ಬುಧವಾರ, ಆಗಸ್ಟ್ 21, 2019
25 °C
ಹೈನುಗಾರಿಕೆಯ ಫೋಟೋಗಳನ್ನು ಕಳಿಸುವೆ

ರೇವಣ್ಣ ಹಾಲು ಕರೆದಿಲ್ಲ: ಭೀಮಾನಾಯ್ಕ

Published:
Updated:
Prajavani

ಬಳ್ಳಾರಿ: ‘ಶಾಸಕ ಎಚ್‌.ಡಿ.ರೇವಣ್ಣ ಅವರು ಕರ್ನಾಟಕ ಹಾಲು ಮಹಾಮಂಡಳದಲ್ಲಿ ಕುಳಿತು ಎಂದೂ ಹಾಲು ಕರೆದಿಲ್ಲ. ಬದಲಿಗೆ ಅಲ್ಲಿ ಅಧ್ಯಕ್ಷರಾಗಿ ಹಾಲು ಕುಡಿದು, ಮೊಸರು, ಬೆಣ್ಣೆ ತುಪ್ಪ ತಿಂದಿದ್ದಾರೆ. ಒಕ್ಕೂಟವನ್ನು ದಿವಾಳಿಯೆಬ್ಬಿಸಿದ್ದಾರೆ. ಶಾಲಾ ಬಾಲಕನಾಗಿದ್ದಾಗಿನಿಂದಲೂ ನಾನು ಹಾಲು ಕರೆದು, ಸಗಣಿ ಬಾಚಿದ್ದೇನೆ’ ಎಂದು ರಾಯಚೂರು ಬಳ್ಳಾರಿ ಕೊಪ್ಪಳ ಹಾಲು ಒಕ್ಕೂಟದ ಅಧ್ಯಕ್ಷರಾಗಿರುವ ಶಾಸಕ ಎಲ್‌ಬಿಪಿ ಭೀಮಾನಾಯ್ಕ ಪ್ರತಿಪಾದಿಸಿದರು.

ಒಕ್ಕೂಟದಲ್ಲಿ ಮಂಗಳವಾರ ರಾತ್ರಿ ಸುದ್ದಿಗೋಷ್ಠಿ ನಡೆಸಿದ ಅವರು, ‘ನಾನು ರೈತನ ಮಗ. ಪ್ರತಿ ದಿನ ಶಾಲೆ ಮುಗಿಸಿ ಬಂದು ಹಾಲು ಕರೆದಿದ್ದೇನೆ, ಅಂಗಡಿಗೆ ಹಾಕಿದ್ದೇನೆ. ರೇವಣ್ಣ ಯಾವತ್ತಾದರೂ ಒಂದು ಲೀಟರ್‌ ಹಾಲು ಕರೆದು ಅಂಗಡಿಗೆ ಹಾಕಿದ್ದಾರೆಯೇ’ ಎಂದು ಪ್ರಶ್ನಿಸಿದರು.

‘ನನ್ನ ತೋಟದಲ್ಲಿ 4 ಗೀರ್‌ ತಳಿ ಹಸುಗಳಿವೆ. 4 ಎಮ್ಮೆಗಳಿವೆ. 4 ಜವಾರಿ ಆಕಳಿವೆ. 12 ಹಸುಗಳಿವೆ. ಅವುಗಳ ಚಿತ್ರಗಳನ್ನು ನಾಳೆ ಫೇಸ್‌ಬುಕ್‌ಗೆ ಹಾಕುತ್ತೇನೆ. ರೇವಣ್ಣ ಅವರಿಗೂ ಕಳಿಸುತ್ತೇನೆ’ ಎಂದರು.

‘ಒಕ್ಕೂಟ ತಮ್ಮೊಬ್ಬರ ಆಸ್ತಿ, ಅದನ್ನು ತಾವೊಬ್ಬರೇ ಅಭಿವೃದ್ಧಿ ಮಾಡಿದ್ದೇವೆ ಎಂಬಂತೆ ರೇವಣ್ಣ ಮಾತನಾಡುತ್ತಾರೆ. ಅವರಿಗೆ ಮುಂಚೆ ಸಿದ್ದರಾಮಯ್ಯ, ಮಾಧುಸ್ವಾಮಿ, ಬಿ.ವಿ.ಕರಿಗೌಡ, ಜಿ.ಸೋಮಶೇಖರರೆಡ್ಡಿಯವರೂ ಅಧ್ಯಕ್ಷರಾಗಿದ್ದರು. ಅವರೆಲ್ಲ ಒಕ್ಕೂಟವನ್ನು ಅಭಿವೃದ್ಧಿ ಮಾಡಲಿಲ್ಲವೇ’ ಎಂದು ಪ್ರಶ್ನಿಸಿದರು.

‘ಮಹಾಮಂಡಳದ ಅಧ್ಯಕ್ಷ ಸ್ಥಾನವನ್ನು ನಿಮಗೇ ನೀಡಲಾಗುವುದು ಎಂದು ಎಚ್‌.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದರು. ಆ ಬಗ್ಗೆ ಮೈತ್ರಿ ಪಕ್ಷಗಳ ಮುಖಂಡರೊಂದಿಗೆ ಚರ್ಚಿಸಿರುವುದಾಗಿಯೂ ಹೇಳಿದ್ದರು. ಮಹಾಮಂಡಳದಲ್ಲಿ ಕಾಂಗ್ರೆಸ್‌ನ ಒಂಭತ್ತು ಹಾಗೂ ಜೆಡಿಎಸ್‌ನ ಮೂವರು ನಿರ್ದೇಶಕರಿದ್ದಾರೆ. ಹೀಗಾಗಿ ನನಗೇ ಅಧ್ಯಕ್ಷ ಸ್ಥಾನ ದೊರಕಬೇಕು. ದೊರಕದಿದ್ದರೆ, ಕಾಂಗ್ರೆಸ್‌ನ ನಿರ್ದೇಶಕರಲ್ಲೇ ಒಬ್ಬರಿಗೆ ದೊರಕಬೇಕು. ಹಾಗಾಗದಿದ್ದರೆ ಕಾಂಗ್ರೆಸ್‌ನಲ್ಲಿದ್ದುಕೊಂಡೇ ಹೋರಾಟ ಮಾಡುವೆ’ ಎಂದರು.

Post Comments (+)