರಸಾರಾಂಗದ ಆಧಾರ ಸ್ತಂಭ ಎಂದರೆ ತಪ್ಪಾಗಲಾರದು. ಎಲೆಮರೆಕಾಯಿಯಂತೆ ಇರುವ ಇಂತಹ ಶ್ರಮ ಜೀವಿಗಳಿಂದಲೇ ಇಡೀ ಪ್ರಸಾರಾಂಗ, ವಿಶ್ವವಿದ್ಯಾಲಯಕ್ಕೆ ಒಳ್ಳೆಯ ಹೆಸರಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT