ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಾಲಯದಲ್ಲೇ ಶೌಚಾಲಯದ ಸಮಸ್ಯೆ!

Last Updated 27 ಜೂನ್ 2019, 19:30 IST
ಅಕ್ಷರ ಗಾತ್ರ

ಹೊಸಪೇಟೆ: ನಗರದ ನ್ಯಾಯಾಲಯ ಸಂಕೀರ್ಣದ ಆವರಣದಲ್ಲಿನ ಸಾರ್ವಜನಿಕ ಶೌಚಾಲಯ ಸೂಕ್ತ ನಿರ್ವಹಣೆ ಇಲ್ಲದ ಕಾರಣ ಇದ್ದೂ ಇಲ್ಲದಂತಾಗಿದೆ.

ಶೌಚಾಲಯಕ್ಕೆ ಹೋಗುವ ದಾರಿ, ಕಮೋಡ್‌ಗಳಲ್ಲಿ ಕಲ್ಲು, ಮಣ್ಣು ತುಂಬಿಕೊಂಡಿದೆ. ಎಲ್ಲೆಡೆ ಜಾಳು ಕಟ್ಟಿಕೊಂಡಿದೆ. ಅಲ್ಲಲ್ಲಿ ನೀರು ನಿಂತಿರುವುದರಿಂದ ಗಲೀಜು ಆಗಿದೆ. ಒಟ್ಟಾರೆ ನ್ಯಾಯಾಲಯಕ್ಕೆ ಬರುವ ಸಾರ್ವಜನಿಕರು ಬಳಸಲಾರದಂತಹ ಸ್ಥಿತಿಯಲ್ಲಿ ಶೌಚಾಲಯ ಇದೆ.

ಹತ್ತು ವರ್ಷಗಳ ಹಿಂದೆ ಹತ್ತು ಲಕ್ಷ ವೆಚ್ಚದಲ್ಲಿ ಸುಸಜ್ಜಿತವಾದ ಶೌಚಾಲಯ ನಿರ್ಮಿಸಲಾಗಿತ್ತು. ಆದರೆ, ಆರಂಭದಿಂದಲೂ ನಿರ್ವಹಣೆ ಕೊರತೆ ಇದೆ. ಕಸ ಕಡ್ಡಿ ಹೊಡೆಯುವವರು, ಕಮೋಡ್‌ಗಳನ್ನು ಸ್ವಚ್ಛಗೊಳಿಸುವವರು ಯಾರೂ ಇಲ್ಲ. ನೀರಿನ ಸೌಲಭ್ಯ ಕೂಡ ಇಲ್ಲ. ಇದರಿಂದಾಗಿ ದುರ್ಗಂಧ ಹರಡಿದೆ.

ನಿತ್ಯ ವಿವಿಧ ಕಡೆಗಳಿಂದ ಅನೇಕ ಜನ ಕಕ್ಷಿದಾರರು ನ್ಯಾಯಾಲಯಕ್ಕೆ ಬಂದು ಹೋಗುತ್ತಾರೆ. ಆದರೆ, ಶೌಚಾಲಯ ಬಳಕೆಗೆ ಯೋಗ್ಯವಲ್ಲದ ಕಾರಣ ಬೇರೆಡೆ ಹೋಗುತ್ತಾರೆ. ಪುರುಷರೇ ಎಲ್ಲೋ ಹೋಗಿ ಬರುತ್ತಾರೆ. ಆದರೆ, ಮಹಿಳೆಯರು, ಅಂಗವಿಕಲರಿಗೆ ತೀವ್ರ ಸಮಸ್ಯೆಯಾಗುತ್ತಿದೆ.

‘ವಿವಿಧ ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ಪರ ಊರುಗಳಿಂದ ಸಾಕಷ್ಟು ಜನ ನಿತ್ಯ ನ್ಯಾಯಾಲಯಕ್ಕೆ ಬರುತ್ತಾರೆ. ಕೆಲವೊಮ್ಮೆ ಬೆಳಿಗ್ಗೆ ಬಂದರೆ ಸಂಜೆಯ ವರೆಗೆ ನ್ಯಾಯಾಲಯದಲ್ಲೇ ಇರಬೇಕಾಗುತ್ತದೆ. ಕನಿಷ್ಠ ಶೌಚಾಲಯ ವ್ಯವಸ್ಥೆಯೂ ನ್ಯಾಯಾಲಯದಲ್ಲಿ ಇರದಿದ್ದರೆ ಹೇಗೆ?’ ಎಂದು ಪ್ರಶ್ನಿಸಿದರು ರೇಖಾ ಎಂಬ ಮಹಿಳೆ.

‘ಇಡೀ ನ್ಯಾಯಾಲಯದ ಕಟ್ಟಡ, ಪ್ರಾಂಗಣ ಎಲ್ಲವೂ ಸುಸಜ್ಜಿತವಾಗಿದೆ. ನ್ಯಾಯಾಧೀಶರು, ವಕೀಲರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ. ಎಲ್ಲವೂ ಅಚ್ಚುಕಟ್ಟಾಗಿ ಇದೆ. ಆದರೆ, ಸಾರ್ವಜನಿಕ ಶೌಚಾಲಯವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಇದರಿಂದಾಗಿ ಜನರಿಗೆ ತೀವ್ರ ತೊಂದರೆ ಆಗುತ್ತಿದೆ’ ಎಂದು ಹೇಳಿದರು.

‘ನಿತ್ಯ ಜನರ ವ್ಯಾಜ್ಯಗಳನ್ನು ಆಲಿಸಿ, ಅವುಗಳಿಗೆ ಪರಿಹಾರ ಕೊಡುವ ನ್ಯಾಯಾಲಯ ದೇವಸ್ಥಾನದ ಸಮಾನವೆಂದು ಜನ ಭಾವಿಸುತ್ತಾರೆ. ಆದರೆ, ದೇಗುಲಕ್ಕೆ ಬರುವ ಭಕ್ತರಿಗೆ ಕನಿಷ್ಠ ಅಗತ್ಯ ಸೌಲಭ್ಯ ಇಲ್ಲದಿದ್ದಲ್ಲಿ ಹೇಗೆ? ಶೌಚಾಲಯ ಬಹಳ ಅಗತ್ಯವಾಗಿ ಎಲ್ಲರಿಗೂ ಬೇಕು. ಅದನ್ನು ಯಾರೂ ಹಗುರವಾಗಿ ತೆಗೆದುಕೊಳ್ಳಬಾರದು. ಈ ನಿಟ್ಟಿನಲ್ಲಿ ಸ್ವತಃ ನ್ಯಾಯಾಧೀಶರೆ ಗಮನ ಹರಿಸಿ ಅದನ್ನು ಸರಿಪಡಿಸಲು ಕ್ರಮ ತೆಗೆದುಕೊಳ್ಳಬೇಕು‘ ಎಂದು ಹಗರಿಬೊಮ್ಮನಹಳ್ಳಿಯಿಂದ ಬಂದಿದ್ದ ಶೋಭಾ ಎಂಬುವರು ಆಗ್ರಹಿಸಿದರು.

‘ರಾಷ್ಟ್ರಮಟ್ಟದಲ್ಲಿ ರಾಷ್ಟ್ರೀಯ ನ್ಯಾಯಾಲಯ ನಿರ್ವಹಣೆ ವ್ಯವಸ್ಥೆ ಸಮಿತಿ ರಚಿಸಲಾಗಿದೆ. ಎಲ್ಲ ನ್ಯಾಯಾಲಯಗಳಲ್ಲಿ ಶೌಚಾಲಯ ಸೇರಿದಂತೆ ಅಗತ್ಯ ಮೂಲಸೌಕರ್ಯವನ್ನು ಜನರಿಗೆ ಕಲ್ಪಿಸಬೇಕು. ಅದರಲ್ಲೂ ಮಹಿಳೆಯರು, ಅಂಗವಿಕಲರಿಗೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದು ಹೇಳುತ್ತದೆ. ಹಾಗಾಗಿ ಕೂಡಲೇ ಶೌಚಾಲಯ ದುರಸ್ತಿಗೊಳಿಸಿ, ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಬೇಕು. ಇದರಿಂದ ಜನರಿಗೆ ಅನುಕೂಲವಾಗುತ್ತದೆ’ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ವಕೀಲರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT