ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ವರದಿ ಫಲಶ್ರುತಿ: ಹೊಸಪೇಟೆಯಲ್ಲಿ ವಾಹನ ಸಂಚಾರ ನಿರ್ಬಂಧ ತೆರವು

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವ್ಯತಿರಿಕ್ತ ಹೇಳಿಕೆ
Last Updated 10 ಅಕ್ಟೋಬರ್ 2020, 13:33 IST
ಅಕ್ಷರ ಗಾತ್ರ

ಹೊಸಪೇಟೆ: ಅರಣ್ಯ ಸಚಿವ ಆನಂದ್‌ ಸಿಂಗ್‌ ಅವರ ಬಂಗ್ಲೆಯ ಮೇಲೆ ದೂಳು ಆವರಿಸುತ್ತದೆ ಎಂದು ಹೊರವರ್ತುಲ ರಸ್ತೆಯಲ್ಲಿ ಲಾರಿ ಸೇರಿದಂತೆ ಇತರೆ ಸರಕು ಸಾಗಣೆ ವಾಹನಗಳ ಸಂಚಾರದ ಮೇಲೆ ಹೇರಿದ್ದ ನಿರ್ಬಂಧವನ್ನು ಪೊಲೀಸ್‌ ಇಲಾಖೆ ಶನಿವಾರ ಹಿಂತೆಗೆದುಕೊಂಡಿದೆ.

‘ಸಚಿವರ ಬಂಗ್ಲೆ ರಕ್ಷಿಸಲು ವಾಹನ ಸಂಚಾರ ನಿರ್ಬಂಧ!’ ಶೀರ್ಷಿಕೆ ಅಡಿ ಶನಿವಾರ (ಅ.9) ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು.

ಹೊರವರ್ತುಲ ರಸ್ತೆಗೆ ಸಂಪರ್ಕ ಕಲ್ಪಿಸುವ ಮಾರ್ಗಗಳಲ್ಲಿ ಅಳವಡಿಸಿದ್ದ ಬಹುತೇಕ ಬ್ಯಾರಿಕೇಡ್‌ಗಳನ್ನು ತೆಗೆಯಲಾಗಿದೆ. ಅಲ್ಲಿ ನಿಯೋಜಿಸಿದ್ದ ಸಂಚಾರ ಪೊಲೀಸರನ್ನು ಕೂಡ ತೆಗೆಯಲಾಗಿದ್ದು, ಈಗ ಎಲ್ಲ ರೀತಿಯ ವಾಹನಗಳು ಸಂಚರಿಸುತ್ತಿವೆ.

ಈ ಕುರಿತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೈದುಲ್ಲಾ ಅಡಾವತ್‌ ಅವರನ್ನು ‘ಪ್ರಜಾವಾಣಿ’ ಹಲವು ಸಲ ಸಂಪರ್ಕಿಸಿದರೂ ಅವರು ಮಾಹಿತಿಗೆ ಲಭ್ಯರಾಗಲಿಲ್ಲ. ‘ಮೇಲಧಿಕಾರಿಗಳ ಸೂಚನೆ ಬಂದಿರುವುದರಿಂದ ಎಲ್ಲ ರೀತಿಯ ವಾಹನಗಳನ್ನು ಹೊರವರ್ತುಲ ರಸ್ತೆಯ ಮೂಲಕ ಬಿಡಲಾಗುತ್ತಿದೆ’ ಎಂದು ಸಂಚಾರ ಪೊಲೀಸರು ಖಚಿತಪಡಿಸಿದ್ದಾರೆ. ಈ ಕುರಿತು ಖುದ್ದು ‘ಪ್ರಜಾವಾಣಿ’ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಎಲ್ಲ ರೀತಿಯ ವಾಹನಗಳು ಸಂಚರಿಸುತ್ತಿರುವುದು ಕಂಡು ಬಂತು.

‘ವಾಹನ ಸಂಚಾರಕ್ಕೆ ಅನುಮತಿ ಕೊಟ್ಟಿರುವುದರಿಂದ ಬಹಳ ಸಂತಸವಾಗಿದೆ. ರೈತರ ಉತ್ಪನ್ನಗಳನ್ನು ಸಾಗಿಸಲು ಅನುಕೂಲವಾಗಲಿದೆ. ಇಲ್ಲವೆಂದರೆ ಸುತ್ತಿ ಬಳಸಿ ಹೋಗಬೇಕಿತ್ತು’ ಎಂದು ರೈತ ಸಂಘದ ಮುಖಂಡ ಸಣ್ಣಕ್ಕಿ ರುದ್ರಪ್ಪ ತಿಳಿಸಿದ್ದಾರೆ.

ಪೊಲೀಸ್‌ ವರಿಷ್ಠಾಧಿಕಾರಿ ವ್ಯತಿರಿಕ್ತ ಹೇಳಿಕೆ

‘ಈ ವಿಷಯ ಈಗಷ್ಟೇ ಗಮನಕ್ಕೆ ಬಂದಿದೆ. ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಎಸ್ಪಿ ಸೈದುಲ್ಲಾ ಅಡಾವತ್‌ ಶುಕ್ರವಾರ ‘ಪ್ರಜಾವಾಣಿ’ಗೆ ತಿಳಿಸಿದ್ದರು. ಆದರೆ, ಶನಿವಾರ ಅವರು ಪ್ರಕಟಣೆ ಹೊರಡಿಸಿದ್ದು, ಅದರಲ್ಲಿ ವ್ಯತಿರಿಕ್ತವಾದ ಹೇಳಿಕೆ ಕೊಟ್ಟಿದ್ದಾರೆ.

‘ಕಳೆದ ವಾರದಿಂದ ಎಂ.ಪಿ. ಪ್ರಕಾಶ್‌ ನಗರದಲ್ಲಿ ರಸ್ತೆ ದುರಸ್ತಿ ನಡೆಯುತ್ತಿದೆ. ಇತ್ತೀಚೆಗೆ ಅದೇ ರಸ್ತೆಯಲ್ಲಿ ಅಪಘಾತ ಕೂಡ ಸಂಭವಿಸಿತ್ತು. ಸಂಚಾರ ದಟ್ಟಣೆ ಇಲ್ಲದ ಸಂದರ್ಭದಲ್ಲಿ ಸ್ಥಳೀಯ ಪೊಲೀಸರು ಅಲ್ಲಿನ ಸ್ಥಿತಿಗತಿ ಆಧರಿಸಿ ಭಾರಿ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಬಹುದು ಎಂದು ಹೇಳಿದ್ದೆ. ಈ ಕುರಿತು ಹೊಸಪೇಟೆ ಪೊಲೀಸ್‌ ಅಧಿಕಾರಿಗಳ ಜೊತೆಗೂ ಚರ್ಚಿಸಿದ್ದೆ’ ಎಂದು ಸ್ಪಷ್ಟನೆ ನೀಡಿದ್ದಾರೆ.

ಎಂ.ಪಿ. ಪ್ರಕಾಶ್‌ ನಗರದಲ್ಲಿ ಹತ್ತು ತಿಂಗಳ ಹಿಂದೆಯೇ ಒಂದು ಭಾಗದ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗಿದೆ. ಇನ್ನೊಂದು ಬದಿಯ ರಸ್ತೆ ಸಂಪೂರ್ಣ ಹಾಳಾಗಿದೆ. ಹೀಗಿದ್ದರೂ ಎರಡು ರಸ್ತೆಗಳಲ್ಲಿ ಯಾವುದೇ ಅಡೆತಡೆಯಿಲ್ಲದೆ ವಾಹನಗಳು ಸಂಚರಿಸುತ್ತಿವೆ. ಅಲ್ಲದೇ ಸರಕು ವಾಹನಗಳ ಸಂಚಾರ ನಿರ್ಬಂಧಿಸಿರುವ ವರ್ತುಲ ರಸ್ತೆ ಹಾಗೂ ಎಂ.ಪಿ. ಪ್ರಕಾಶ್‌ ನಗರದ ರಸ್ತೆಗಳು ಬೇರೆ ಬೇರೆ ಭಾಗಗಳಲ್ಲಿ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT