ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಜೆ ಎಂಬುದೇ ಗೊತ್ತಿಲ್ಲ’: ಅನುದಿನವೂ ನಗು ನಗುತ್ತಾ ದುಡಿಮೆ

Last Updated 2 ಮೇ 2020, 2:04 IST
ಅಕ್ಷರ ಗಾತ್ರ

ಬಳ್ಳಾರಿ: ಸಿರುಗುಪ್ಪ ತಾಲ್ಲೂಕಿನ ಸಿರಿಗೇರಿ ಗ್ರಾಮದ ಜಮೀನಿನಲ್ಲಿ ಶುಕ್ರವಾರ ಮಧ್ಯಾಹ್ನ ಸುಡು ಬಿಸಿಲಿನಲ್ಲೇ ಒಂದೆಡೆ ವೃದ್ಧೆ ಗೌರಮ್ಮ ನವಣೆ ತೆನೆ ಕಟಾವು ಮಾಡಿ ರಾಶಿ ಹಾಕುತ್ತಿದ್ದರೆ, ಅವರ ಮಗ ಆ ತೆನೆಗಳನ್ನು ಚೀಲಕ್ಕೆ ತುಂಬಿಕೊಂಡು ಸಮೀಪದಲ್ಲೇ ಹರಡಿ ಬರುತ್ತಿದ್ದ.

ಗೌರಮ್ಮ ಅವರಂತೆಯೇ ಹತ್ತಾರು ಮಹಿಳೆಯರೂ ತಲೆ ಮೇಲೆ ಬಟ್ಟೆ ಹೊದ್ದುಕೊಂಡು ತೆನೆ ಕಟಾವು ಮಾಡುತ್ತಿದ್ದರು. ಅವರಂತೆಯೇ ವೃದ್ಧೆಯರಿದ್ದರು. ಅವಿವಾಹಿತ ತರುಣಿಯರಿದ್ದರು. ಗೃಹಿಣಿಯರಿದ್ದರು. ಅವರೆಲ್ಲ ಬೆವರಿಳಿಸಿ, ಪರಸ್ಪರ ನಗುನಗುತ್ತಾ ಕೆಲಸ ಮಾಡುತ್ತಿದ್ದರು.

ಜಮೀನಿನ ಮೂಲೆಯಲ್ಲಿ ಅವರ ಮಧ್ಯಾಹ್ನದ ಬುತ್ತಿಯ ಚೀಲಗಳಿದ್ದವು. ಅವರಿಗೆ ಶುಕ್ರವಾರ ಕಾರ್ಮಿಕ ದಿನಾಚರಣೆಯ ರಜೆ ಸಿಕ್ಕಿರಲಿಲ್ಲ. ಅಷ್ಟೇ ಏಕೆ? ಅವರಿಗೆ ಅಂದು ಸಾರ್ವತ್ರಿಕ ರಜೆ ಎಂಬುದೂ ಗೊತ್ತಿರಲಿಲ್ಲ. ರಜೆ ಪಡೆದು ಮನೆಯಲ್ಲೇ ಕುಳಿತರೆ ಅಂದಿನ ತುತ್ತಿನ ಚೀಲ ತುಂಬಿಸಿಕೊಳ್ಳುವುದು ಹೇಗೆ ಎಂಬ ಚಿಂತೆ ಅವರದ್ದು.

ದಿನವೂ ಬೆಳಿಗ್ಗೆ 7ರಿಂದ ಮಧ್ಯಾಹ್ನದ ವರೆಗೂ ಕಟಾವು ಕೆಲಸ ಮಾಡುತ್ತಿರುವ ಅವರು ಶುಕ್ರವಾರವೂ ಎಂದಿನಂತೆ ಕೆಲಸಕ್ಕೆ ಬಂದಿದ್ದರು.
ಸ್ಥಳಕ್ಕೆ ಭೇಟಿ ನೀಡಿದ ‘ಪ್ರಜಾವಾಣಿ‘ಯೊಂದಿಗೆ ಮಾತನಾಡಿದ ಗೌರಮ್ಮ, ‘ನಮಿಗೆ ಕಾರ್ಮಿಕ ದಿನಾಚರಣೆ ಗೊತ್ತಿಲ್ಲ. ಸೋಮೆ. ನಂಗೆ ಐವರು ಹುಡ್ರು (ಮಕ್ಕಳು) ನಾಲ್ಕ್ ಹೆಣ್ಣು, ಒಂದ್‌ ಗಂಡು. ಅಗೋ ಅಲ್ಲವ್ನಲ್ಲಾ. ಅವ ನನ್ನ ಮಗ’ ಎಂದರು.

‘ದಿನ್‌ಗೂಲಿ 150 ರುಪಾಯ್ ಸಾಕಾಗ್ತದಾ ಅನ್ಬ್ಯಾಡಿ. ಮನ್ಯಾಗ್ ಕುಂತ್ರೆ ಏನೂ ಬರ್ದು. ಸಿಗೋದಿಷ್ಟಾದ್ರೂ ಕಾಯಿಪಲ್ಲೆಗಾದ್ರೂ ಬೇಸಾಯ್ತದೆ. ಈ ಕೆಲ್ಸಾನೂ ಹುಡುಕ್ಕೋಂಡೋಗಿ ಮಾಡ್ಬೇಕೀಗ’ ಎಂದು ನಕ್ಕರು.

‘ನಿನ್ನೆ ಊರಲ್‌ ಮಳೆ ಬಂತು. ತೆನೆ ತೋಯ್ದದೆ. ಕಟಾವು ಕಷ್ಟ ಆಗದೆ. ಮ್ಯಾಲೆ ನೆತ್ತಿ ಸುಡ್ತದೆ. ಏನ್‌ ಮಾಡೂನು?’ ಎಂದು ತಮ್ಮ ಅಸಹಾಯಕತೆಯನ್ನೂ ತೋಡಿಕೊಂಡರು.

ಅವರೆಡೆಗೆ ನೋಡುತ್ತಲೇ ಇತರೆ ಮಹಿಳೆಯರೂ ತಮ್ಮ ಪಾಡಿಗೆ ತೆನೆ ಕಟಾವು ಮಾಡುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT