ಮಂಗಳವಾರ, ಜನವರಿ 21, 2020
19 °C
ಜ. 8ರಂದು ಮೊದಲ ‌ಪ್ರದರ್ಶನ; ಕೊನೆಯ ಹಂತದ ಸಿದ್ಧತೆ

ಹೊಸಪೇಟೆ: ವಿಜಯನಗರ ವೈಭವ ದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ‘ಹಂಪಿ ಉತ್ಸವ’ದ ಪ್ರಯುಕ್ತ ಹಮ್ಮಿಕೊಂಡಿರುವ ವಿಜಯನಗರ ವೈಭವ ಧ್ವನಿ ಮತ್ತು ಬೆಳಕು ಕಾರ್ಯಕ್ರಮಕ್ಕೆ ತಾಲ್ಲೂಕಿನ ಹಂಪಿಯ ಆನೆಸಾಲು ಮಂಟಪದ ಎದುರು ಕೊನೆಯ ಹಂತದ ಸಿದ್ಧತೆ ನಡೆದಿದ್ದು, ಜ. 8ರಂದು ಸಂಜೆ 7ರಿಂದ ರಾತ್ರಿ 9.15ರ ವರೆಗೆ ಮೊದಲ ಪ್ರದರ್ಶನ ನಡೆಯಲಿದೆ.

ವೇದಿಕೆ, ಕಾರ್ಯಕ್ರಮಕ್ಕೆ ಬರುವ ಗಣ್ಯರು, ಸಾರ್ವಜನಿಕರಿಗೆ ಆಸನಗಳ ವ್ಯವಸ್ಥೆ, ಧ್ವನಿ ಮತ್ತು ಬೆಳಕಿಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಆಯುಕ್ತ ಪಿ.ಎನ್‌. ಲೋಕೇಶ್‌, ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಧಿಕಾರಿಗಳ ಸಮ್ಮುಖದಲ್ಲಿ ಸಕಲ ಸಿದ್ಧತೆ ನಡೆಯುತ್ತಿದೆ.

ಕಾರ್ಯಕ್ರಮದ ಪ್ರಯುಕ್ತ ನೂರು ಜನ ಕಲಾವಿದರಿಗೆ ನಗರದ ಸರ್ಕಾರಿ ಜೂನಿಯರ್‌ ಕಾಲೇಜಿನಲ್ಲಿ ತರಬೇತಿ ನೀಡಲಾಗುತ್ತಿದೆ.

ಚಿತ್ರಕಲೆಯಲ್ಲಿ ಗಾಂಧಿ ಜೀವನ

ಉತ್ಸವದ ಪ್ರಯುಕ್ತ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿರುವ ಚಿತ್ರಕಲಾ ಶಿಬಿರದಲ್ಲಿ ಮಹಾತ್ಮ ಗಾಂಧೀಜಿಯವರ ಜೀವನ, ಸಾಧನೆ ಹಾಗೂ ಹಂಪಿಯ ಪರಿಸರ ಅನಾವರಣಗೊಳ್ಳುತ್ತಿದೆ.

ಗಾಂಧೀಜಿ 150ನೇ ಜನ್ಮದಿನದ ನಿಮಿತ್ತ ಕಲಾವಿದರು ಅವರ ಬದುಕಿನ ವಿವಿಧ ಘಟ್ಟಗಳ ಮೇಲೆ ಕಲಾಕೃತಿಗಳಲ್ಲಿ ಬೆಳಕು ಚೆಲ್ಲಲ್ಲಿದ್ದಾರೆ.

ರಾಜಸ್ತಾನ್‌, ಪಂಜಾಬ್, ಮಹಾರಾಷ್ಟ್ರ, ಆಂಧ್ರ ಪ್ರದೇಶ, ಪುದುಚೇರಿ ಹಾಗೂ ಬರೋಡಾದಿಂದ ಬಂದಿರುವ ಕಲಾವಿದರೊಂದಿಗೆ ಸ್ಥಳೀಯರು ಸೇರಿಕೊಂಡು ಕಲಾಕೃತಿ ತಯಾರಿಸುತ್ತಿದ್ದಾರೆ.
ಜ.8ರ ವರೆಗೆ ನಡೆಯುವ ಶಿಬಿರವು ಜ.9ಕ್ಕೆ ಕೊನೆಗೊಳ್ಳಲಿದೆ. ಜ.10, 11ರಂದು ಹಂಪಿ ಉತ್ಸವದಲ್ಲಿ ಕಲಾಕೃತಿಗಳನ್ನು ಸಾರ್ವಜನಿಕರ ವೀಕ್ಷಣೆಗೆ ಪ್ರದರ್ಶನಕ್ಕೆ ಇರಿಸಲಾಗುತ್ತದೆ.

ಪ್ರತಿಕ್ರಿಯಿಸಿ (+)