ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ| ನಬಿ ಸೋಲಿಗೆ ಅಪಪ್ರಚಾರವೆ ಮುಳುವಾಯಿತೇ?

Last Updated 12 ಡಿಸೆಂಬರ್ 2019, 19:31 IST
ಅಕ್ಷರ ಗಾತ್ರ

ಹೊಸಪೇಟೆ: ವಿಜಯನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜೆಡಿಎಸ್‌ಪಕ್ಷದ ಅಭ್ಯರ್ಥಿ ಎನ್‌.ಎಂ. ನಬಿ ಅವರ ಸೋಲಿಗೆ ಅಪಪ್ರಚಾರವೆ ಮುಳುವಾಯಿತೇ?

ಇಂತಹದ್ದೊಂದು ಪ್ರಶ್ನೆ ಈಗ ಮೂಡಿದೆ. ಚುನಾವಣೆಯಲ್ಲಿ ಆ ಪಕ್ಷದ ವಿರುದ್ಧ ವ್ಯವಸ್ಥಿತವಾಗಿ ನಡೆದ ಪ್ರಚಾರ–ಅಪಪ್ರಚಾರ ಎರಡೂ ಕಾರಣ ಇರಬಹುದು.

ಚುನಾವಣೆಗೆ ಬಿಜೆಪಿ, ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳ ಹೆಸರು ಘೋಷಣೆಗೂ ಮುನ್ನವೇ ಜೆ.ಡಿ.ಎಸ್‌. ತಯಾರಿ ನಡೆಸಿತ್ತು. ನಬಿ ಅವರಿಗೆ ಮುಂಚಿತವಾಗಿಯೇ ಅವರ ಪಕ್ಷ ಟಿಕೆಟ್‌ ಘೋಷಿಸಿದ್ದರಿಂದ ಸಹಜವಾಗಿಯೇ ಅವರು ಸಿದ್ಧತೆಯಲ್ಲಿ ತೊಡಗಿಸಿಕೊಂಡಿದ್ದರು. ಕ್ಷೇತ್ರದಲ್ಲಿ ನೆಲೆಯಿಲ್ಲದ ಪಕ್ಷದ ಸ್ಥಿತಿ ಕಂಡು ತಳಮಟ್ಟದಿಂದ ಅದನ್ನು ಕಟ್ಟಿ, ಮುಖಂಡರು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಲು ಎಲ್ಲಾ ರೀತಿಯಲ್ಲೂ ಶ್ರಮಿಸಿದ್ದರು. ವ್ಯಾಪಕವಾಗಿ ಪ್ರಚಾರ ಕೂಡ ಕೈಗೊಂಡಿದ್ದರು.

ಆದರೆ, ಮೊದಲ ದಿನದಿಂದಲೇ ಅವರ ವಿರುದ್ಧ ಟೀಕೆಗಳು ಕೇಳಿ ಬಂದವು. ಕಾಂಗ್ರೆಸ್‌ ಪಕ್ಷದ ಮತ ವಿಭಜನೆಗಾಗಿಯೇ ನಬಿ ಅವರನ್ನು ಆನಂದ್‌ ಸಿಂಗ್‌ ಅವರೇ ಕಣಕ್ಕಿಳಿಸಿದ್ದಾರೆ ಎಂಬ ಆರೋಪ ಕೇಳಿ ಬಂತು. ‘ನನ್ನನ್ನು ಯಾರೂ ಖರೀದಿಸಲು ಸಾಧ್ಯವಿಲ್ಲ. ಸಿಂಗ್‌ ಕುಟುಂಬ ರಾಜಕೀಯಕ್ಕೆ ಬಂದಾಗ ಅದಕ್ಕೆ ನೆರವಾದವನು ನಾನು. ಅವರು ನನ್ನ ಹಂಗಿನಲ್ಲಿ ಇದ್ದಾರೆ. ನಾನಲ್ಲ’ ಎಂದು ನಬಿ ಖಡಕ್‌ ಆಗಿಯೇ ತಿರುಗೇಟು ಕೊಟ್ಟಿದ್ದರು.

ಈ ಅಪಪ್ರಚಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಕೂಡ ಆಕ್ಷೇಪ ಎತ್ತಿದ್ದರು. ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಚುನಾವಣೆ ಎದುರಿಸುವ ಹಕ್ಕಿದೆ. ಜೆ.ಡಿ.ಎಸ್‌. ಅಭ್ಯರ್ಥಿಯನ್ನು ನಿಲ್ಲಿಸಿದರೆ, ಅದರಿಂದ ಮತ್ತೊಬ್ಬರಿಗೆ ಅನುಕೂಲವಾಗುತ್ತದೆ. ಅದಕ್ಕಾಗಿಯೇ ನಿಲ್ಲಿಸಲಾಗಿದೆ ಎಂದು ಅಪಪ್ರಚಾರ ಮಾಡುವುದು ಸರಿಯಲ್ಲ’ ಎಂದಿದ್ದರು.

ಇಷ್ಟೆಲ್ಲದರ ಹೊರತಾಗಿಯೂ ಜೆ.ಡಿ.ಎಸ್‌. ಮತ ಗಳಿಕೆಯಲ್ಲಿ ಉತ್ತಮ ಸಾಧನೆ ತೋರಲಿಲ್ಲ. ನಬಿ ಅವರು ಚುನಾವಣೆಯಲ್ಲಿ 3,885 ಮತಗಳಷ್ಟೇ ಪಡೆಯಲು ಶಕ್ತರಾದರು. ಅವರಿಗಿಂತ ಬಿಜೆಪಿ ಬಂಡಾಯ ಅಭ್ಯರ್ಥಿ ಕವಿರಾಜ್‌ ಅರಸ್‌ ಹೆಚ್ಚಿನ ಮತಗಳನ್ನು ಪಡೆದರು. ಅವರು 3,955 ಮತಗಳನ್ನು ಗಳಿಸಿದರು. ಹಾಗೆ ನೋಡಿದರೆ ಅರಸ್‌ ಕೊನೆಯ ಕ್ಷಣದಲ್ಲಿ ಉಮೇದುವಾರಿಕೆ ಸಲ್ಲಿಸಿದ್ದರು. ವ್ಯವಸ್ಥಿತವಾದ ಪ್ರಚಾರ, ಸಂಘಟನೆಯ ಕೊರತೆ ಇದ್ದರೂ ಅವರು ಜೆ.ಡಿ.ಎಸ್‌.ಗಿಂತ ಉತ್ತಮ ಸಾಧನೆ ಮಾಡಿದ್ದಾರೆ.

ಚುನಾವಣೆಯ ಸಂದರ್ಭದಲ್ಲಷ್ಟೇ ಜೆ.ಡಿ.ಎಸ್‌. ಪಕ್ಷ ಸಕ್ರಿಯವಾಗುತ್ತದೆ. ಮಿಕ್ಕುಳಿದ ಸಂದರ್ಭದಲ್ಲಿ ಆ ಪಕ್ಷದ ಮುಖಂಡರು ಕಾಣಿಸಿಕೊಳ್ಳುವುದಿಲ್ಲ. ಅಧಿಕಾರದಲ್ಲಿರುವವರ ಕುಂದು ಕೊರತೆಗಳು, ಅವರ ವೈಫಲ್ಯಗಳ ವಿರುದ್ಧ ಎಂದೂ ಹೋರಾಟ ನಡೆಸುವುದಿಲ್ಲ ಎಂಬ ಆರೋಪವೂ ಆ ಪಕ್ಷದ ಮೇಲಿದೆ. ಸಂಘಟನೆಗೆ ಹೆಚ್ಚಿನ ಒತ್ತು ಕೊಡದಿರುವುದು ಕೂಡ ಪ್ರಮುಖ ಕಾರಣ. ಹೀಗಾಗಿ ಅದು ಕೂಡ ಹಿನ್ನಡೆಗೆ ಕಾರಣವಾಗಿರಬಹುದು.

ಕ್ಷೇತ್ರದ ಮತದಾರರು ಬಿಜೆಪಿ ಹಾಗೂ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಹೊರತುಪಡಿಸಿ ಬೇರೆ ಅಭ್ಯರ್ಥಿಗಳ ಕಡೆಗೆ ಒಲವೇ ತೋರಿಸಲಿಲ್ಲ. ಅಂತಿಮವಾಗಿ ಆ ಎರಡೂ ಪಕ್ಷಗಳ ನಡುವೆಯೇ ಹಣಾಹಣಿ ಏರ್ಪಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT