ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಗತಿಗೆ ಗೈರಾಗಲು ಪ್ರಭಾವ ಬೇಕೇ?

ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸ.ಚಿ. ರಮೇಶ ಪ್ರಶ್ನೆ
Last Updated 4 ಜುಲೈ 2019, 10:04 IST
ಅಕ್ಷರ ಗಾತ್ರ

ಹೊಸಪೇಟೆ: ‘ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ದೂರಶಿಕ್ಷಣದಲ್ಲಿ ಓದುತ್ತಿರುವವರಿಗೆ ಸಂಪರ್ಕ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಆದರೆ, ಅದರ ತರಗತಿಗಳಿಗೆ ಗೈರಾಗಲು ವಿದ್ಯಾರ್ಥಿಗಳು ಪ್ರಭಾವಿಗಳ ಮೊರೆ ಹೋಗುತ್ತಿರುವುದು ಸರಿಯೇ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸ.ಚಿ. ರಮೇಶ ಪ್ರಶ್ನಿಸಿದರು.

ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ 2018–19ನೇ ಸಾಲಿನ ಸ್ನಾತಕೋತ್ತರ ಕೋರ್ಸ್‌ಗಳ ಸಂಪರ್ಕ ತರಗತಿಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಹತ್ತು ದಿನಗಳ ಕಾಲ ನಡೆಯಲಿರುವ ತರಗತಿಗಳಿಗೆ ಹಾಜರಾಗಲು ಆಗುವುದಿಲ್ಲ ಎಂದು ಅನೇಕ ವಿದ್ಯಾರ್ಥಿಗಳು ಜನಪ್ರತಿನಿಧಿಗಳ ಮೂಲಕ ಹೇಳಿಸಿದ್ದಾರೆ ಎಂಬ ವಿಷಯ ಗೊತ್ತಾಗಿದೆ. ವರ್ಷದಲ್ಲಿ ಒಮ್ಮೆ ಮಾತ್ರ ಇದು ನಡೆಯುತ್ತದೆ. ಈ ಹತ್ತು ದಿನಗಳಲ್ಲಿ ವಿವಿಧ ಕ್ಷೇತ್ರದ ಹೆಸರಾಂತ ವಿದ್ವಾಂಸರು ಬಂದು ಪಾಠ ಮಾಡುತ್ತಾರೆ. ಇದೊಂದು ರೀತಿಯಲ್ಲಿ ಹಬ್ಬವಿದ್ದಂತೆ. ಎಲ್ಲರೂ ಲವಲವಿಕೆಯಿಂದ ಪಾಲ್ಗೊಳ್ಳಬೇಕು. ಗಂಭೀರವಾಗಿ ತೆಗೆದುಕೊಳ್ಳಬೇಕು’ ಎಂದು ಸೂಚಿಸಿದರು.

‘ವಿಶ್ವವಿದ್ಯಾಲಯದ ಆವರಣದಲ್ಲಿ ಸುಸಜ್ಜಿತವಾದ ಗ್ರಂಥಾಲಯವಿದೆ. ಬಿಡುವು ಸಿಕ್ಕಾಗ ವಿದ್ಯಾರ್ಥಿಗಳು ಅಲ್ಲಿಗೆ ಹೋಗಬಹುದು. ನುರಿತ ಪ್ರಾಧ್ಯಾಪಕರು, ವಿದ್ವಾಂಸರೊಂದಿಗೆ ಚರ್ಚಿಸಿ, ಅನೇಕ ವಿಷಯಗಳನ್ನು ತಿಳಿದುಕೊಳ್ಳಬಹುದು. ತರಗತಿಗಳಿಂದ ದೂರ ಉಳಿದರೆ ಯಾವುದೇ ಪ್ರಯೋಜನವಿಲ್ಲ’ ಎಂದರು.

ದೂರಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ವೀರೇಶ ಬಡಿಗೇರ, ‘ತರಗತಿಗೆ ಗೈರು ಹಾಜರಾಗಲು ಒತ್ತಡ ತರಬಾರದು. ಎಲ್ಲರೂ ಕಡ್ಡಾಯವಾಗಿ ಹಾಜರಾಗಲೇಬೇಕು. ಎಲ್ಲೆಡೆ ಸಿ.ಸಿ.ಟಿ.ವಿ. ಅಳವಡಿಸಲಾಗಿದೆ. ನಿಯಮಗಳಿಗೆ ತಕ್ಕಂತೆ ವಿಶ್ವವಿದ್ಯಾಲಯ ಕೆಲಸ ನಿರ್ವಹಿಸಲಿದೆ. ಯಾವುದೇ ಕಾರಣಕ್ಕೂ ಅಶಿಸ್ತು ಸಹಿಸುವುದಿಲ್ಲ. ವಿದ್ಯಾರ್ಥಿಗಳು ಸಹಕರಿಸಿ, ತರಗತಿಗಳಲ್ಲಿ ಪಾಲ್ಗೊಳ್ಳಬೇಕು’ ಎಂದು ಸೂಚಿಸಿದರು.

‘ವಿದ್ಯಾರ್ಥಿಗಳಿಗೆ ಎಂ.ಎ. ಪದವಿಯ ಮಹತ್ವ ಗೊತ್ತಿಲ್ಲ. ಇಲ್ಲವಾದರೆ ಪ್ರಭಾವಿಗಳಿಂದ ಕರೆ ಮಾಡಿಸಿ, ತರಗತಿಗಳಿಗೆ ಗೈರು ಹಾಜರಾಗುವ ಮಾತನಾಡುತ್ತಿರಲಿಲ್ಲ. ಇದು ಸರಿಯಾದ ನಡವಳಿಕೆ ಅಲ್ಲ’ ಎಂದು ಪ್ರಾಧ್ಯಾಪಕ ಎನ್‌. ಚಿನ್ನಸ್ವಾಮಿ ಸೋಸಲೆ ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಪತ್ರಕರ್ತ ಈಶ್ವರ ದೈತೋಟ, ‘ಸತ್ಯ ಸುದ್ದಿ, ಅಭಿಪ್ರಾಯ ಮಂಡನೆ, ಸಾಮಾಜಿಕ ಕಳಕಳಿ ಹಾಗೂ ಮನರಂಜನೆ ಮಾಧ್ಯಮಗಳಲ್ಲಿ ಪ್ರತ್ಯೇಕವಾಗಿರಬೇಕು. ಆದರೆ, ವಿದೇಶಿಯರು ಮಾಧ್ಯಮಗಳಲ್ಲಿ ಹೂಡಿಕೆ ಮಾಡಿ, ಅದರ ಮಾಲೀಕತ್ವ ಪಡೆದುಕೊಂಡಿರುವ ಕಾರಣ ಮಾಧ್ಯಮದ ನೈಜ ಸ್ವರೂಪ ಬದಲಾಗಿದೆ’ ಎಂದರು.

‘ಪತ್ರಿಕೋದ್ಯಮ ಎಲ್ಲ ಅಧ್ಯಯನಕ್ಕೆ ಸೇರಿದೆ. ಜನರ ನಡುವಿನ ಸಂಭಾಷಣೆಯಿಂದ ಪತ್ರಿಕೋದ್ಯಮ ಆರಂಭವಾಗಿದೆ. ಈಗ ಸ್ಮಾರ್ಟ್‌ಫೋನ್‌ಗಳ ಮೂಲಕ ಸುದ್ದಿ ತಲುಪುತ್ತಿದೆ. ಆದರೆ, ಶೇ 35ರಷ್ಟು ಸುಳ್ಳು ಸುದ್ದಿಗಳು ಹರಿದಾಡುತ್ತಿರುವುದು ವಿಷಾದಕರ’ ಎಂದು ಹೇಳಿದರು.

ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಅಶೋಕ ಶೆಟ್ಟರ್‌ ಮಾತನಾಡಿ, ‘ವಿದ್ಯಾರ್ಥಿಗಳು ದೂರ ಶಿಕ್ಷಣವನ್ನು ಹಗುರವಾಗಿ ತೆಗೆದುಕೊಳ್ಳಬಾರದು. ಭಾಗವಹಿಸುವಿಕೆ ಅಗತ್ಯ. ಬರುವ ದಿನಗಳಲ್ಲಿ ದೂರಶಿಕ್ಷಣವನ್ನು ನ್ಯಾಕ್‌ ವ್ಯಾಪ್ತಿಗೆ ತರುವ ಚಿಂತನೆ ನಡೆದಿದೆ. ಎಲ್ಲಕ್ಕಿಂತ ಮುಖ್ಯವಾಗಿ ವಿದ್ಯಾರ್ಥಿಗಳು ಜ್ಞಾನಾರ್ಜನೆಗೆ ಹೆಚ್ಚಿನ ಒತ್ತು ಕೊಡಬೇಕು. ತರಗತಿಗಳಿಂದ ದೂರ ಉಳಿದರೆ ಅದು ಸಾಧ್ಯವಾಗದು’ ಎಂದರು.

ಸಂಪರ್ಕ ತರಗತಿ ಸಂಚಾಲಕ ಬಿ.ಟಿ. ಮುದ್ದೇಶ್‌, ಕೆ.ಎಸ್‌. ಲೋಕೇಶ, ಜಿ. ಸಂತೋಷಕುಮಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT