ಶುಕ್ರವಾರ, ಸೆಪ್ಟೆಂಬರ್ 17, 2021
23 °C
ತಡವಾಗಿ ಬಂದದ್ದಕ್ಕೆ ಪರೀಕ್ಷೆಗೆ ಅವಕಾಶ ನಕಾರ

ಹೊಸಪೇಟೆ: ಪ್ರಾಚಾರ್ಯರ ವಿರುದ್ಧ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ತಡವಾಗಿ ಬಂದ ಕಾರಣಕ್ಕೆ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಅವಕಾಶ ಕೊಡದಿರುವುದನ್ನು ವಿರೋಧಿಸಿ ಭಾರತ ವಿದ್ಯಾರ್ಥಿ ಫೆಡರೇಶನ್‌ (ಎಸ್‌.ಎಫ್‌.ಐ.) ಕಾರ್ಯಕರ್ತರು ಗುರುವಾರ ನಗರದ ಶಂಕರ್‌ ಆನಂದ್‌ ಸಿಂಗ್‌ ಸರ್ಕಾರಿ ಪದವಿ ಕಾಲೇಜಿನ ಎದುರು ಪ್ರತಿಭಟನೆ ನಡೆಸಿದರು.

ಬೆಳಿಗ್ಗೆ 9 ಗಂಟೆಗೆ ಪದವಿ ಕಲಾ ವಿಭಾಗದ ದ್ವಿತೀಯ ಸೆಮಿಸ್ಟರ್‌ ಪರೀಕ್ಷೆ ಇತ್ತು. ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಉಲುವತ್ತಿ ಗ್ರಾಮದ ವಿದ್ಯಾರ್ಥಿನಿ ಬಸ್‌ ತಡವಾಗಿದ್ದರಿಂದ 40 ನಿಮಿಷ ತಡವಾಗಿ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದಾರೆ. ಪ್ರಾಚಾರ್ಯ ಬಿ.ಜಿ. ಕನಕೇಶಮೂರ್ತಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಿಲ್ಲ. ಸುದ್ದಿ ತಿಳಿದು ಫೆಡರೇಶನ್‌ ಕಾರ್ಯಕರ್ತರು, ಕಾಲೇಜಿನ ಎದುರು ಪ್ರತಿಭಟನೆ ನಡೆಸಿದರು. ಪ್ರಾಚಾರ್ಯರ ವಿರುದ್ಧ ಘೋಷಣೆಗಳನ್ನು ಕೂಗಿದರು.

ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕೆಂದು ಪಟ್ಟು ಹಿಡಿದರು. ಸ್ಥಳಕ್ಕೆ ಬಂದ ಸಿಪಿಐ ಪರಸಪ್ಪ ಭಜಂತ್ರಿ, ‘ಪರೀಕ್ಷೆ ಬರೆಯಲು ನಿಯಮಗಳಿವೆ. ಕಾಲೇಜಿನ ಪ್ರಾಚಾರ್ಯರು ನಿಯಮಾನುಸಾರ ಕ್ರಮ ತೆಗೆದುಕೊಂಡಿದ್ದಾರೆ. ಅದರಲ್ಲಿ ಯಾವುದೇ ತಪ್ಪು ಇಲ್ಲ. ಪರೀಕ್ಷೆ ಬರೆಯುತ್ತಿರುವ ಬೇರೆ ವಿದ್ಯಾರ್ಥಿಗಳಿಗೆ ತೊಂದರೆ ಕೊಡದೆ ಇಲ್ಲಿಂದ ಹೋಗಬೇಕು’ ಎಂದು ಮನವಿ ಮಾಡಿದರು. ಅದರಿಂದ ಫೆಡರೇಶನ್‌ ಕಾರ್ಯಕರ್ತರು ಪ್ರತಿಭಟನೆ ಕೈಬಿಟ್ಟು, ಅಲ್ಲಿಂದ ನಿರ್ಗಮಿಸಿದರು.

‘ಕಾನೂನು ಹೋರಾಟ ನಡೆಸಿ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗುವುದು’ ಎಂದು ಫೆಡರೇಶನ್‌ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ತಿಳಿಸಿದರು.

ಪ್ರಾಚಾರ್ಯರು ಪ್ರತಿಕ್ರಿಯಿಸಿ, ‘ನಿಗದಿತ ಅವಧಿಗಿಂತ 50 ನಿಮಿಷ ತಡವಾಗಿ ವಿದ್ಯಾರ್ಥಿನಿ ಬಂದಿದ್ದಾರೆ. ಅವರು ಗೈರು ಹಾಜರಾಗಿದ್ದಾರೆ ಎಂದು ಕಡತದಲ್ಲಿ ದಾಖಲಿಸಲಾಗಿದೆ. ಅದನ್ನು ಅಳಿಸಿ, ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದರೆ ನಮಗೆ ಸಮಸ್ಯೆಯಾಗುತ್ತದೆ. ಐದೋ, ಹತ್ತೋ ನಿಮಿಷ ತಡವಾಗಿದ್ದರೆ ಅವಕಾಶ ಕೊಡಬಹುದಿತ್ತು’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.