ಭಾನುವಾರ, ನವೆಂಬರ್ 29, 2020
20 °C

ರಾಜ್ಯದಾದ್ಯಂತ ಕೋಲಾರ ಕೃಷಿ ಪದ್ಧತಿ ಜಾರಿಗೆ ಚಿಂತನೆ: ಸಚಿವ ಬಿ.ಸಿ. ಪಾಟೀಲ್‌ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ: ‘ಬಹುಬೆಳೆ ಬೆಳೆದು ಬದುಕು ಕಟ್ಟಿಕೊಂಡ ಕೋಲಾರ ರೈತರು ಎಲ್ಲರಿಗೂ ಮಾದರಿಯಾಗಿದ್ದಾರೆ. ಹಾಗಾಗಿ ಕೋಲಾರ ಕೃಷಿ ಪದ್ಧತಿ ರಾಜ್ಯದಾದ್ಯಂತ ಜಾರಿಗೆ ತರಲು ಚಿಂತನೆ ನಡೆದಿದೆ’ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್‌ ತಿಳಿಸಿದರು.

ಗುರುವಾರ ನಗರದಲ್ಲಿ ಹಮ್ಮಿಕೊಂಡಿದ್ದ 67ನೇ ರಾಜ್ಯಮಟ್ಟದ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ತೀವ್ರ ನೀರಿನ ಸಮಸ್ಯೆ ಇರುವ ಕೋಲಾರ ಜಿಲ್ಲೆಯಲ್ಲಿ ರೈತರು ಬಹುಬೆಳೆ ಬೆಳೆಯುವುದರ ಮೂಲಕ ಪರಿಹಾರ ಕಂಡುಕೊಂಡಿದ್ದಾರೆ. ಇಡೀ ಜಿಲ್ಲೆಯಾದ್ಯಂತ ನೀರಾವರಿ ಇದ್ದರೂ ಮಂಡ್ಯ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣ ಅಲ್ಲಿನ ಕೃಷಿ ಪದ್ಧತಿ ಸರಿಯಿಲ್ಲ. ಎಲ್ಲ ರೈತರು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡರೆ ಸಮಸ್ಯೆಯಿಂದ ಹೊರಬಹುದು’ ಎಂದರು.

‘ಸಾಂಪ್ರದಾಯಿಕ ಕೃಷಿಯಿಂದ ರೈತರು ಹೊರಬರಬೇಕು. ಮಣ್ಣಿನ ಪರೀಕ್ಷೆ ಮಾಡಿಸಿ, ಅದಕ್ಕೆ ಹೊಂದುವಂತಹ, ಕಡಿಮೆ ನೀರಿನಲ್ಲಿ ಬೆಳೆಯಬಹುದಾದ ಬೆಳೆಗಳನ್ನು ಬೆಳೆಯಬೇಕು. ಅವರು ಬೆಳೆದ ಬೆಳೆಗೆ ಅವರೇ ಬೆಲೆ ನಿಗದಿಪಡಿಸಬೇಕು. ಅದಕ್ಕಾಗಿ ಯಾರ ಬಳಿ ಭಿಕ್ಷೆ ಬೇಡಬೇಕಿಲ್ಲ’ ಎಂದು ಹೇಳಿದರು.

‘ಅಲೆದಾಡಿದ್ರೆ ಮಂತ್ರಿಗಿರಿಗೆ ಅಂತಲ್ಲ’:

‘ಶಾಸಕರು ಮುಖ್ಯಮಂತ್ರಿಯವರ ಮನೆಗೆ ಬರುತ್ತಾರೆ, ಹೋಗುತ್ತಾರೆ. ಅವರ ಮನೆಗೆ ಅಲೆದಾಡಿದ್ರೆ ಮಂತ್ರಿಗಿರಿಗಾಗಿ ಹೋಗ್ತಾರೆ ಅಂತಲ್ಲ. ಬೇರೆ ಕೆಲಸ ಇರಲ್ವಾ’ ಎಂದು ಬಿ.ಸಿ. ಪಾಟೀಲ್‌ ಸುದ್ದಿಗಾರರ ಪ್ರಶ್ನೆಗೆ ಈ ರೀತಿ ಮರು ಪ್ರಶ್ನೆ ಹಾಕಿದರು.

‘ಬಿಜೆಪಿಯಲ್ಲಿ ಮೂಲ ಮತ್ತು ವಲಸಿಗರು ಎನ್ನುವ ಪ್ರಶ್ನೆಯೇ ಇಲ್ಲ. ಎಲ್ಲರೂ ಅಣ್ಣ ತಮ್ಮಂದಿರಂತೆ ಇದ್ದೇವೆ. ಬಿಜೆಪಿಗೆ ಬಂದ ಎಲ್ಲ ಶಾಸಕರನ್ನು ಬಹಳ ಗೌರವದಿಂದ ನಡೆಸಿಕೊಳ್ಳುತ್ತಿದ್ದಾರೆ. ಸಚಿವ ಸ್ಥಾನ ನೀಡಬೇಕಾದರೆ ಎಲ್ಲವನ್ನೂ ನೋಡಿಕೊಂಡು ಕೊಡುತ್ತಾರೆ’ ಎಂದು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.