ಬುಧವಾರ, ನವೆಂಬರ್ 25, 2020
20 °C

PV Web Exclusive: ತುಂಗಭದ್ರಾ ನೀರಿನ ಸದ್ಬಳಕೆ; ಬಾಯಿಮಾತಿಗೆ ಸೀಮಿತ

ಶಶಿಕಾಂತ ಎಸ್‌. ಶೆಂಬೆಳ್ಳಿ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ಇಲ್ಲಿಗೆ ಸಮೀಪದ ತುಂಗಭದ್ರಾ ಜಲಾಶಯದ ಹೆಚ್ಚುವರಿ ನೀರಿನ ಸದ್ಬಳಕೆಯ ವಿಚಾರ ಆಳುವ ಸರ್ಕಾರಗಳ ಬಾಯಿಮಾತಿಗಷ್ಟೇ ಸೀಮಿತವಾಗಿದೆ.

ಪ್ರತಿ ವರ್ಷ ಜಲಾಶಯ ತುಂಬಿದ ನಂತರ ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತದೆ. ಈ ಸಂದರ್ಭದಲ್ಲಷ್ಟೇ ಸರ್ಕಾರ ಹಾಗೂ ಜನಪ್ರತಿನಿಧಿಗಳಿಗೆ ನೀರಿನ ಸದ್ಬಳಕೆಯ ವಿಷಯ ನೆನಪಾಗುತ್ತದೆ. ದಿನ ಕಳೆದಂತೆ ಅದನ್ನು ಮರೆತು ಹೋಗುತ್ತಾರೆ. ಈ ಉದಾಸೀನ ಧೋರಣೆ, ಇಚ್ಛಾಶಕ್ತಿಯ ಕೊರತೆಯಿಂದ ಇದುವರೆಗೆ ಒಂದೇ ಒಂದು ಯೋಜನೆ ಕಾರ್ಯರೂಪಕ್ಕೆ ಬಂದಿಲ್ಲ. ಆ ನಿಟ್ಟಿನಲ್ಲಿ ಕನಿಷ್ಠ ಚರ್ಚೆಗಳು ಕೂಡ ನಡೆದಿಲ್ಲ.

‘ಈ ಹಿಂದಿನ ಕಾಂಗ್ರೆಸ್‌ ಸರ್ಕಾರ, ಬಳಿಕ ಬಂದ ಸಮ್ಮಿಶ್ರ ಸರ್ಕಾರ ಹಾಗೂ ಹಾಲಿ ಬಿಜೆಪಿ ಸರ್ಕಾರ ಕೂಡ ನೀರಿನ ಸದುಪಯೋಗಕ್ಕೆ ಸಂಬಂಧಿಸಿದಂತೆ ಗಂಭೀರವಾಗಿ ಯೋಚಿಸಿ, ಕ್ರಮ ಕೈಗೊಂಡಿಲ್ಲ’ ಎಂದು ಆರೋಪಿಸುತ್ತಾರೆ ಈ ಭಾಗದ ರೈತರು.

ಏನಿದು ಬೇಡಿಕೆ?

‘ಪ್ರತಿ ವರ್ಷ ತುಂಗಭದ್ರಾ ಅಣೆಕಟ್ಟೆ ತುಂಬಿದ ಬಳಿಕ ಅದರ ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತದೆ. ಈ ನೀರು ಆಂಧ್ರ ಪ್ರದೇಶದಲ್ಲಿ ಕೃಷ್ಣ ನದಿಯೊಂದಿಗೆ ಸೇರಿ ನಂತರ ಸಮುದ್ರ ಸೇರುತ್ತದೆ. ನದಿಗೆ ಹರಿಸುವ ನೀರಿನಿಂದ ಜಿಲ್ಲೆಯ ಕೆರೆ, ಕಟ್ಟೆಗಳನ್ನು ತುಂಬಿಸಬೇಕು. ಹೀಗೆ ಮಾಡುವುದರಿಂದ ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ನೀರಿಗೆ ಸಮಸ್ಯೆ ಎದುರಾಗುವುದಿಲ್ಲ. ಮಳೆಯನ್ನೇ ಅವಲಂಬಿಸಿ ಕೃಷಿ ಮಾಡುವ ಪ್ರದೇಶಗಳಿಗೆ ನೀರು ಪೂರೈಸಿದಂತಾಗುತ್ತದೆ. ಅಂತರ್ಜಲ ಮಟ್ಟವೂ ವೃದ್ಧಿಯಾಗುತ್ತದೆ’ ಎನ್ನುತ್ತಾರೆ ರೈತರು.

ಆದರೆ, ಚುನಾವಣೆ ಸಂದರ್ಭದಲ್ಲಷ್ಟೇ ಈ ವಿಷಯ ಮುನ್ನೆಲೆಗೆ ಬರುತ್ತದೆ. ಎಲ್ಲ ಪಕ್ಷಗಳ ರಾಜಕೀಯ ಮುಖಂಡರು ದೊಡ್ಡ ದೊಡ್ಡ ಭರವಸೆಗಳನ್ನು ಕೊಡುತ್ತಾರೆ. ಆದರೆ, ಚುನಾವಣೆ ಮುಗಿದ ನಂತರ ಅದರ ಬಗ್ಗೆ ಯಾರೊಬ್ಬರೂ ಚಕಾರ ಎತ್ತುವುದಿಲ್ಲ.

ಸತತ ಮೂರು ವರ್ಷಗಳಿಂದ ತುಂಗಭದ್ರಾ ಜಲಾಶಯ ತುಂಬುತ್ತಿದೆ. 2018ರಲ್ಲಿ 201 ಟಿಎಂಸಿ ನೀರು ನದಿಗೆ ಹರಿಸಿದರೆ, 2019ರಲ್ಲಿ 230 ಟಿಎಂಸಿ ಹಾಗೂ ಪ್ರಸಕ್ತ ಸಾಲಿನ ಆಗಸ್ಟ್‌ನಿಂದ ಇದುವರೆಗೆ 113 ಟಿಎಂಸಿ ನೀರು ಹರಿಸಲಾಗಿದೆ. ದಶಕದ ನಂತರ ಜಿಲ್ಲೆಯಲ್ಲಿ ಈ ವರ್ಷ ಉತ್ತಮ ಮಳೆಯಾಗಿರುವುದರಿಂದ ಬಹುತೇಕ ಕೆರೆ, ಕಟ್ಟೆಗಳು ತುಂಬಿವೆ. ಆದರೆ, ಹಿಂದಿನ ವರ್ಷಗಳಲ್ಲಿ ಈ ಪರಿಸ್ಥಿತಿ ಇರಲಿಲ್ಲ. ಬಹುತೇಕ ಕೆರೆ, ಕಟ್ಟೆಗಳು ಬರಿದಾಗಿದ್ದವು. ಅಷ್ಟೇ ಅಲ್ಲ, ಜಲಾಶಯ ಸುತ್ತಮುತ್ತಲಿನ ಕೆರೆಗಳಲ್ಲೇ ನೀರು ಇರಲಿಲ್ಲ. ನದಿಗೆ ಹರಿಸುವ ನೀರಿನಿಂದ ಕೆರೆಗಳನ್ನು ತುಂಬಿಸುವ ಯೋಜನೆ ಜಾರಿಗೆ ತಂದರೆ ಜಿಲ್ಲೆಯ ಯಾವ ಕೆರೆಯೂ ಬರಿದಾಗಿ ಇರುವುದಿಲ್ಲ ಎನ್ನುತ್ತಾರೆ ರೈತರು.

‘ಪ್ರತಿ ವರ್ಷ ಜಲಾಶಯ ತುಂಬಿದಾಗ 100ರಿಂದ 150 ಟಿಎಂಸಿ ಸರಾಸರಿ ನೀರು ನದಿಗೆ ಹರಿಸಲಾಗುತ್ತದೆ. ಅದರಲ್ಲಿ ಸ್ವಲ್ಪ ನೀರು ಬಳಸಿಕೊಂಡರೆ ಜಿಲ್ಲೆಯ ಎಲ್ಲ ಕೆರೆ, ಕಟ್ಟೆಗಳನ್ನು ತುಂಬಿಸಬಹುದು. ಆದರೆ, ಸರ್ಕಾರಕ್ಕೆ ಇಚ್ಛಾಶಕ್ತಿಯ ಕೊರತೆ ಇದೆ. ಅಧಿಕಾರಕ್ಕೆ ಬರುವ ಮುಂಚೆ ಎಲ್ಲ ಸರ್ಕಾರಗಳು ಈ ಕುರಿತು ಭರವಸೆ ನೀಡುತ್ತವೆ. ಆದರೆ, ಅಧಿಕಾರಕ್ಕೆ ಬಂದ ನಂತರ ಅಪ್ಪಿತಪ್ಪಿಯೂ ಅದರ ಬಗ್ಗೆ ಮಾತನಾಡುವುದಿಲ್ಲ’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರಧಾನ ಕಾರ್ಯದರ್ಶಿ ಜೆ. ಕಾರ್ತಿಕ್‌ ಆರೋಪಿಸುತ್ತಾರೆ.

‘ನೀರಿನ ಸದ್ಬಳಕೆಯ ವಿಚಾರದಲ್ಲಿ ನೆರೆಯ ಆಂಧ್ರ ಪ್ರದೇಶವನ್ನು ನೋಡಿಯಾದರೂ ಪಾಠ ಕಲಿತುಕೊಳ್ಳಬೇಕು. ಅಲ್ಲಿನ ಜಲಾಶಯಗಳ ಜತೆಗೆ, ನಮ್ಮ ರಾಜ್ಯದ ಜಲಾಶಯದ ಮೂಲಕ ಹರಿಸುವ ನೀರಿನಿಂದ ಕೆರೆ ತುಂಬಿಸಿಕೊಳ್ಳುತ್ತಾರೆ. ಹೀಗಾಗಿಯೇ ಬೇಸಿಗೆಯಲ್ಲಿ ಆ ರಾಜ್ಯದಲ್ಲಿ ನೀರಿಗೆ ಸಮಸ್ಯೆ ಎದುರಾಗುವುದಿಲ್ಲ’ ಎಂದು ಹೇಳಿದರು.

ವರ್ಷ ನದಿಗೆ ಹರಿಸಿದ ನೀರು (ಟಿಎಂಸಿ ಗಳಲ್ಲಿ)
2020113
2019230
2018201

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು