ಗುರುವಾರ , ಏಪ್ರಿಲ್ 15, 2021
27 °C
ಮಹಿಳಾ ದಿನಾಚರಣೆಯಲ್ಲಿ ಹಿರಿಯ ಪತ್ರಕರ್ತೆ ಸಿ.ಜಿ. ಮಂಜುಳಾ

ಮನಃಸ್ಥಿತಿ ಬದಲಾಗದೇ ಸಮಾನತೆ ಇಲ್ಲ: ಸಿ.ಜಿ. ಮಂಜುಳಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯನಗರ (ಹೊಸಪೇಟೆ): ನಗರ ಸೇರಿದಂತೆ ತಾಲ್ಲೂಕಿನಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನ ಸೋಮವಾರ ಆಚರಿಸಲಾಯಿತು. ಅದರ ವಿವರ ಇಂತಿದೆ.

ಹಂಪಿ ಕನ್ನಡ ವಿಶ್ವವಿದ್ಯಾಲಯ:

‘ಜನರ ಮನಃಸ್ಥಿತಿ ಬದಲಾಗುವವರೆಗೂ ಮಹಿಳಾ ಸಮಾನತೆ ಕಷ್ಟ’ ಎಂದು ಹಿರಿಯ ಪರ್ತಕರ್ತೆ ಸಿ.ಜಿ. ಮಂಜುಳಾ ಹೇಳಿದರು.

‘ಮಹಿಳಾ ಅಸಮಾನತೆಯ ವಿಷಯವು ವಿಶ್ವದಲ್ಲೇ ಗಂಭೀರವಾದ ಸಮಸ್ಯೆಯಾಗಿದೆ. ಮಹಿಳೆ ಕುರಿತಂತೆ ಜನರ ಮಾನಸಿಕ ಮತ್ತು ಸಂವೇದನೆಯಲ್ಲಿ ಸಮಸ್ಯೆಯಿದೆ. ಲಿಂಗತ್ವ ಪೂರ್ವಗ್ರಹ ಮೀರಲು ಮಹಿಳೆಯರು ಧ್ವನಿ ಎತ್ತಬೇಕು’ ಎಂದು ತಿಳಿಸಿದರು.

‘ದಿನದಿಂದ ದಿನಕ್ಕೆ ಮಹಿಳೆಯರ ಮೇಲೆ ಅತ್ಯಾಚಾರ, ಕೌಟುಂಬಿಕ ಹಿಂಸೆ, ಹೆಣ್ಣು ಭ್ರೂಣ ಹತ್ಯೆ, ಉದ್ಯೋಗ ಸ್ಥಳದಲ್ಲಿನ ಕಿರುಕುಳ ಸೇರಿದಂತೆ ದೌರ್ಜನ್ಯಗಳು ಹೆಚ್ಚುತ್ತಿವೆ. ರಾಜಕಾರಣ ವ್ಯವಸ್ಥೆಯಲ್ಲಿ ಮಹಿಳೆ ಇಂದಿಗೂ ಮುಖ್ಯವಾಹಿನಿಗೆ ಬರುತ್ತಿಲ್ಲ. ರೈತ ಎಂದಾಕ್ಷಣ ಮಣ್ಣಿನ ಮಗ ಎಂದು ಕರೆಯುತ್ತೇವೆ ಹೊರತಾಗಿ ಮಣ್ಣಿನ ಮಗಳು ಎಂಬುದನ್ನು ಮರೆತಿದ್ದೇವೆ. ಯಾವುದೇ ಪ್ರಮುಖ ನಿರ್ಧಾರ, ನಿರ್ಣಯ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಪುರುಷನೇ ಮುಂದಿರುವನು. ಚರಿತ್ರೆ ಮತ್ತು ಭಾಷೆ ವಿಷಯದಲ್ಲೂ ಪುರುಷ ಮೇಲುಗೈ ಸಾಧಿಸಿದ್ದು, ಮಹಿಳೆ ಹಿಂದುಳಿದಿದ್ದಾಳೆ’ ಎಂದರು.

ಪ್ರಾಧ್ಯಾಪಕ ಶಶಿಕುಮಾರ ಆನ್‌ಲೈನ್‌ನಲ್ಲಿ ಮಾತನಾಡಿದರು. ಕುಲಸಚಿವ ಪ್ರೊ. ಎ.ಸುಬ್ಬಣ್ಣ ರೈ, ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥೆ ಶೈಲಜಾ ಹಿರೇಮಠ ಇದ್ದರು.

ಕನ್ನಡ ಸಾಹಿತ್ಯ ಪರಿಷತ್ತು:

‘ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದರೂ ಸಹ ಇದುವರೆಗೆ ಪೂರ್ಣವಾಗಿ ಸಬಲರಾಗಿಲ್ಲ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಸುನಂದಾ ಹೇಳಿದರು.

ಇಲ್ಲಿನ ವಿಜಯನಗರ ಕಾಲೇಜಿನಲ್ಲಿ ಮಹಿಳಾ ದಿನದ ನಿಮಿತ್ತ ಏರ್ಪಡಿಸಿದ್ದ ಲೇಖಕಿಯರ ಸಮಾವೇಶದಲ್ಲಿ ಮಾತನಾಡಿದ ಅವರು, ‘ದೇಶದಲ್ಲಿ ಮಹಿಳೆಯರ ಸಾಕ್ಷರತೆ ಪ್ರಮಾಣ ಕಡಿಮೆಯಿದೆ. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಮಾತು ಬರೀ ಮಾತಾಗೇ ಉಳಿದಿದೆ. ಮಹಿಳೆಯರು ವೃತ್ತಿ ಬದುಕಿನಲ್ಲಿ ಕಾಣಲಾರದ ಶೋಷಣೆ ಇದೆ. ಅದರ ವಿರುದ್ಧ ಮಹಿಳೆಯರು ದನಿ ಎತ್ತದಿದ್ದರೆ ತುಳಿತಕ್ಕೊಳಗಾಗುತ್ತೇವೆ’ ಎಂದು ಎಚ್ಚರಿಸಿದರು.

ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸಾಲಿ ಸಿದ್ದಯ್ಯ ಸ್ವಾಮಿ, ಹಂಸಾಂಬ ಆಶ್ರಮದ ಪ್ರಮೋದಾಮಯಿ, ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಎತ್ನಳ್ಳಿ ಮಲ್ಲಯ್ಯ, ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷೆ ಅಕ್ಕಮಹಾದೇವಿ, ಕಮಲಾ ದೀಕ್ಷಿತ್, ಕಿರ್ಲೋಸ್ಕರ್ ಮಹಿಳಾ ಕ್ಲಬ್ ನ ಕಮಲಾ ಗುಮಾಸ್ತೆ, ಎಚ್.ಎಂ.ಉಷಾರಾಣಿ, ಮಧುರಚನ್ನ ಶಾಸ್ತ್ರಿ, ಜಂಬುನಾಥ, ನೂರ್ ಜಹಾನ್, ಇದ್ದರು.

ಜನನಿ ಮಹಿಳಾ ಸಬಲೀಕರಣ ಸಮಿತಿ:

‘ಮಹಿಳೆಯರು ಕುಟುಂಬದ ಜವಾಬ್ದಾರಿ ನಿಭಾಯಿಸುತ್ತಲೇ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಂಸ್ಕೃತಿ ಸಂಘ ಉಪಸಮಿತಿಯ ಅಧ್ಯಕ್ಷೆ ಲೀಲಾ ಮಲ್ಲಿಕಾರ್ಜುನ ಹೇಳಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಸುನಂದಾ, ಸಮಿತಿಯ ಅಧ್ಯಕ್ಷೆ ನಾಗವೇಣಿ ಹಂಪಿ, ಕೆರೊಲಿನಾ ಸ್ಮಿತ್‌, ಅಂಬಿಕಾ, ಉಮಾ, ಶ್ರೀದೇವಿ ಇದ್ದರು.

ಬ್ಲಾಕ್‌ ಕಾಂಗ್ರೆಸ್‌ ಸಮಿತಿ:

ಕಾರ್ಯಕ್ರಮದಲ್ಲಿ ಪಕ್ಷದ ಜಿಲ್ಲಾ ಮಹಿಳಾ ಘಟಕದ ಉಪಾಧ್ಯಕ್ಷೆ ಭಾಗ್ಯಲಕ್ಷ್ಮಿ ಭರಾಡೆ, ನನ್ನೆಮ್ಮ, ಆಯೇಷಾ ಅವರನ್ನು ಸನ್ಮಾನಿಸಲಾಯಿತು. ಬ್ಲಾಕ್‌ ಅಧ್ಯಕ್ಷರಾದ ಮೊಹಮ್ಮದ್‌ ಇಮಾಮ್‌ ನಿಯಾಜಿ, ವಿ.ಸೋಮಪ್ಪ, ಮುಖಂಡರಾದ ನಿಂಬಗಲ್ ರಾಮಕೃಷ್ಣ, ಕೆಪಿಸಿಸಿ ರಾಜ್ಯ ಮಹಿಳಾ ಕಾರ್ಯದರ್ಶಿ ಕೆರೊಲಿನ್‌ ಸ್ಮಿತ್‌, ಗೀತಾ ತಿಮ್ಮಪ್ಪ ಯಾದವ್, |ಆಯಿಶಾ ಶೇಕ್, ಸರಸ್ವತಿ ರೇಣುಕಮ್ಮ, ಬಿ. ಮೆಹಬೂಬ್ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು