ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

65ನೇ ಕನ್ನಡ ರಾಜ್ಯೋತ್ಸವ ಸಂಭ್ರಮ: ಪೈಲ್ವಾನ್‌ ರಂಜಾನ್‌ ಸಾಬ್‌ ತ್ಯಾಗದ ಸ್ಮರಣೆ

ಜಿಲ್ಲೆಯಾದ್ಯಂತ 65ನೇ ಕನ್ನಡ ರಾಜ್ಯೋತ್ಸವ ಸಂಭ್ರಮ
Last Updated 1 ನವೆಂಬರ್ 2020, 7:56 IST
ಅಕ್ಷರ ಗಾತ್ರ

ಬಳ್ಳಾರಿ: ‘ಕರ್ನಾಟಕ ಏಕೀಕರಣ ಹೋರಾಟಕ್ಕೆ ಮುನ್ನುಡಿ ಬರೆದ ಜಿಲ್ಲೆಯಲ್ಲಿ ಹೋರಾಟದ ಸಂದರ್ಭದಲ್ಲೇ ಪೈಲ್ವಾನ್‌ ರಂಜಾನ್‌ ಸಾಬ್‌ ಪ್ರಾಣ ತೆತ್ತು ಮಹಾನ್‌ ತ್ಯಾಗ ಮಾಡಿದರು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ಸಿಂಗ್‌ ಸ್ಮರಿಸಿದರು.

ನಗರದಲ್ಲಿ ಭಾನುವಾರ 65ನೇ ಕನ್ನಡ ರಾಜ್ಯೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ದೇಶದ ಇತಿಹಾಸ ಮತ್ತು ಸಂಸ್ಕೃತಿ ಚರಿತ್ರೆಯಲ್ಲಿ ವಿಶೇಷ ಗಮನ ಸೆಳೆದಿರುವ ಹಂಪಿಯಂತೆಯೇ, ರಂಜಾನ್‌ಸಾಬ್‌ ಕೂಡ ಕನ್ನಡ ಭಾಷಿಕರ ಒಗ್ಗೂಡುವಿಕೆಯ ಪ್ರಯತ್ನದಲ್ಲಿ ಮಹತ್ವದ ಪಾತ್ರ ವಹಿಸಿದರು’ ಎಂದು ಬಣ್ಣಿಸಿದರು.

‘ಮಹನೀಯರ ಹೋರಾಟದ ಫಲದಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕರೂ, ಹಲವು ಆಡಳಿತಗಾರರ ಮುಷ್ಠಿಗೆ ಸಿಲುಕಿದ್ದ ನಾಡು ಹರಿದು ಹಂಚಿ ಹೋಗಿತ್ತು. ನಾಡಿನ ಜನರನ್ನು ಒಂದುಗೂಡಿಸಲು ಬೃಹತ್‌ ಹೋರಾಟವೇ ನಡೆದು ಕರ್ನಾಟಕ ಏಕೀಕರಣಕ್ಕೆ ನಾಂದಿಯಾಗಿತ್ತು. ಆ ಮೂಲಕವೇ ಭಾಷಾವಾರು ಪ್ರಾಂತ್ಯಗಳ ರಚನೆಗೆ ಪ್ರೇರಣೆ ದೊರಕಿದ್ದು ಕರ್ನಾಟಕ ಚರಿತ್ರೆಯಲ್ಲಿ ಮಹತ್ವದ ಮೈಲಿಗಲ್ಲು. ಪ್ರತ್ಯೇಕ ಪ್ರಾಂತ ರಚನೆಗೆ ಆಲೂರು ವೆಂಕಟರಾಯ, ಡೆಪ್ಯುಟಿ ಚೆನ್ನಬಸಪ್ಪ ಸೇರಿದಂತೆ ಹಲವರು ತಮ್ಮ ಕೊಡುಗೆಗಳನ್ನು ನೀಡಿದರು’ ಎಂದು ಹೇಳಿದರು.

‘ಇತರೆ ಭಾಷೆಗಳು ಅಂಬೆಗಾಲಿಡುತ್ತಿರುವಾಗಲೇ ಕನ್ನಡ ಭಾಷೆಯಲ್ಲಿ ಕಾವ್ಯಗಳು ರಚನೆಗೊಂಡಿದ್ದವೆಂಬುದು ರೋಮಾಂಚಕಾರಿ ಸಂಗತಿ. ವಿಜಯನಗರ ಸಾಮ್ರಾಜ್ಯ ಕರ್ನಾಟಕದ ಹೆಮ್ಮೆ, ಕರ್ನಾಟಕ ಎಂಬುದು ಭೂಪ್ರದೇಶವಲ್ಲ. ಅದೊಂದು ಅನನ್ಯ ಸಂಸ್ಕೃತಿ, ಭವ್ಯ ಪರಂಪರೆಯನ್ನು ಪ್ರತಿನಿಧಿ. ರಾಜ್ಯವು ವಿವಿಧ ಮತ, ಪಂಥಗಳ ಸಂಗಮ’ ಎಂದು ಹೇಳಿದರು.

‘ನಾಡಿನ ಕವಿ, ಕಲಾವಿದರು, ಸಂಶೋಧಕರು, ಇತಿಹಾಸಕರರು ತಮ್ಮ ಕೃತಿಗಳ ಮೂಲಕ ಕರ್ನಾಟಕದ ಕೀರ್ತಿಯ ಕಳಸವನ್ನು ಹೊಳೆಯುವಂತೆ ಮಾಡಿದ್ದಾರೆ. ಕನ್ನಡ ನಾಡು ಉದಯವಾಗುವಲ್ಲಿ ಬಿ.ಎಂ.ಶ್ರೀಕಂಠಯ್ಯ, ಅ.ನ.ಕೃಷ್ಣರಾಯ, ಆಲೂರು ವೆಂಕಟರಾಯ. ಗಂಗಾಧರ ದೇಶಪಾಂಡೆ, ಮಂಗಳವಾಡಿ ಶ್ರೀನಿವಾಸರಾಯರು, ಗೊರೂರು ರಾಮಸ್ವಾಮಿ ಅಯ್ಯಂಗಾರ್‌, ಕೆಂಗಲ್ ಹನುಮಂತಯ್ಯ, ಕಡಿದಾಳ್‌ ಮಂಜಪ್ಪ, ಪಾಟೀಲ ಪುಟ್ಟಪ್ಪ ಅವರಂಥ ಮಹನೀಯರನ್ನು ಸ್ಮರಿಸಬೇಕು’ ಎಂದರು.

ಕುವೆಂಪು ಅವ ‘ಕನ್ನಡ ಡಿಂಡಿಮ’ ಕವಿತೆಯ ಸಾಲುಗಳನ್ನು ಓದಿದ ಸಚಿವರು, ‘ಈ ನಾಡಿನ ನೆಲ, ಜಲ, ಸಂಸ್ಕೃತಿ, ಸಾಹಿತ್ಯ, ಕಲೆಯನ್ನು ಉಳಿಸಿ ಬೆಳೆಸಬೇಕು. ಭಾರತದ ಇತಿಹಾಸದಲ್ಲಿ ಸುವರ್ಣ ಯುಗಗಳನ್ನು ಸೃಷ್ಟಿ ಮಾಡಿದ ಹಂಪಿಯು ಹೆಮ್ಮೆ ತಂದಿದೆ. ಅಮೂಲ್ಯ ಖನಿಜ ನಿಕ್ಷೇಪಗಳನ್ನು ಹೊಂದಿರುವ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲು ಎಲ್ಲರೂ ಕಂಕಣಬದ್ಧರಾಗೋಣ’ ಎಂದು ಕರೆ ನೀಡಿದರು.

ನೆರೆ ಸಂತ್ರಸ್ತರಿಗೆ ನೆರವಾಗಲೆಂದು ಕರ್ನಾಟಕ ಯುವಕ ಸಂಘದ ಮುಖಂಡರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ₨ 11 ಸಾವಿರ ಮೌಲ್ಯದ ಚೆಕ್‌ ಅನ್ನು ಇದೇ ಸಂದರ್ಭದಲ್ಲಿ ಸಚಿವರಿಗೆ ನೀಡಿದರು. ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಕನ್ನಡ ಸಂಸ್ಕೃತಿ ಇಲಾಖೆಯ ಸಂಗೀತ ಪರಿಕರಗಳನ್ನು ಸಚಿವರು ವಿತರಿಸಿದರು.

ಶಾಸಕರಾದ ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ಜಿಲ್ಲಾಧಿಕಾರಿ ಎಸ್‌.ಎಸ್‌.ನಕುಲ್‌, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹ ಅಧಿಕಾರಿ ಕೆ.ಆರ್‌.ನಂದಿನಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೈದುಲು ಅಡಾವತ್, ಪ್ರೊಬೆಷನರಿ ಐಎಎಸ್‌ ಅಧಿಕಾರಿ ರಾಹುಲ್‌ ಸಂಕನೂರ್, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ಧಲಿಂಗೇಶ್‌ ಕೆ.ರಂಗಣ್ಣವರ್‌,ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಮ್ಮೂರು ಶೇಖರ್ ಉಪಸ್ಥಿತರಿದ್ದರು.

ಕನ್ನಡ ಓದಲು ಕಷ್ಟ: ಜಿಲ್ಲಾಡಳಿತ ಸಿದ್ಧಪಡಿಸಿದ್ದ ರಾಜ್ಯೋತ್ಸವ ಭಾಷಣವನ್ನು ಸರಿಯಾಗಿಓದಲು ಸಚಿವರಿಗೆ ಸಾಧ್ಯವಾಗಲಿಲ್ಲ. ಹಲವೆಡೆ ಕನ್ನಡ ಪದಗಳ ಸರಿಯಾದ ಉಚ್ಛಾರಣೆ ಮಾಡಲು ಆಗಲಿಲ್ಲ. ಕುವೆಂಪು ಅವರ ‘ಕನ್ನಡ ಡಿಂಡಿಮ’ ಕವಿತೆಯ ಸಾಲುಗಳನ್ನು ಓದುವಾಗಲುಅವರು ಉಚ್ಛಾರಣೆಯ ತೊಡಕು ಎದುರಿಸಿದರು.

ಕೋಟೆಯ ಮೇಲೆ 65 ಅಡಿ ಉದ್ದದ ಬಾವುಟ!

ರಾಜ್ಯೋತ್ಸವದ ಪ್ರಯುಕ್ತ ನಗರದ ಐತಿಹಾಸಿಕ ಮೂರು ಸುತ್ತಿನ ಕೋಟೆಯ ಬುರುಜಿನ ಮೇಲೆ ನವಕರ್ನಾಟಕ ಯುವಶಕ್ತಿ ಸಂಘಟನೆಯ ಕಾರ್ಯಕರ್ತರು 6 ಅಡಿ ಅಗಲ ಹಾಗೂ 65 ಅಡಿ ಉದ್ದದ ಬೃಹತ್ ಕನ್ನಡ ಬಾವುಟವನ್ನು ಕಟ್ಟಿದರು.

ಭಾನುವಾರ ಬೆಳಗಿನ ಜಾವ 5.30ಕ್ಕೆ ಕೋಟೆಯ ತಳಭಾಗದಲ್ಲಿ ಮೆಟ್ಟಿಲಿಗೆ ಪೂಜೆ ಸಲ್ಲಿಸಿ ಮೇಲ್ಭಾಗಕ್ಕೆ ಏರಿದ ಮುಖಂಡರು ಬೃಹತ್ ಬಾವುಟ ಕಟ್ಟಿ ಉತ್ಸವದ ಸಂಭ್ರಮದಲ್ಲಿ ಮಿಂದರು.

ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ಸಿದ್ಮಲ್ ಮಂಜುನಾಥ, ಜಿಲ್ಲಾ ಘಟಕದ ಅಧ್ಯಕ್ಷ ರಮೇಶ್, ಕೇಣಿಬಸವರಾಜ, ರವಿಕುಮಾರ್, ರಾಮಚಂದ್ರ, ಬಿ.ಚಂದ್ರಶೇಖರ ಆಚಾರಿ, ಕೇದಾರನಾಥ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT